ಮನೆಗಳಿಗೆ ನುಗ್ಗಿ ಪೌರತ್ವ ದಾಖಲೆ ಕೇಳುತ್ತಿರುವ ಎಂಎನ್‌ಎಸ್ ಕಾರ್ಯಕರ್ತರು

Update: 2020-02-23 10:34 GMT

ಪುಣೆ, ಫೆ.23: ಮಹಾರಾಷ್ಟ್ರದ ಪುಣೆ ನಗರದಿಂದ 'ಅನಧಿಕೃತ ವಲಸೆ'ಯವರನ್ನು ಹೊರಗಟ್ಟುವುದಾಗಿ ಹೇಳಿಕೊಂಡಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಕಾರ್ಯಕರ್ತರು ಶನಿವಾರದಿಂದ ಮನೆಮನೆಗೆ ನುಗ್ಗಿ ಪೌರತ್ವ ದಾಖಲೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಪಕ್ಷದ ಕಾರ್ಯಕರ್ತರು ಮೂವರು ಅಕ್ರಮ ವಲಸಿಗರನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಎಂಎನ್‌ಎಸ್ ಪುಣೆ ಘಟಕದ ಅಧ್ಯಕ್ಷ ಅಜಯ್ ಶಿಂಧೆ 'ಇಂಡಿಯಾ ಟುಡೇ' ಟಿವಿ ಜತೆ ಮಾತನಾಡುತ್ತಾ ಬಹಿರಂಗಪಡಿಸಿದ್ದಾರೆ.

"ಅಕ್ರಮ ವಲಸಿಗರನ್ನು ಹೊರಗಟ್ಟುವ ಕಾರ್ಯಾಚರಣೆಯ ಮೊದಲ ಹಂತ ಅರಂಭವಾಗಿದೆ. ಇಂದು ನಾವು ಮೂವರು ಶಂಕಿತ ಅಕ್ರಮ ವಲಸಿಗರನ್ನು ಹಿಡಿದು, ಪುಣೆ ಪೊಲೀಸರಿಗೆ ನೀಡಿದ್ದೇವೆ. ಕೆಲ ಕುಟುಂಬಗಳು ಈ ಪ್ರದೇಶದಿಂದ ತಪ್ಪಿಸಿಕೊಂಡಿದ್ದು, ಅವರಿಗೆ ಶೋಧ ಮುಂದುವರಿದಿದೆ" ಎಂದು ಅವರು ಹೇಳಿದ್ದಾರೆ.

"ಪುಣೆ ಮತ್ತು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಅಕ್ರಮ ವಲಸಿಗರ ಮೇಲೆ ನಾವು ಕಣ್ಣಿಟ್ಟಿದ್ದೇವೆ. ಈ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಬಾಂಗ್ಲಾದೇಶಿ ಕಾರ್ಮಿಕರು ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಇದೆ" ಎಂದು ಅವರು ಹೇಳಿದ್ದಾರೆ.

ಅಕ್ರಮ ವಲಸಿಗರನ್ನು ಹೊರಗಟ್ಟುವ ಈ ಅನಧಿಕೃತ ಕಾರ್ಯಾಚರಣೆಯನ್ನು ಎಂಎನ್‌ಎಸ್ ಕಾರ್ಯಕರ್ತರು ಪುಣೆಯ ಧನಕವಾಡಿ ಪ್ರದೇಶಲ್ಲಿ ಶನಿವಾರ ಆರಂಭಿಸಿದ್ದು, ಕೆಲ ಮನೆಗಳಿಗೆ ನುಗ್ಗಿದ್ದಾರೆ. ಅಚ್ಚರಿಯ ವಿಷಯವೆಂದರೆ ಪುಣೆ ನಗರ ಪೊಲೀಸರು ಎಂಎನ್‌ಎಸ್ ಕಾರ್ಯಕರ್ತರಿಗೆ ಸಾಥ್ ನೀಡಿದ್ದರು. ಆದರೆ ಈ ಕಾರ್ಯಾಚರಣೆ ಕಾನೂನುಬಾಹಿರ ಎಂದು ಡಿಸಿಪಿ ಶಿರೀಶ್ ಸರದೇಶಪಾಂಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News