ಬಿಜೆಪಿಗೆ ಮಹಾರಾಷ್ಟ್ರ ಸಿಎಂ ತಿರುಗೇಟು ನೀಡಿದ್ದು ಹೀಗೆ..

Update: 2020-02-24 04:31 GMT

ಮುಂಬೈ, ಫೆ.24: ಮಹಾರಾಷ್ಟ್ರದಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯ ಹೆಚ್ಚಿರುವುದನ್ನು ಟೀಕಿಸಿದ ಬಿಜೆಪಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, "ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮೊದಲು ಆ ಪಕ್ಷ ಗಮನ ಹರಿಸಲಿ" ಎಂದು ತಿರುಗೇಟು ನೀಡಿದ್ದಾರೆ.

ದೆಹಲಿ ಮತ್ತು ಉತ್ತರ ಪ್ರದೇಶದ ಅಲೀಗಢದಲ್ಲಿ ಪ್ರತಿಭಟನೆ ಭುಗಿಲೆದ್ದ ಬೆನ್ನಲ್ಲೇ ಮಾಜಿ ಮಿತ್ರಪಕ್ಷದತ್ತ ಮಾತಿನ ಚಾಟಿ ಬೀಸಿದ ಶಿವಸೇನೆ ಮುಖಂಡ, "ನಮ್ಮ ಸರ್ಕಾರದತ್ತ ಬೆಟ್ಟು ಮಾಡುವ ಮುನ್ನ ಬಿಜೆಪಿ ತಮ್ಮ ರಾಜ್ಯಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ" ಎಂದು ಚುಚ್ಚಿದರು.

"ಮಹಿಳೆಯರ ವಿರುದ್ಧದ ಪ್ರತಿ ಅಪರಾಧವೂ ಖಂಡನೀಯ. ಇಂಥ ಘಟನೆ ಮುಂದೆ ನಡೆಯಬಾರದು. ಬಿಜೆಪಿ ನಮ್ಮನ್ನು ಗುರಿ ಮಾಡುವ ಮುನ್ನ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ಬಿಜೆಪಿ ಸರ್ಕಾರ ಇರುವ ಕಡೆಗಳಲ್ಲೆಲ್ಲ ಶಾಹೀನ್‌ಬಾಗ್ ಮಾದರಿಯ ಪ್ರತಿಭಟನೆಗಳು ನಡೆಯುತ್ತಿವೆ. ಉತ್ತರ ಪ್ರದೇಶದಲ್ಲಂತೂ ದೊಂಬಿ ನಡೆಯುತ್ತಿದೆ" ಎಂದು ಟೀಕಿಸಿದರು. ಆದರೆ ಮಹಾರಾಷ್ಟ್ರದಲ್ಲಿ ಇಂಥ ಯಾವ ದೊಂಬಿ ಕೂಡಾ ನಡೆದಿಲ್ಲ ಎಂದು ಠಾಕ್ರೆ ಸಮರ್ಥಿಸಿಕೊಂಡರು.

ಸಿಎಎ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟ ನಡೆಯುತ್ತಿರುವ ಮಧ್ಯೆ ರವಿವಾರ ರಾತ್ರಿ ಈಶಾನ್ಯ ದೆಹಲಿ, ಉತ್ತರ ಪ್ರದೇಶದ ಅಲೀಗಢಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈಶಾನ್ಯ ದೆಹಲಿಯಲ್ಲಿ ಸಿಎಎ ಪರ ಹಾಗೂ ವಿರೋಧಿ ಹೋರಾಟಗಾರರ ನಡುವೆ ಘರ್ಷಣೆ ಸಂಭವಿಸಿದ್ದು, ಅಲೀಗಢದಲ್ಲಿ ಮಹಿಳೆಯರು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಿಎಎ ಹೋರಾಟದ ವೇಳೆ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೆ, ಅಸ್ಸಾಂನಲ್ಲಿ ಐದು ಮಂದಿ ಬಲಿಯಾಗಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News