ಬಹುಸಂಖ್ಯಾತ ವಾದ ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ವಿರುದ್ಧ: ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿ ದೀಪಕ್ ಗುಪ್ತಾ

Update: 2020-02-24 18:22 GMT

ಹೊಸದಿಲ್ಲಿ, ಫೆ. 24: ಭಿನ್ನಮತದ ನಾಶ ಅಥವಾ ನಿರುತ್ತೇಜನ ಪ್ರಜಾಪ್ರಭುತ್ವದ ಮೇಲೆ ಘೋರ ಪರಿಣಾಮ ಬೀರುತ್ತದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗದ ಹೊರತು ಪ್ರತಿಭಟನೆ ಹತ್ತಿಕ್ಕಲು ಸರಕಾರಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಗುಪ್ತಾ ಹೇಳಿದ್ದಾರೆ.

ಅವರು ಹೊಸದಿಲ್ಲಿಯಲ್ಲಿ ‘ಭಿನ್ನಮತ ಹಾಗೂ ಪ್ರಜಾಪ್ರಭುತ್ವ’ ಕುರಿತು ಮಾತನಾಡಿದರು. ಸರಕಾರ ಯಾವಾಗಲೂ ಸರಿಯಾಗಿ ಇರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

‘ಬಹುಸಂಖ್ಯಾತ ವಾದ ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ವಿರೋಧಿಯಾಗಿದೆ’ ಎಂದು ಹೇಳಿದ ಅವರು, ಭಿನ್ನಮತವನ್ನು ದೇಶದ್ರೋಹ ಎಂದು ವ್ಯಾಖ್ಯಾನಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿರುವ ನಡುವೆ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರ ಈ ಹೇಳಿಕೆ ಹೊರ ಬಿದ್ದಿದೆ.

ಸರಕಾರ ಯಾವಾಗಲೂ ಸರಿಯಾಗಿ ಇರಲು ಸಾಧ್ಯವಿಲ್ಲ. ನಾವೆಲ್ಲರೂ ತಪ್ಪು ಮಾಡುತ್ತೇವೆ. ಹಿಂಸಾಚಾರಕ್ಕೆ ತಿರುಗದ ಹೊರತು ಪ್ರತಿಭಟನೆಯನ್ನು ಹತ್ತಿಕ್ಕುವ ಹಕ್ಕು ಸರಕಾರಕ್ಕೆ ಇಲ್ಲ ಎಂದು ಅವರು ಹೇಳಿದರು. ಒಂದು ವೇಳೆ ಪಕ್ಷ ಶೇ. 51 ಮತಗಳನ್ನು ಪಡೆಯಿತು ಎಂದರೆ, ಶೇ. 49 ಜನರು 5 ವರ್ಷದ ವರೆಗೆ ಮಾತನಾಡಬಾರದು ಎಂದು ಅರ್ಥವಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಗೆ ಕೂಡ ಪಾತ್ರವಿದೆ ಎಂದು ಅವರು ತಿಳಿಸಿದರು. ವಿರೋಧಿ ನಿಲುವು ಇದೆ ಎಂದರೆ ದೇಶವನ್ನು ಅಗೌರವಿಸುವುದು ಎಂದು ಅರ್ಥವಲ್ಲ. ಚಿಂತನೆಗಳಲ್ಲಿ ಸಂಘರ್ಷ ಉಂಟಾದಾಗ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಅಲ್ಲದೆ ಪ್ರಶ್ನಿಸುವ ಹಕ್ಕು ಪ್ರಜಾಪ್ರಭುತ್ವದ ಅಂತರ್ಗತ ಭಾಗ ಎಂದು ಅವರು ಹೇಳಿದರು. ಇಂದು ಈ ದೇಶದಲ್ಲಿ ಭಿನ್ನಮತೀಯರನ್ನು ದೇಶದ್ರೋಹಿಗಳಂತೆ ಪರಿಗಣಿಸಲಾಗುತ್ತಿದೆ. ಸರಕಾರ ಹಾಗೂ ದೇಶ ಎರಡು ವಿಭಿನ್ನ ವಿಷಯಗಳು. ದೇಶವಿರೋಧಿ ಪ್ರಕರಣಗಳ ವಿಚಾರಣೆಗಳನ್ನು ನಾವು ಕೈಗೆತ್ತಿಕೊಳ್ಳುವುದಿಲ್ಲ ಎಂದು ಬಾರ್ ಅಸೋಸಿಯೇಶನ್ ನಿರ್ಣಯ ಅಂಗೀಕರಿಸಿರುವುದನ್ನು ನಾನು ನೋಡಿದ್ದೇನೆ. ಇದು ಮಾಡಬಾರದು. ಕಾನೂನು ನೆರವನ್ನು ನಿರಾಕರಿಸಬಾರದು ಎಂದು ಅವರು ಹೇಳಿದರು. ನಿಯಮಗಳನ್ನು ಪ್ರಶ್ನಿಸದ ಹೊರತು ಸಮಾಜ ಅಭಿವೃದ್ಧಿಯಾಗದು ಎಂದು ದೀಪಕ್ ಗುಪ್ತಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News