ಪ್ರಧಾನಿ ಮೋದಿಯ ಗುಣಗಾನ ಅತ್ಯಂತ ಅಸಮಂಜಸ: ನ್ಯಾ.ಅರುಣ್ ಮಿಶ್ರಾಗೆ ನಿವೃತ್ತ ನ್ಯಾಯಾಧೀಶರ ತರಾಟೆ

Update: 2020-02-23 09:44 GMT

ಹೊಸದಿಲ್ಲಿ,ಫೆ.23: ಶನಿವಾರ ಇಲ್ಲಿ ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅರುಣ್ ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭರ್ಜರಿಯಾಗಿ ಹೊಗಳಿದ್ದಕ್ಕೆ ಹಲವಾರು ನಿವೃತ್ತ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೋದಿ,ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬ್ಡೆ ಮತ್ತು ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರ ಭಾಷಣಗಳ ನಂತರ ಆಭಾರ ಮನ್ನಣೆ ಕಾರ್ಯವನ್ನು ನಿರ್ವಹಿಸಿದ್ದ ನ್ಯಾ.ಮಿಶ್ರಾ ಅವರು,ಅಂತರರಾಷ್ಟ್ರೀಯ ಪ್ರಶಂಸೆಗೆ ಪಾತ್ರರಾಗಿರುವ,ದೂರದೃಷ್ಟಿಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಸಂವಿಧಾನದ ಬಾಧ್ಯತೆಗಳಿಗೆ ಬದ್ಧವಾಗಿದೆ ಮತ್ತು ವಿಶ್ವದಲ್ಲಿ ಜವಾಬ್ದಾರಿಯುತ ಹಾಗೂ ಸ್ನೇಹಪ್ರಿಯ ದೇಶವಾಗಿದೆ ಎಂದು ಹೇಳಿದ್ದರು. ಬಹುಮುಖ ಪ್ರತಿಭಾನ್ವಿತ, ಜಾಗತಿಕವಾಗಿ ಚಿಂತನೆಯೊಂದಿಗೆ ಸ್ಥಳೀಯವಾಗಿ ಕಾರ್ಯಾಚರಿಸುವ ಮೋದಿಯವರ ಸ್ಫೂರ್ತಿದಾಯಕ ಭಾಷಣವು ಈ ಸಮ್ಮೇಳನವನ್ನು ಆರಂಭಿಸಲು ಮತ್ತು ಅದರ ಅಜೆಂಡಾವನ್ನು ನಿಗದಿಗೊಳಿಸಲು ಉತ್ತೇಜನವನ್ನು ನೀಡಿದೆ ಎಂದೂ ನ್ಯಾ.ಮಿಶ್ರಾ ಹೊಗಳಿದ್ದರು.

 ಪ್ರಧಾನಿಯವರಿಗೆ ಅಗೌರವವನ್ನು ಸೂಚಿಸುವುದು ತನ್ನ ಉದ್ದೇಶವಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಇಂತಹ ಹೇಳಿಕೆಗಳ ಬಗ್ಗೆ ತಾನು ಅಸಮಾಧಾನವನ್ನು ದಾಖಲಿಸಲೇಬೇಕಿದೆ. ಹಾಲಿ ನ್ಯಾಯಾಧೀಶರೋರ್ವರು ಕಾರ್ಯಾಂಗದ ಮುಖ್ಯಸ್ಥರನ್ನು ಈ ಪರಿಯಾಗಿ ಹೊಗಳುವುದು ಅನುಚಿತವಾಗುತ್ತದೆ. ಇದು ಸಂಪೂರ್ಣವಾಗಿ ಅನಗತ್ಯವಾಗಿತ್ತು ಮತ್ತು ಇಂತಹ ಹೇಳಿಕೆಗಳನ್ನು ನೀಡುವುದು ನ್ಯಾಯಾಂಗದ ಸ್ವತಂತ್ರತೆಯ ಬಗ್ಗೆ ಶಂಕೆಯನ್ನು ಹುಟ್ಟಿಸುತ್ತದೆ. ನ್ಯಾಯಾಧೀಶರು ಇಂತಹ ಹೇಳಿಕೆಗಳನ್ನು ನೀಡುವುದರಿಂದ ದೂರವಿರಬೇಕು ಎಂದು ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಹಾಗೂ ಕಾನೂನು ಆಯೋಗದ ಮಾಜಿ ಅಧ್ಯಕ್ಷ ನ್ಯಾ(ನಿವೃತ್ತ).ಎ.ಪಿ.ಶಾ ಹೇಳಿದರು.

ಇಂತಹ ಹೇಳಿಕೆಗಳು ನ್ಯಾಯಾಂಗ ಮತ್ತು ಸರಕಾರವು ಕಕ್ಷಿಯಾಗಿರುವ ಪ್ರಕರಣಗಳ ವಿಚಾರಣೆಯನ್ನು ಆಗಾಗ್ಗೆ ನಡೆಸಬೇಕಿರುವ ನ್ಯಾಯಾಧೀಶರ ವಸ್ತುನಿಷ್ಠತೆಯ ಬಗ್ಗೆ ತಪ್ಪು ಸಂದೇಶಗಳನ್ನು ರವಾನಿಸಬಲ್ಲವು ಎಂದು ಹೇಳಿದ ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಆರ್.ಎಸ್.ಸೋಧಿ ಅವರು,ಸರಕಾರವು ಕಕ್ಷಿದಾರನಾಗಿದೆ ಮತ್ತು ಕಾನೂನಿನ ಆಡಳಿತದಲ್ಲಿ ಅದು ಇತರ ಕಕ್ಷಿದಾರರಿಗೆ ಸಮನಾಗಿದೆ. ಪ್ರಧಾನಿಯವರ ಬೆನ್ನು ಚಪ್ಪರಿಸುವ ಅಥವಾ ಅಂತಹ ಯಾವುದೇ ಕೆಲಸವನ್ನೆಂದೂ ಮಾಡಬಾರದು. ಹಾಗೆ ಮಾಡಿದರೆ ಮಾನ್ಯ ನ್ಯಾಯಾಧೀಶರು ಪ್ರಕರಣಗಳ ವಿಚಾರಣೆ ನಡೆಸುವಾಗ ವಸ್ತುನಿಷ್ಠರಾಗಿರುವುದಿಲ್ಲ ಎಂಬ ತಪ್ಪು ಸಂದೇಶವನ್ನು ನೀಡುತ್ತದೆ ಎಂದರು.

ನ್ಯಾಯಾಂಗವು ಸ್ವತಂತ್ರ ಸಂಸ್ಥೆಯಾಗಿರುವುದರಿಂದ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಬಾರದು ಎಂಬ ಸಂಪ್ರದಾಯವು ನ್ಯಾಯಾಧೀಶರಲ್ಲಿದೆ ಎಂದ ಅವರು,ನ್ಯಾ.ಮಿಶ್ರಾ ಅವರೂ ಈ ಸಂಪ್ರದಾಯಕ್ಕೆ ಬದ್ಧರಾಗಿರಬೇಕು ಎಂದು ತಾನು ಭಾವಿಸಿದ್ದೇನೆ. ಸಂಪ್ರದಾಯಗಳನ್ನು ಗೌರವಿಸಬೇಕು ಮತ್ತು ಅವುಗಳನ್ನು ಪಾಲಿಸಬೇಕು ಎಂದರು.

ಹಾಲಿ ನ್ಯಾಯಾಧೀಶರೋರ್ವರು ಪ್ರಧಾನಿಯನ್ನು ಈ ರೀತಿಯಲ್ಲಿ ಹೊಗಳುವುದು ಅತ್ಯಂತ ಅಸಮಂಜಸವಾಗಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಪಿ.ಬಿ.ಸಾವಂತ ಅವರು,ಇದು ವರ್ಷದ ಅತ್ಯುತ್ತಮ ತಮಾಷೆಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News