ಎರಡನೇ ಟ್ವೆಂಟಿ-20 -20: ದಕ್ಷಿಣ ಆಫ್ರಿಕಾಕ್ಕೆ ಜಯ, ಸರಣಿ ಸಮಬಲ

Update: 2020-02-24 18:55 GMT

ಪೋರ್ಟ್ ಎಲಿಝಬೆತ್,ಫೆ.24: ನಾಯಕ ಕ್ವಿಂಟನ್ ಡಿಕಾಕ್ ಸಾಹಸ(70, 47 ಎಸೆತ) ಹಾಗೂ ಲುಂಗಿ ಗಿಡಿ(3-41)ನೇತೃತ್ವದ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ದಾಳಿಯ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 12 ರನ್‌ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 158 ರನ್ ಗಳಿಸಿತು. ಗೆಲ್ಲಲು 159 ರನ್ ಗುರಿ ಪಡೆದ ಆಸ್ಟ್ರೇಲಿಯ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 146 ರನ್ ಕಲೆ ಹಾಕಿತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್(ಔಟಾಗದೆ 67, 56 ಎಸೆತ, 5 ಬೌಂಡರಿ, 1 ಸಿಕ್ಸರ್)ಏಕಾಂಗಿ ಹೋರಾಟ ನೀಡಿದರೂ ಅವರಿಗೆ ತನ್ನ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ವಾರ್ನರ್‌ಗೆ ಮಾಜಿ ನಾಯಕ ಸ್ಟೀವ್ ಸ್ಮಿತ್(29, 26 ಎಸೆತ)ಹೊರತುಪಡಿಸಿ ಬೇರೆ ಯಾವ ಬ್ಯಾಟ್ಸ್‌ಮನ್ ಸಾಥ್ ನೀಡಲಿಲ್ಲ.

ಇದಕ್ಕೂ ಮೊದಲು ಹೆಂಡ್ರಿಕ್ಸ್(14,17 ಎಸೆತ)ಜೊತೆಗೆ ಇನಿಂಗ್ಸ್ ಆರಂಭಿಸಿದ ದ.ಆಫ್ರಿಕಾದ ನಾಯಕ ಡಿಕಾಕ್(70, 47 ಎಸೆತ, 5 ಬೌಂಡರಿ,4 ಸಿಕ್ಸರ್)ಮೊದಲ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಮಾಜಿ ಅನಾಯಕ ಪ್ಲೆಸಿಸ್(15)ಕಳಪೆ ಪ್ರದರ್ಶನ ಮುಂದುವರಿಸಿದರು. ವ್ಯಾನ್‌ಡನ್ ಡುಸ್ಸಾನ್(37, 26 ಎಸೆತ) ಅವರೊಂದಿಗೆ 3ನೇ ವಿಕೆಟ್ ಜೊತೆಯಾಟದಲ್ಲಿ 40 ರನ್ ಸೇರಿಸಿದ ಡಿಕಾಕ್ 15 ಓವರ್ ಅಂತ್ಯಕ್ಕೆ ತಂಡದ ಮೊತ್ತವನ್ನು 121ಕ್ಕೆ ತಲುಪಿಸಿದರು. ಡಿಕಾಕ್ ಔಟಾದ ಬಳಿಕ ಹಿನ್ನಡೆ ಅನುಭವಿಸಿದ ದ.ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಆಸ್ಟ್ರೇಲಿಯದ ಪರ ರಿಚರ್ಡ್ ಸನ್(2-21)ಯಶಸ್ವಿ ಬೌಲರ್ ಎನಿಸಿಕೊಂಡರು. ಕಮಿನ್ಸ್(1-31) ಹಾಗೂ ಝಾಂಪ(1-37)ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News