ಶಾಹೀನ್‌ ಬಾಗ್‌ನಲ್ಲಿ ಪೊಲೀಸರಿಂದ ಅನಗತ್ಯ ರಸ್ತೆ ತಡೆ: ಸುಪ್ರೀಂ ಕೋರ್ಟ್ ಸಂವಾದಕ

Update: 2020-02-23 15:32 GMT

ಹೊಸದಿಲ್ಲಿ, ಫೆ.23: ಶಾಹೀನ್‌ಬಾಗ್‌ನಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಪೊಲೀಸರು ಅನಗತ್ಯವಾಗಿ ರಸ್ತೆ ತಡೆ ನಿರ್ಮಿಸಿದ್ದಾರೆ ಎಂದು ಶಾಹೀನ್‌ಬಾಗ್ ಪ್ರತಿಭಟನಾಕಾರರೊಂದಿಗೆ ಸಂಧಾನ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ನೇಮಿಸಿರುವ ಸಂವಾದಕ ವಜಾಹತ್ ಹಬೀಬುಲ್ಲಾ ಸರ್ವೋಚ್ಛ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ.

ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಪ್ರತಿಭಟನಾಕಾರರ ಮನ ಒಲಿಸಲು ಹಿರಿಯ ನ್ಯಾಯವಾದಿಗಳಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್‌ರನ್ನು ಸುಪ್ರೀಂಕೋರ್ಟ್ ಸಂಧಾನಕಾರರನ್ನಾಗಿ ನೇಮಿಸಿದ್ದು ಸಂವಾದಕರನ್ನಾಗಿ ವಜಾಹತ್ ಹಬೀಬುಲ್ಲಾರನ್ನು ನೇಮಿಸಿತ್ತು. ಇವರು ಪ್ರತಿಭಟನಾಕಾರರೊಂದಿಗೆ ಮೂರು ದಿನ ಮಾತುಕತೆ ನಡೆಸಿದ್ದರು.

ಮಾತುಕತೆಯ ವಿವರದ ಸಹಿತ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ಹಬೀಬುಲ್ಲಾ, ಶಾಹೀನ್‌ಬಾಗ್ ಸುತ್ತ ಐದು ಕಡೆ ಪೊಲೀಸರು ರಸ್ತೆ ತಡೆ ನಿರ್ಮಿಸಿದ್ದಾರೆ. ಇವನ್ನು ತೆರವುಗೊಳಿಸಿದರೆ ಸಂಚಾರ ವ್ಯವಸ್ಥೆ ಸುಗಮವಾಗುತ್ತದೆ. ಅಲ್ಲದೆ ಸರಕಾರ ಪೌರತ್ವ ಕಾಯ್ದೆ , ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಕುರಿತು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಬೇಕು ಎಂದು ಉಲ್ಲೇಖಿಸಿದ್ದಾರೆ.

ಈ ಕುರಿತ ವಿಚಾರಣೆ ಪ್ರಕ್ರಿಯೆಯನ್ನು ಇಬ್ಬರು ಸದಸ್ಯರ ನ್ಯಾಯಪೀಠ ಸೋಮವಾರ(ಫೆ.24) ನಡೆಸಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News