ಶಿಶುಗಳಿಗೆ ಜೇನು ತಿನ್ನಿಸುವುದು ಸುರಕ್ಷಿತವೇ?

Update: 2020-02-20 18:30 GMT

ನವಜಾತ ಶಿಶುಗಳಿಗೆ ಜೇನನ್ನು ಉಣಿಸುವುದು ಕೆಲವು ಭಾರತೀಯ ಕುಟುಂಬಗಳಲ್ಲಿ ಸಂಪ್ರದಾಯವಾಗಿದೆ. ಆದರೆ ಶಿಶುಗಳಿಗೆ ಜೇನು ತಿನ್ನಿಸುವುದು ಸುರಕ್ಷಿತವೇ? ಹೊಸ ಬದುಕಿಗೆ ಅದು ಶುಭಶಕುನವಾಗಿದೆ ಎಂದು ಕೆಲವರು ಭಾವಿಸಿದರೆ, ಅದು ಶಿಶುವನ್ನು ಆರೋಗ್ಯಯುತವಾಗಿರಿಸಲು ಒಳ್ಳೆಯ ಮನೆಮದ್ದು ಎಂದು ಕೆಲವರು ಭಾವಿಸಿದ್ದಾರೆ. ಆದರೆ ಶಿಶುಗಳಿಗೆ ಜೇನು ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ಹೆಚ್ಚಿನವರು ಯೋಚಿಸುವುದಿಲ್ಲ. ವಿಜ್ಞಾನದ ಪ್ರಕಾರ ಒಂದು ವರ್ಷಕ್ಕೂ ಕಡಿಮೆ ಪ್ರಾಯದ ಮಗುವಿಗೆ ಜೇನು ತಿನ್ನಿಸುವುದು ಅಪಾಯಕಾರಿಯಾಗಿದೆ, ಏಕೆಂದರೆ ಜೇನಿನಲ್ಲಿರುವ ವಿಶೇಷ ಬ್ಯಾಕ್ಟೀರಿಯಾವೊಂದು ಮಗುವಿನ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಲ್ಲದು.

ಮಾನವ 5,000 ವರ್ಷಗಳಷ್ಟು ಹಿಂದೆಯೇ ಜೇನಿನ ಬಳಕೆಯನ್ನು ಆರಂಭಿಸಿದ್ದ. ಅಂದಿನಿಂದಲೂ ಜೇನು ಅತ್ಯುತ್ತಮ ಆಯುರ್ವೇದ ಔಷಧಿ ಎಂದು ಪರಿಗಣಿಸಲಾಗಿದ್ದು, ಅದು ಸಮೃದ್ಧ ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ಜೇನನ್ನು ಸೇವಿಸುವುದರಿಂದ ಹಲವಾರು ಆರೋಗ್ಯಲಾಭಗಳು ದೊರೆಯುತ್ತವೆ, ಹೀಗಾಗಿ ಆಯುರ್ವೇದದಲ್ಲಿ ಅದನ್ನು ಅತ್ಯಂತ ಉಪಯುಕ್ತ ಆಹಾರ ಎಂದು ಪರಿಗಣಿಸಲಾಗಿದೆ. ಆದರೆ ಒಂದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಗುವಿಗೆ ಜೇನು ತಿನ್ನಿಸುವುದು ಅಪಾಯಕಾರಿಯಾಗಿದೆ. ಈ ಬಗ್ಗೆ ವಿವರಗಳಿಲ್ಲಿವೆ.......

ಜೇನಿನಲ್ಲಿರುವ ‘ಕ್ಲಾಸ್ಟ್ರಿಡಿಯಂ ಅಥವಾ ಕ್ಲಾಸ್ಟ್ರಿಡಿಯಂ ಬಾಟುಲಿನಂ’ ಎಂಬ ವಿಶೇಷ ಬ್ಯಾಕ್ಟೀರಿಯಾ ತ್ವರಿತವಾಗಿ ಅಭಿವೃದ್ಧಿಗೊಳ್ಳುತ್ತದೆ ಮತ್ತು ‘ಬಾಟುಲಿನಂ’ಎಂಬ ವಿಷಕಾರಿ ರಾಸಾಯನಿಕವನ್ನು ಉತ್ಪಾದಿಸುತ್ತದೆ. ಶಿಶುವಿನಲ್ಲಿ ಇನ್ನೂ ರೋಗ ನಿರೋಧಕ ಶಕ್ತಿಯು ಬೆಳೆದಿರುವುದಿಲ್ಲವಾದ್ದರಿಂದ ಅದರ ಶರೀರಕ್ಕೆ ಈ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಈ ಬ್ಯಾಕ್ಟೀರಿಯಾ ಮಗುವಿನ ಜೀರ್ಣಾಂಗವನ್ನು ಪ್ರವೇಶಿಸಿದರೆ ಶರೀರಕ್ಕೆ ಅಪಾರ ಹಾನಿಯನ್ನುಂಟು ಮಾಡುತ್ತದೆ.

ಈ ಬ್ಯಾಕ್ಟೀರಿಯಾ ಶಿಶುವಿನ ಜೀರ್ಣಾಂಗಕ್ಕೆ ಹಾನಿಯನ್ನುಂಟು ಮಾಡಿ ‘ಇನ್‌ಫ್ಯಾಂಟ್ ಬಾಟುಲಿಸಂ’ಎಂಬ ರೋಗಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಈ ರೋಗವು ಎಷ್ಟೊಂದು ಅಪಾಯಕಾರಿಯಾಗಿರುತ್ತದೆ ಎಂದರೆ ಶಿಶುವಿಗೆ ಉಸಿರಾಡುವುದು ಕಷ್ಟವಾಗಬಹುದು ಮತ್ತು ಅದರ ಶರೀರವು ನಿಶ್ಶಕ್ತಗೊಳ್ಳಬಹುದು. ಗಂಭೀರ ಸ್ಥಿತಿಯಲ್ಲಿ ಈ ರೋಗವು ಶಿಶುವಿನ ಜೀವವನ್ನೂ ಬಲಿ ಪಡೆಯಬಹುದು.

ಶಿಶುವು ಈ ರೋಗಕ್ಕೆ ಗುರಿಯಾದರೆ ಮಲಬದ್ಧತೆ ಸಾಮಾನ್ಯವಾಗಿ ಮೊದಲು ಕಂಡು ಬರುವ ಲಕ್ಷಣವಾಗಿದೆ. ಜೊತೆಗೆ ಈ ರೋಗವನ್ನು ಸೂಚಿಸುವ ಇತರ ಲಕ್ಷಣಗಳು ಹೀಗಿವೆ:

♦ ಶಿಶುವು ಸದಾ ಕಾಲ ಅಳುತ್ತಿರುತ್ತದೆ ಮತ್ತು ಪ್ರಯತ್ನಿಸಿದರೂ ಅಳುವನ್ನು ನಿಲ್ಲಿಸುವುದಿಲ್ಲ.

♦ ಶಿಶುವಿನ ಹೊಟ್ಟೆಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ, ಹೀಗಾದಾಗ ಶಿಶುವು ಹೊಟ್ಟೆಯ ಮೇಲೆ ಪದೇ ಪದೇ ಕೈಯನ್ನು ಆಡಿಸುತ್ತಿರುತ್ತದೆ ಮತ್ತು ನಿರಂತರವಾಗಿ ಅಳುತ್ತಿರುತ್ತದೆ.

♦ ಶಿಶುವು ಹಾಲನ್ನು ಕುಡಿಯುವುದಿಲ್ಲ, ತಾಯಿ ಪ್ರಯತ್ನಿಸಿದರೂ ಅದು ಎದೆಹಾಲನ್ನು ಹೀರುವುದಿಲ್ಲ.

♦ ಶಿಶುವಿನ ಶರೀರವು ತ್ವರಿತವಾಗಿ ದುರ್ಬಲಗೊಳ್ಳುತ್ತದೆ ಮತ್ತು ತೂಕವು ನಿರಂತರವಾಗಿ ಇಳಿಯುತ್ತಿರುತ್ತದೆ.

♦ ಗಂಭೀರ ಸ್ಥಿತಿಯಲ್ಲಿ ಶಿಶುವಿನ ಕಣ್ಣುಗುಡ್ಡೆಗಳು ನಿಸ್ತೇಜಗೊಳ್ಳುತ್ತವೆ ಮತ್ತು ಕಣ್ಣುಗಳು ಕುಗ್ಗತೊಡಗುತ್ತವೆ.

♦ ಶಿಶುವು ತೀರ ಆಯಾಸಗೊಂಡಂತೆ ಮತ್ತು ನಿಶ್ಶಕ್ತಗೊಂಡಂತೆ ಕಂಡು ಬರುತ್ತದೆ.

 ಶಿಶುವಿನ ಶರೀರದಲ್ಲಿ ರೋಗನಿರೋಧಕ ಶಕ್ತಿ ಬೆಳೆಯಲು ಒಂದು ವರ್ಷ ಬೇಕಾಗುತ್ತದೆ ಮತ್ತು ಈ ಅವಧಿಯಲ್ಲಿ ತಾಯಿಯ ಹಾಲು ಶಿಶುವನ್ನು ರಕ್ಷಿಸುತ್ತದೆ. ತಾಯಿಯ ಹಾಲು ಶಿಶುವಿನ ಶರೀರಕ್ಕೆ ರೋಗ ನಿರೋಧಕ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾ, ವೈರಸ್ ಮತ್ತು ಸೋಂಕುಗಳ ವಿರುದ್ಧ ಅದಕ್ಕೆ ರಕ್ಷಣೆಯನ್ನು ಒದಗಿಸುತ್ತದೆ. ಇದೇ ಕಾರಣದಿಂದ ಶಿಶುವಿಗೆ ಆರು ತಿಂಗಳು ತುಂಬುವವರೆಗೂ ತಾಯಿಯ ಹಾಲನ್ನು ಮಾತ್ರ ಕುಡಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ತಾಯಿಯ ಹಾಲನ್ನು ಬಿಟ್ಟು ಯಾವುದೇ ಬಾಹ್ಯ ಆಹಾರವನ್ನು ನೀಡುವಂತಿಲ್ಲ. ಒಂದು ವರ್ಷವಾದ ಬಳಿಕ ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯು ಬೆಳೆದಿರುತ್ತದೆ ಮತ್ತು ಅದಕ್ಕೆ ಜೇನನ್ನು ನೀಡಬಹುದಾಗಿದೆ. ಆದರೆ ಮೂರು ವರ್ಷಕ್ಕೂ ಕಡಿಮೆ ಪ್ರಾಯದ ಮಕ್ಕಳಿಗೆ ಅತಿಯಾದ ಪ್ರಮಾಣದಲ್ಲಿ ಜೇನನ್ನು ತಿನ್ನಿಸಬಾರದು.

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ