ಮಹಿಳಾ ಟ್ವೆಂಟಿ-20 ವಿಶ್ವಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಜಯ

Update: 2020-02-24 18:37 GMT

ಪರ್ತ್,ಫೆ.24: ಪೂನಂ ಯಾದವ್(3-18) ಸ್ಪಿನ್ ಮೋಡಿ ಹಾಗೂ ಶೆಫಾಲಿ ವರ್ಮಾ ಮಿಂಚಿನ ಬ್ಯಾಟಿಂಗ್‌ನ ನೆರವಿನಿಂದ ಭಾರತ ತಂಡ ಸೋಮವಾರ ಇಲ್ಲಿ ನಡೆದ ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್ ‘ಎ’ ಗುಂಪಿನ ಆರನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 18 ರನ್‌ಗಳ ರೋಚಕ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ(39, 17 ಎಸೆತ, 2 ಬೌಂಡರಿ,4 ಸಿಕ್ಸರ್) ಹಾಗೂ ಜೆಮಿಮಾ ರೋಡ್ರಿಗಸ್(34, 37 ಎಸೆತ) ಅಗ್ರ ಕ್ರಮಾಂಕದಲ್ಲಿ ಉಪಯುಕ್ತ ಕಾಣಿಕೆ ನೀಡಿದರು. ವೇದಾ ಕೃಷ್ಣಮೂರ್ತಿ(ಔಟಾಗದೆ 20, 11 ಎಸೆತ, 4 ಬೌಂಡರಿ) ಹಾಗೂ ಶಿಖಾ ಪಾಂಡೆ(ಔಟಾಗದೆ 7) 7ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 29 ರನ್ ಸೇರಿಸಿ ತಂಡ ಗೌರವಾರ್ಹ ಮೊತ್ತ ದಾಖಲಿಸಲು ನೆರವಾದರು.

ಗೆಲ್ಲಲು 143 ರನ್ ಗುರಿ ಪಡೆದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 124 ರನ್ ಗಳಿಸಿ ಸೋಲೊಪ್ಪಿಕೊಂಡಿತು. ವಿಕೆಟ್‌ಕೀಪರ್ ನಿಗರ್ ಸುಲ್ತಾನ(35), ಮುರ್ಶಿದಾ ಖತುನ್(30), ಫಾಹಿಮಾ ಖತುನ್(17) ಹಾಗೂ ರುಮಾನಾ ಅಹ್ಮದ್(13)ಎರಡಂಕೆಯ ಸ್ಕೋರ್ ಗಳಿಸಿದರು.

 4 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದ ಪೂನಂ ಯಾದವ್, ಬಾಂಗ್ಲಾದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಶಿಖಾ ಪಾಂಡೆ(2-14) ಹಾಗೂ ಅರುಂಧತಿ ರೆಡ್ಡಿ(2-33)ತಲಾ ಎರಡು ವಿಕೆಟ್ ಪಡೆದು ಪೂನಂಗೆ ಸಾಥ್ ನೀಡಿದರು. ಫೆ.21ರಂದು ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು 17 ರನ್‌ನಿಂದ ಸೋಲಿಸಿ ಶುಭಾರಂಭ ಮಾಡಿದ್ದ ಭಾರತ ಇದೀಗ ಸತತ ಎರಡನೇ ಜಯ ದಾಖಲಿಸಿದೆ. ಫೆ.27ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಮುಂದಿನ ಗ್ರೂಪ್ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್‌ನ್ನು ಮುಖಾಮುಖಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News