×
Ad

ಆಲಿಗಢ: ಹಿಂಸೆಗೆ ತಿರುಗಿದ ಸಿಎಎ ವಿರೋಧಿ ಪ್ರತಿಭಟನೆ; ಅಶ್ರುವಾಯು ಪ್ರಯೋಗ

Update: 2020-02-23 23:44 IST

ಲಕ್ನೊ, ಫೆ.23: ಉತ್ತರಪ್ರದೇಶದ ಆಲಿಗಢದಲ್ಲಿ ರವಿವಾರ ನಡೆದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭ ಕಲ್ಲೆಸೆತ ಮತ್ತು ಬೆಂಕಿ ಹಚ್ಚುವ ಪ್ರಕರಣ ನಡೆದಿದ್ದು ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ.

 ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ಪರ್‌ಕೋಟ್ ಪ್ರದೇಶದಲ್ಲಿ ಗುಂಪೊಂದು ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿ ಭದ್ರತಾ ಪಡೆಗಳತ್ತ ಕಲ್ಲೆಸೆದಿದೆ. ಘಟನೆಯಲ್ಲಿ ಹಲವರಿಗೆ ಗಾಯವಾಗಿದ್ದು ಕಿಡಿಗೇಡಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ . ಮುಹಮ್ಮದ್ ಆಲಿ ರಸ್ತೆಯಲ್ಲಿ ಶನಿವಾರದಿಂದ ಕೆಲವು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದು ಈ ಸ್ಥಳದಲ್ಲಿರುವ ಕೆಲವರು ಭದ್ರತಾ ಪಡೆಗಳತ್ತ ಇಟ್ಟಿಗೆ ಎಸೆಯುತ್ತಿದ್ದಾರೆ ಮತ್ತು ಕಿಡಿಗೇಡಿ ಕೃತ್ಯ ಮುಂದುವರಿಸಿ ದ್ದಾರೆ ಎಂದು ಮೂಲಗಳು ತಿಳಿಸಿವೆ.

 ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿಸಿ ಭೀಮ್ ಸೇನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಹಮ್ಮಿಕೊಂಡ ರ್ಯಾಲಿಯನ್ನು ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ ಅರ್ಧದಲ್ಲೇ ತಡೆದ ಬಳಿಕ ಹಿಂಸಾಚಾರ ಆರಂಭವಾಗಿದೆ. ಈ ಮಧ್ಯೆ, ಪೊಲೀಸರು ತಡೆದ ಕಾರಣ ಭೀಮ್ ಸೇನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಈದ್ಗಾ ಪ್ರದೇಶದತ್ತ ತೆರಳಿ ಅಲ್ಲಿ ಕಳೆದ ಮೂರು ವಾರಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಪ್ರತಿಭಟನಾಕಾರರ ಜೊತೆ ಸೇರಿ ಪ್ರತಿಭಟನೆ ಮುಂದುವರಿಸಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News