ನಿರ್ಭಯಾ ಪ್ರಕರಣದ ಆರೋಪಿಗೆ ತಾಯಿಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿರುವ ವಕೀಲ!

Update: 2020-02-20 11:39 GMT

ಹೊಸದಿಲ್ಲಿ: ಮಾರ್ಚ್ 3ರಂದು ಗಲ್ಲಿಗೇರಲಿರುವ ನಿರ್ಭಯಾ ಪ್ರಕರಣದ ಆರೋಪಿಗಳಲ್ಲೊಬ್ಬನಾದ ವಿನಯ್ ಶರ್ಮ ತಿಹಾರ್ ಜೈಲಿನಲ್ಲಿ ತನ್ನ ತಲೆಯನ್ನು ತಾನೇ ಗೋಡೆಗೆ ಬಡಿದುಕೊಂಡಿದ್ದಾನೆ. ಇದೀಗ ಆತ ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ತನ್ನ ತಲೆ, ಬಲಗೈಗಾಗಿರುವ ಗಂಭೀರ ಗಾಯಗಳಿಗಾಗಿ ಹಾಗೂ ಮನೋವ್ಯಾಧಿಗಾಗಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯೊದಗಿಸಬೇಕೆಂದು ಕೋರಿದ್ದಾನೆ.

ಜೈಲು ಅಧಿಕಾರಿಗಳ ಪ್ರಕಾರ 26 ವರ್ಷದ ವಿನಯ್, ರವಿವಾರ ಆಪರಾಹ್ನ ತನ್ನ ತಲೆಯನ್ನು ತಾನೇ ಗೋಡಗೆ ಬಡಿದುಕೊಂಡಿದ್ದ. ಆತನನ್ನು ನೋಡಿದ ಭದ್ರತಾ ಸಿಬ್ಬಂದಿ ತಕ್ಷಣ ಆತನನ್ನು ತಡೆದಿದ್ದಾರೆ, ಆತನಿಗೆ ಸಣ್ಣಪುಟ್ಟ ಗಾಯಗಳುಂಟಾಗಿವೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಆತನಿಗೆ ತನ್ನ ತಾಯಿ ಸಹಿತ ಇತರರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಆತನ ವಕೀಲರು ಹೇಳಿಕೊಂಡಿದ್ದಾರಲ್ಲದೆ, ವಿನಯ್‍ ನನ್ನು ಇನ್‍ ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಆ್ಯಂಡ್ ಅಲಾಯ್ಡ್ ಸಾಯನ್ಸಸ್ ಆಸ್ಪತ್ರೆಗೆ ಸೇರಿಸಬೇಕೆಂದು ಕೋರಿದ್ದಾರೆ.

ಆತ  ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ ಹಾಗೂ ಆತನ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ಇದಕ್ಕೂ ಮುನ್ನ ವಕೀಲರು ತಿಳಿಸಿದ್ದರು.

ಸೋಮವಾರವಷ್ಟೇ ನ್ಯಾಯಾಲಯ  ವಿನಯ್ ಶರ್ಮ, ಅಕ್ಷಯ್ ಠಾಕುರ್, ಪವನ್ ಗುಪ್ತಾ ಹಾಗೂ ಮುಕೇಶ್ ಸಿಂಗ್‍ಗೆ ಮೂರನೇ ಡೆತ್ ವಾರಂಟ್ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News