ಅವಧಿಗೆ ಮೊದಲೇ ಲೋಕಸಭಾ ಚುನಾವಣೆಯ ವಿವಿಪ್ಯಾಟ್ ವಿವರ ನಾಶ: ಸುಪ್ರೀಂ ಗೆ ದೂರು

Update: 2020-02-24 17:30 GMT

ಹೊಸದಿಲ್ಲಿ, ಫೆ.24: ಕಳೆದ ವರ್ಷ ನಡೆದಿದ್ದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ವಿವಿಪ್ಯಾಟ್(ಮತದಾರರ ಪ್ರಾತ್ಯಕ್ಷಿಕೆ ಪತ್ರ) ವಿವರವನ್ನು ಒಂದು ವರ್ಷದ ಮೊದಲೇ ಚುನಾವಣಾ ಆಯೋಗ ನಾಶಗೊಳಿಸಿದೆ ಎಂದು ಎನ್‌ಜಿಒ ಸಂಘಟನೆಗಳು ಸುಪ್ರೀಂಕೋರ್ಟ್‌ಗೆ ದೂರು ನೀಡಿವೆ.

ಚುನಾವಣೆ ನಡೆದ ಬಳಿಕ ಒಂದು ವರ್ಷದವರೆಗೆ ವಿವಿಪ್ಯಾಟ್ ವಿವರ ಸಂರಕ್ಷಿಸಿಡಬೇಕು ಎಂಬ ನಿಯಮವಿದೆ. ಆದರೆ ಇದನ್ನು ಚುನಾವಣಾ ಆಯೋಗ ಉಲ್ಲಂಘಿಸಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಅಸೋಸಿಯೇಷನ್ ಆಫ್ ಡೆಮೊಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ಮತ್ತು ಕಾಮನ್ ಕಾಸ್ ಎಂಬ ಎರಡು ಸರಕಾರೇತರ ಸಂಘಟನೆಗಳು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ವಿವರವನ್ನು ದೂರಿನ ಜತೆ ಉಲ್ಲೇಖಿಸಿವೆ.

 ಆರ್‌ಟಿಐ ಅರ್ಜಿಯಡಿ ಪಡೆದಿರುವ ಮಾಹಿತಿಯಲ್ಲಿ ಆಘಾತಕಾರಿ ವಿಷಯ ಬಯಲಾಗಿದ್ದು ಈ ಕುರಿತು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಎನ್‌ಜಿಒ ಪ್ರತಿನಿಧಿ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಈ ವಿಷಯದ ಬಗ್ಗೆ ಈಗಲೇ ಗಮನ ಹರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರಾದ ಬಿಆರ್ ಗವಾಯ್ ಮತ್ತು ಸೂರ್ಯಕಾಂತ್ ಅವರಿದ್ದ ನ್ಯಾಯಪೀಠ ತಿಳಿಸಿದೆ.

2019ರ ಸಾರ್ವತ್ರಿಕ ಚುನಾವಣೆ ಸಂದರ್ಭ 347 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳ ಸಂಖ್ಯೆ ಹಾಗೂ ಎಣಿಕೆ ಮಾಡಿರುವ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಈ ಹಿಂದೆಯೇ ಚುನಾವಣಾ ಆಯೋಗಕ್ಕೆ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿತ್ತು. ಇದಕ್ಕೆ ಚುನಾವಣಾ ಆಯೋಗ ಇನ್ನೂ ಉತ್ತರಿಸಿಲ್ಲ.

 ಒಟ್ಟು ಮತದಾನದ 10.49 ಪ್ರಮಾಣದಷ್ಟು ವ್ಯತ್ಯಾಸ ಕಂಡುಬಂದಿದೆ. 6 ಕ್ಷೇತ್ರಗಳಲ್ಲಿ ಮತಗಳ ಪ್ರಮಾಣದ ವ್ಯತ್ಯಾಸವು ಗೆಲುವಿನ ಅಂತರಕ್ಕಿಂತಲೂ ಅಧಿಕವಾಗಿದೆ. ಆದ್ದರಿಂದ ಮಾಹಿತಿಯ ನಿಖರ ಪರಿಷ್ಕರಣೆಯ ಬಳಿಕವೇ ಫಲಿತಾಂಶ ಘೋಷಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News