ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ದಿವ್ಯಾ, ಪಿಂಕಿ, ಸರಿತಾಗೆ ಚಿನ್ನ

Update: 2020-02-20 16:55 GMT

ಹೊಸಸದಿಲ್ಲಿ, ಫೆ.20: ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ವನಿತೆಯರ 68 ಕೆ.ಜಿ. ವಿಭಾಗದಲ್ಲಿ ಭಾರತದ ದಿವ್ಯಾ ಕಕ್ರಾನ್ ಚಿನ್ನ ಗೆದ್ದುಕೊಂಡಿದ್ದಾರೆ.

  ದಿವ್ಯಾ ಭಾರತದ ಪರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ ಭಾರತದ ಎರಡನೇ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ. 2018ರ ಬಿಶ್ಕೇಕ್ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ನವಜೋತ್ ಕೌರ್ ಚಿನ್ನ ಗೆದ್ದುಕೊಂಡಿದ್ದರು. ಆ ಬಳಿಕ ಇದೀಗ ದಿವ್ಯಾ ಈ ಸಾಧನೆ ಮಾಡಿದ್ದಾರೆ.

 ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಕಕ್ರಾನ್ ಅವರು ತವರಿನ ಅಭಿಮಾನಿಗಳ ಮುಂದೆ ಜಪಾನ್, ಮಂಗೋಲಿಯಾ ಮತ್ತು ವಿಯೆಟ್ನಾಂನ ಕುಸ್ತಿಪಟುಗಳನ್ನು ಬಗ್ಗು ಬಡಿದು ಚಿನ್ನದ ನಗೆ ಬೀರಿದರು.

ದಿವ್ಯಾ ಕಕ್ರಾನ್ ಸ್ಪರ್ಧೆಯ ಎಲ್ಲಾ ಹಂತಗಳಲ್ಲೂ ಉತ್ತಮ ಪ್ರದರ್ಶನ ನೀಡಿದರು. ಕೊನೆಯ ಆಖಾಡದಲ್ಲಿ ಜಪಾನ್‌ನ ಜೂನಿಯರ್ ವರ್ಲ್ಡ್‌ಚಾಂಪಿಯನ್ ನಾರುಹಾ ಮ್ಯಾಟ್‌ಸುಯುಕಿ ವಿರುದ್ಧ ಜಯ ಸಾಧಿಸಿ ಚಿನ್ನ ಪಡೆದರು.

ಕಝಖ್‌ಸ್ತಾನದ ಅಲ್ಬಿನಾ ಕೈರ್‌ಗೆಲ್ಡಿನೋವಾ ವಿರುದ್ಧ ಜಯ ಗಳಿಸುವ ಮೂಲಕ ಅಭಿಯಾನ ಆರಂಭಿಸಿದ್ದರು. ಬಳಿಕ ಮಂಗೋಲಿಯಾದ ಡೆಲ್ಗೆರ್‌ಮಾ ಎಂಖ್‌ಸೈಖಾನ್ ವಿರುದ್ಧ ಜಯ ಸಾಧಿಸಿದರು. ಎರಡು ಗೆಲುವಿನ ಬಳಿಕ ದಿವ್ಯಾ ಕಕ್ರಾನ್ ಅವರು ಉಜ್ಬೇಕಿಸ್ತಾನದ ಅರೊದಾ ಎಸ್ಬೆರ್ಗೆನೊವಾಗೆ ಸೋಲುಣಿಸಿ ಫೈನಲ್ ಪ್ರವೇಶಿಸಿದರು. ಪ್ರಶಸ್ತಿಯ ಸುತ್ತಿನಲ್ಲಿ ಜಪಾನ್‌ನ ಮ್ಯಾಟ್‌ಸುಯುಕಿ ಅವರು ದಿವ್ಯಾ ಕಕ್ರಾನ್‌ಗೆ ಶರಣಾದರು.

ಪಿಂಕಿ, ಸರಿತಾಗೆ ಸ್ವರ್ಣ ಸಂಭ್ರಮ

ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ಭಾರತದ ಕುಸ್ತಿ ತಾರೆಯರಾದ ಪಿಂಕಿ ಹಾಗೂ ಸರಿತಾ ಮೋರ್ ಚಿನ್ನದ ಪದಕ ತನ್ನದಾಗಿಸಿಕೊಂಡರು.

ಪಿಂಕಿ 55 ಕೆಜಿ ಫೈನಲ್ ಸ್ಪರ್ಧೆಯಲ್ಲಿ ಮಂಗೋಲಿಯದ ಡಲ್ಗುನ್ ಬೊಲೊರ್ಮಾರನ್ನು 2-1 ಅಂತರದಿಂದ ಮಣಿಸಿದರು. ಟೂರ್ನಿಯ ಇತಿಹಾಸದಲ್ಲಿ ಚಿನ್ನ ಗೆದ್ದ 3ನೇ ಮಹಿಳಾ ಕುಸ್ತಿಪಟು ಎನಿಸಿಕೊಂಡರು.

ಮಹಿಳೆಯರ 59 ಕೆಜಿ ಫೈನಲ್ ಸ್ಪರ್ಧೆಯಲ್ಲಿ ಸರಿತಾ ಮಂಗೋಲಿಯದ ಅಟ್ಲಾಂಟಸೆಟ್‌ಸೆಗ್‌ರನ್ನು 3-2 ಅಂತರದಿಂದ ಸೋಲಿಸಿದರು. ಸರಿತಾ ಮೊದಲೆರಡು ಸ್ಪರ್ಧೆಗಳನ್ನು ತಾಂತ್ರಿಕ ಶ್ರೇಷ್ಠತೆ ಆಧಾರದಲ್ಲಿ ಗೆದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News