ಜಮ್ಮು ಕಾಶ್ಮೀರದಲ್ಲಿ ಅಧಿಕಾರಶಾಹಿ ಆಡಳಿತದಿಂದ ಜನತೆ ಬಳಲಿದ್ದಾರೆ: ಎನ್‌ಪಿಪಿ

Update: 2020-02-23 18:04 GMT

ಜಮ್ಮು, ಫೆ.23: ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಶಾಹಿ ಮತ್ತು ಪ್ರತಿನಿಧಿ ಆಡಳಿತದಿಂದ ಜನತೆ ಬಳಲಿದ್ದು ಇಲ್ಲಿ ಶೀಘ್ರದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆ ಮರುಸ್ಥಾಪನೆಯಾಗಬೇಕು ಎಂದು ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ(ಎನ್‌ಪಿಪಿ) ಒತ್ತಾಯಿಸಿದೆ.

 ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಮಾತ್ರ ಜನರ ಸಮಸ್ಯೆ ಅರ್ಥವಾಗುತ್ತದೆ. ಆದರೆ ಹೊರಗಿನವರಾದ ಅಧಿಕಾರಿಗಳು ಜನರಿಗೆ ಉತ್ತರಿಸುವ ಜವಾಬ್ದಾರಿ ಹೊಂದಿರುವುದಿಲ್ಲ. ಈಗ ಜಮ್ಮು ಕಾಶ್ಮೀರದಲ್ಲಿರುವ ಅಧಿಕಾರಶಾಹಿ ಆಡಳಿತದಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಇಲ್ಲಿರುವ ಪ್ರತಿನಿಧಿ ಆಡಳಿತ(ಬಿಜೆಪಿಯ)ವನ್ನು ಕೊನೆಗೊಳಿಸಿ ಈ ಹಿಂದಿನಂತೆಯೇ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಬೇಕು ಎಂದು ಎನ್‌ಪಿಪಿ ಅಧ್ಯಕ್ಷ ಮತ್ತು ಮಾಜಿ ಸಚಿವ ಹರ್ಷದೇವ್ ಸಿಂಗ್ ಹೇಳಿದರು. ಜಮ್ಮುವಿನ ದೊಮಾನ ಮತ್ತು ಘೊ ಮನ್ಹಸನ್ ಎಂಬಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಲೆಗವರ್ನರ್‌ರ ಸಲಹೆಗಾರರು ಮತ್ತು ಕಾರ್ಯದರ್ಶಿಗಳು ಸಾರ್ವಜನಿಕ ಸಭಾ ಅಭಿಯಾನ ನಡೆಸುತ್ತಿದ್ದರೂ ಜನರ ಮೇಲೆ ಪ್ರಭಾವ ಬೀರಲು ವಿಫಲರಾಗಿದ್ದಾರೆ. ಜನತೆಗೆ ಸ್ಥಳೀಯ ಜನಪ್ರತಿನಿಧಿಗಳ ಅಗತ್ಯವಿದೆ, ಕೇಂದ್ರ ಸಚಿವರ ಭರವಸೆಯಲ್ಲ ಎಂದು ಸಿಂಗ್ ಹೇಳಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳ ವಿವರ, ಅಲ್ಲಿ ಚರ್ಚಿಸಿದ ವಿಷಯ, ಚರ್ಚೆಯ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸರಕಾರದ ವಿವಿಧ ಇಲಾಖೆಗಳ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿ ಜನತೆಯ ಗಮನಕ್ಕೆ ತರುವ ಪ್ರಯತ್ನ ನಡೆಸಬೇಕು ಎಂದವರು ಲೆಫ್ಟಿನೆಂಟ್ ಗವರ್ನರ್ ಜಿಸಿ ಮುರ್ಮುರನ್ನು ಒತ್ತಾಯಿಸಿದರು.

ನಿರಂತರ ವಿದ್ಯುತ್ ಮತ್ತು ನೀರಿನ ಪೂರೈಕೆ, ರಸ್ತೆಗಳ ಅಭಿವೃದ್ಧಿ ಮುಂತಾದ ಜನರ ಬೇಡಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News