ರಣಜಿ ಟ್ರೋಫಿ: ಸೆಮಿಫೈನಲ್‌ನಲ್ಲಿ ಕರ್ನಾಟಕ-ಬಂಗಾಳ ಸೆಣಸಾಟ

Update: 2020-02-24 18:53 GMT

ಟಾಂಗಿ(ಒಡಿಶಾ), ಫೆ.24: ಕರ್ನಾಟಕ, ಬಂಗಾಳ ಹಾಗೂ ಸೌರಾಷ್ಟ್ರ ತಂಡಗಳು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿವೆ.

ಕರ್ನಾಟಕ ತಂಡ ಜಮ್ಮುವಿನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಜಮ್ಮು-ಕಾಶ್ಮೀರ ತಂಡವನ್ನು 168 ರನ್‌ಗಳ ಅಂತರದಿಂದ ಮಣಿಸುವುದರೊಂದಿಗೆ ಸೆಮಿ ಫೈನಲ್ ಪ್ರವೇಶಿಸಿದೆ. ಫೆ.29ರಂದು ಕೋಲ್ಕತಾದ ಈಡನ್‌ಗಾರ್ಡನ್ಸ್ ನಲ್ಲಿ ಆರಂಭವಾಗಲಿರುವ 2ನೇ ಸೆಮಿ ಫೈನಲ್‌ನಲ್ಲಿ ಕರ್ನಾಟಕ ತಂಡ ಬಂಗಾಳ ತಂಡವನ್ನು ಎದುರಿಸಲಿದೆ. ಅದೇ ದಿನ ರಾಜ್‌ಕೋಟ್‌ನಲ್ಲಿ ನಡೆಯುವ ಮೊದಲ ಸೆಮಿ ಫೈನಲ್‌ನಲ್ಲಿ ಗುಜರಾತ್-ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಲಿವೆ.

ಆಫ್ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಏಳು ವಿಕೆಟ್ ಗೊಂಚಲನ್ನು ಕಬಳಿಸಿ ಕರ್ನಾಟಕ ತಂಡ ಜಮ್ಮು-ಕಾಶ್ಮೀರದ ವಿರುದ್ಧ ಭರ್ಜರಿ ಜಯ ಸಾಧಿಸಲು ನೆರವಾದರು. ಇಂದು 4 ವಿಕೆಟ್ ನಷ್ಟಕ್ಕೆ 245 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ಇನ್ನೂ 71 ರನ್ ಸೇರಿಸಿ 316 ರನ್‌ಗೆ ಆಲೌಟಾಯಿತು. ಗೆಲ್ಲಲು 331 ರನ್ ಸವಾಲು ಪಡೆದ ಕಾಶ್ಮೀರ ತಂಡ ಆಫ್ ಸ್ಪಿನ್ನರ್ ಗೌತಮ್(7-54) ಅಮೋಘ ಸ್ಪಿನ್ ಬೌಲಿಂಗ್‌ಗೆ ಕಂಗಾಲಾಗಿ 2ನೇ ಇನಿಂಗ್ಸ್ ನಲ್ಲಿ ಕೇವಲ 163 ರನ್ ಗಳಿಸಿ ಸರ್ವಪತನ ಕಂಡಿತು. ಓಪನರ್ ಶುಭಂ ಖಜುರಿಯಾ(30), ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ಶುಭಂ ಪುಂದಿರ್(31) ಹಾಗೂ ಬಾಲಂಗೋಚಿಗಳಾದ ಅಖಿಬ್ ನಬಿ(26) ಹಾಗೂ ಉಮರ್ ನಝೀರ್(24)ಎರಡಂಕೆಯ ಸ್ಕೋರ್ ಗಳಿಸಿದರು. ಉಳಿದವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಇದಕ್ಕೂ ಮೊದಲು ಕರ್ನಾಟಕವನ್ನು 2ನೇ ಇನಿಂಗ್ಸ್‌ನಲ್ಲಿ 316 ರನ್‌ಗೆ ನಿಯಂತ್ರಿಸಿದ ಜಮ್ಮು-ಕಾಶ್ಮೀರದ ಪರ ಅಬಿದ್ ಮುಷ್ತಾಕ್(6-83)ಆರು ವಿಕೆಟ್ ಗೊಂಚಲು ಪಡೆದು ಗಮನ ಸೆಳೆದರು. ಪರ್ವೇಝ್ ರಸೂಲ್(3-88) ಮೂರು ವಿಕೆಟ್ ಪಡೆದರು. ಬ್ಯಾಟಿಂಗ್ ಮುಂದುವರಿಸಿದ ಕೆ.ಸಿದ್ದಾರ್ಥ್(98)ಕೇವಲ 2 ರನ್‌ನಿಂದ ಶತಕ ವಂಚಿತರಾದರು. ಸಿದ್ದಾರ್ಥ್ ವಿಕೆಟ್ ಬಿದ್ದ ಬಳಿಕ ಕುಸಿತದ ಹಾದಿ ಹಿಡಿದ ಕರ್ನಾಟಕ ನಿರಂತರ ವಿಕೆಟ್ ಕಳೆದುಕೊಂಡಿತು. ಶ್ರೀನಿವಾಸ್ ಶರತ್(34)ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಆತಿಥೇಯ ಒಡಿಶಾ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಬಂಗಾಳ ಸೆಮಿ ಫೈನಲ್ ತಲುಪಿದೆ. ಸೋಮವಾರ ಮಂದ ಬೆಳಕಿನ ಕಾರಣಕ್ಕೆ ಕೇವಲ ಒಂದು ಸೆಶನ್ ಮಾತ್ರ ಆಡಲು ಸಾಧ್ಯವಾಗಿದೆ.

7 ವಿಕೆಟ್‌ಗಳ ನಷ್ಟಕ್ಕೆ 361 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಬಂಗಾಳ 6 ಓವರ್‌ನೊಳಗೆ 12 ರನ್‌ಗೆ ಉಳಿದಿರುವ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಒಡಿಶಾಕ್ಕೆ 456 ರನ್ ಕಠಿಣ ಗುರಿ ನೀಡಿದೆ. ಇದಕ್ಕೆ ಉತ್ತರವಾಗಿ ಒಡಿಶಾ ಮಂದ ಬೆಳಕಿನಿಂದಾಗಿ ಪಂದ್ಯ ಸ್ಥಗಿತಗೊಳ್ಳುವ ಮೊದಲು 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 39 ರನ್ ಗಳಿಸಿತು. ಅಂತಿಮ ದಿನದಾಟದಲ್ಲಿ ಇನ್ನು ಎರಡು ಅವಧಿಯ ಆಟ ಬಾಕಿ ಇರುವಾಗಲೇ ಪಂದ್ಯವನ್ನು ಡ್ರಾಗೊಳಿಸಲು ಉಭಯ ತಂಡಗಳು ನಿರ್ಧರಿಸಿದವು.

ಬಂಗಾಳ ತಂಡ ಮೊದಲ ಇನಿಂಗ್ಸ್‌ನಲ್ಲಿ ನಿರ್ಣಾಯಕ 82 ರನ್ ಮುನ್ನಡೆ ಪಡೆದ ಆಧಾರದಲ್ಲಿ ಸೆಮಿ ಫೈನಲ್ ತಲುಪಿದೆ. ಸೆಮಿ ಫೈನಲ್‌ನಲ್ಲಿ ಕರ್ನಾಟಕ ತಂಡದ ಸವಾಲು ಎದುರಿಸಲಿದೆ.

ಮೊದಲ ಇನಿಂಗ್ಸ್‌ನಲ್ಲಿ 46 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಂಗಾಳ ತಂಡವನ್ನು ಆಧರಿಸಿದ ಅನುಸ್ತುಪ್ ಮಜುಂದಾರ್ ಜೀವನಶ್ರೇಷ್ಠ 157 ರನ್ ಕಲೆ ಹಾಕಿ 332 ರನ್ ಗಳಿಸಲು ನೆರವಾಗಿದ್ದರು. ಈ ಸಾಧನೆಗೆ ‘ಪಂದ್ಯಶ್ರೇಷ್ಠ’ ಗೌರವ ಪಡೆದರು.

ಎರಡು ಬಾರಿ ರಣಜಿ ಚಾಂಪಿಯನ್ ಆಗಿದ್ದ ಬಂಗಾಳ 2017-18ರಲ್ಲಿ ಕೊನೆಯ ಬಾರಿ ರಣಜಿ ಸೆಮಿ ಫೈನಲ್ ತಲುಪಿತ್ತು. ಆದರೆ, ದಿಲ್ಲಿ ವಿರುದ್ಧ ಸೋಲುಂಡಿತ್ತು.

ಸೌರಾಷ್ಟ್ರ ಸೆಮಿ ಫೈನಲ್‌ಗೆ: ಆಂಧ್ರ ವಿರುದ್ಧ ಒಂಗೊಲೆಯಲ್ಲಿ ಸೋಮವಾರ ಕೊನೆಗೊಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಸೌರಾಷ್ಟ್ರ ಸತತ 2ನೇ ಬಾರಿ ಸೆಮಿ ಫೈನಲ್‌ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.

 9 ವಿಕೆಟ್‌ಗಳ ನಷ್ಟಕ್ಕೆ 375 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಪ್ರವಾಸಿ ಸೌರಾಷ್ಟ್ರ ತಂಡ 138 ಓವರ್‌ಗಳಲ್ಲಿ 426 ರನ್‌ಗೆ ಆಲೌಟಾಯಿತು. ಆಂಧ್ರಕ್ಕೆ ಗೆಲ್ಲಲು 710 ರನ್ ಕಠಿಣ ಗುರಿ ನೀಡಿತು. ಮೊದಲ ಇನಿಂಗ್ಸ್ ನಲ್ಲಿ 136 ರನ್‌ಗೆ ಸರ್ವಪತನ ಕಂಡಿದ್ದ ಆಂಧ್ರ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವ ಮೊದಲು 2ನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 149 ರನ್ ಗಳಿಸಿತು. ಸೌರಾಷ್ಟ್ರದ ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಚಿರಾಗ್ ಜಾನಿ ‘ಪಂದ್ಯಶ್ರೇಷ್ಠ’ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News