ಒಡಿಶಾ: ಕಾಡಾನೆ ದಾಳಿಗೆ ಮೂವರ ಬಲಿ

Update: 2020-02-23 17:41 GMT

ಭುವನೇಶ್ವರ, ಫೆ.23: ನಾಡಿಗೆ ನುಗ್ಗಿದ ಕಾಡಾನೆ ಬೆಳೆಗಳನ್ನು ನಾಶಗೊಳಿಸಿದ್ದಲ್ಲದೆ ಸ್ಥಳೀಯರ ಮೇಲೆ ದಾಳಿ ನಡೆಸಿದ ಘಟನೆ ಒಡಿಶಾದ ಪುರಿ ಜಿಲ್ಲೆಯಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ. ಆನೆಯ ದಾಳಿಯಿಂದ ಮೂವರು ಮೃತಪಟ್ಟಿದ್ದು ಇತರ ಐದು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

 ಶನಿವಾರ ರಾತ್ರಿ ಪುರಿ ಜಿಲ್ಲೆಯ ದೆಲಾಂಗ್ ಪ್ರದೇಶಕ್ಕೆ ನುಗ್ಗಿದ ಈ ಕಾಡಾನೆ ಅಲ್ಲಿದ್ದ ಬೆಳೆಗಳನ್ನು ನಾಶ ಮಾಡಿದೆ. ರವಿವಾರ ಬೆಳಿಗ್ಗೆ ಗೋಪಿನಾಥಪುರ ಗ್ರಾಮದಲ್ಲಿ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ 60 ವರ್ಷದ ಜುಗಲ್‌ಕಿಶೋರ್ ಭಟ್ ಎಂಬವರನ್ನು ಸೊಂಡಿಲಿನಿಂದ ಎತ್ತಿ ಒಗೆದಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಖುರ್ಡ ಅರಣ್ಯ ವಿಭಾಗದ ಬಳಿಯಿರುವ ರಾಜ್‌ತೇಯಿ ಗ್ರಾಮದ 45 ವರ್ಷದ ಚೈತನ್ ಸಾಹು ಹಾಗೂ ಮತಿಹಾರ್ ಗ್ರಾಮದ 65 ವರ್ಷದ ಮಕಾರ್ ಪಲೇಯ್ ಎಂಬವರನ್ನು ಅಟ್ಟಿಸಿಕೊಂಡು ಹೋಗಿ ಸೊಂಡಿಲಿನಿಂದ ನೆಲಕ್ಕೆ ಅಪ್ಪಳಿಸಿ ಕೊಂದು ಹಾಕಿದೆ ಎಂದು ಪುರಿ ವಿಭಾಗೀಯ ಅರಣ್ಯಾಧಿಕಾರಿ ಸುಷಾಂತ್ ರಾಯ್ ಹೇಳಿದ್ದಾರೆ.

ಈ ಆನೆ ಹಲವು ಮನೆಗಳ ಮೇಲೂ ದಾಳಿ ನಡೆಸಿದ್ದು ಈ ಸಂದರ್ಭ ಐದು ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸರದಲ್ಲಿ ದಾಂಧಲೆ ನಡೆಸಿದ ಬಳಿಕ ಈ ಕಾಡಾನೆ ರಾಜ್‌ತೇಯಿ ಗ್ರಾಮದ ಅಂಚಿನಲ್ಲಿರುವ ಅರಣ್ಯದಲ್ಲಿ ಅಡಗಿಕೊಂಡಿದೆ ಎಂದು ಖುರ್ಡಾದ ಅರಣ್ಯಾಧಿಕಾರಿ ಸುದೀಪ್ ನಾಯಕ್ ಹೇಳಿದ್ದಾರೆ. ಒಡಿಶಾದಲ್ಲಿ ಈ ವರ್ಷದ ಎರಡು ತಿಂಗಳಲ್ಲೇ ಕಾಡಾನೆ ದಾಳಿಯಿಂದ ಮೃತಪಟ್ಟವರ ಸಂಖ್ಯೆ 106ಕ್ಕೇರಿದೆ. ಜನವರಿಯಲ್ಲಿ ಜೈಪುರ ಜಿಲ್ಲೆಯಲ್ಲಿ ನಾಡಿಗಿಳಿದ ಕಾಡಾನೆ ಇಬ್ಬರನ್ನು ತುಳಿದು ಸಾಯಿಸಿದ ಹಿನ್ನೆಲೆಯಲ್ಲಿ ಪರಿಸರದ 6 ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News