ಭಾರತದೊಂದಿಗೆ 3 ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದ: ಅಹ್ಮದಾಬಾದ್‌ನಲ್ಲಿ ಟ್ರಂಪ್ ಘೋಷಣೆ

Update: 2020-02-24 17:49 GMT

ಅಹ್ಮದಾಬಾದ್, ಫೆ.24: ಭಾರತದೊಂದಿಗೆ 3 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

 ಅಹ್ಮದಾಬಾದ್‌ನಲ್ಲಿ ಆಯೋಜಿಸಲಾಗಿರುವ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದ ಪ್ರಯುಕ್ತ ಭಾರತಕ್ಕೆ 2 ದಿನಗಳ ಭೇಟಿಗಾಗಿ ಸೋಮವಾರ ಆಗಮಿಸಿದ ಟ್ರಂಪ್ , ಅಹ್ಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾರತವು ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರವಾಗಿದೆ. ಉಭಯ ರಾಷ್ಟ್ರಗಳ ಮಧ್ಯೆ ರಕ್ಷಣಾ ಸಹಕಾರ ಮುಂದುವರಿಯಲಿದೆ. ಅಮೆರಿಕವು ವಿಶ್ವದಲ್ಲೇ ಅತ್ಯಂತ ನವೀನ, ಆಧುನಿಕ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುತ್ತಿದ್ದು ಭಾರತಕ್ಕೆ ಅತ್ಯಾಧುನಿಕ ತಂತ್ರಜ್ಞಾನದ 4 ಹೆಲಿಕಾಪ್ಟರ್‌ಗಳ ಸಹಿತ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುವ ಒಪ್ಪಂದಕ್ಕೆ ಮಂಗಳವಾರ ಸಹಿ ಬೀಳಲಿದೆ ಎಂದು ಘೋಷಿಸಿದರು.

ಎಲ್ಲಾ ರಾಷ್ಟ್ರಗಳಿಗೂ ತನ್ನ ಗಡಿಯನ್ನು ನಿಯಂತ್ರಿಸುವ ಮತ್ತು ರಕ್ಷಿಸುವ ಹಕ್ಕು ಇದೆ. ಭಯೋತ್ಪಾದನೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಭಾರತ ಜತೆಗೂಡಿ ಕಾರ್ಯನಿರ್ವಹಿಸುವ ಬದ್ಧತೆಯನ್ನು ಮುಂದುವರಿಸಲಿದೆ ಎಂದು ಟ್ರಂಪ್ ಹೇಳಿದರು. ಅಲ್ಲದೆ ಉಭಯ ದೇಶಗಳೂ ಇಸ್ಲಾಮಿಕ್  ಭಯೋತ್ಪಾದಕತೆಯಿಂದ ಸಾಕಷ್ಟು ನೋವು ಮತ್ತು ನಷ್ಟ ಅನುಭವಿಸಿದ್ದು ಈಗ ಇಸ್ಲಾಮಿಕ್ ಭಯೋತ್ಪಾದಕತೆಯಿಂದ ತಮ್ಮ ನಾಗರಿಕರನ್ನು ರಕ್ಷಿಸಲು ಸಂಘಟಿತವಾಗಿದೆ. ತನ್ನ ಆಡಳಿತದಲ್ಲಿ ಅಮೆರಿಕದ ಸಂಪೂರ್ಣ ಬಲ ಪ್ರಯೋಗಿಸಿ ಐಸಿಸ್ ರಕ್ತಪಿಪಾಸುಗಳ ಸದ್ದಡಗಿಸಲಾಗಿದೆ. ರಾಕ್ಷಸ ಅಲ್ ಬಗ್ದಾದಿಯನ್ನು ಹತ್ಯೆ ಮಾಡಲಾಗಿದೆ ಎಂದು ಟ್ರಂಪ್ ಹೇಳಿದರು.

 ಟ್ರಂಪ್ ಭಾರತ ಭೇಟಿ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಒಪ್ಪಂದಗಳಿಗೆ ಸಹಿ ಬೀಳುವ ನಿರೀಕ್ಷೆಯಿದೆ. ಇದರಲ್ಲಿ 2.4 ಬಿಲಿಯನ್ ಡಾಲರ್ ಮೊತ್ತದ 24 ಎಂಎಚ್-60 ಆರ್ ಸಿಕೋರ್ಸ್ಕಿ ಹೆಲಿಕಾಪ್ಟರ್‌ಗಳು, 6 ಅಪಾಚೆ ಎಎಚ್-64ಇ ದಾಳಿ ಹೆಲಿಕಾಪ್ಟರ್‌ಗಳ ಖರೀದಿ ಸೇರಿದೆ. ಈ ಎರಡೂ ಆಧುನಿಕ ಹೆಲಿಕಾಪ್ಟರ್‌ಗಳ ಖರೀದಿಗೆ ಭದ್ರತೆಗಾಗಿನ ಸಚಿವ ಸಂಪುಟ ಸಮಿತಿ ಕಳೆದ ವಾರ ಅನುಮೋದನೆ ನೀಡಿತ್ತು. ಜೊತೆಗೆ, ಭಾರತೀಯ ನೌಕಾಪಡೆಗೆ 8 ಪಿ81 ಯುದ್ಧವಿಮಾನ ಹಾಗೂ ಹೊಸದಿಲ್ಲಿಗೆ ಪೂರ್ಣಪ್ರಮಾಣದ ಕ್ಷಿಪಣಿ ದಾಳಿಯಿಂದ ರಕ್ಷಣಾ ಕವಚದ ಖರೀದಿಯ ಒಪ್ಪಂದಕ್ಕೂ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ.

ಗಡಿಯಲ್ಲಿರುವ ಉಗ್ರರ ನಿಗ್ರಹ: ಪಾಕ್‌ಗೆ ಕರೆ

ಪಾಕಿಸ್ತಾನದ ಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ಬಗ್ಗೆ ಉಲ್ಲೇಖಿಸಿದ ಟ್ರಂಪ್, ಪಾಕಿಸ್ತಾನದ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಆ ದೇಶದೊಂದಿಗೆ ಅಮೆರಿಕ ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಉಗ್ರರ ನಿಗ್ರಹ ಕಾರ್ಯದಲ್ಲಿ ಈಗ ಪ್ರಗತಿಯ ಲಕ್ಷಣ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News