​ಸಿಎಎ, ಪ್ರಧಾನಿ ಮೋದಿ ವಿರುದ್ಧದ ಜಾನ್ ಒಲಿವರ್ ಕಾರ್ಯಕ್ರಮ ಟ್ವಿಟರ್‌ನಲ್ಲಿ ಟ್ರೆಂಡ್

Update: 2020-02-25 04:23 GMT

ಹೊಸದಿಲ್ಲಿ: ಬ್ರಿಟಿಷ್ ಹಾಸ್ಯನಟ ಜಾನ್ ಒಲಿವರ್ ಭಾರತದಲ್ಲಿ ಟ್ವಿಟ್ಟರ್‌ನಲ್ಲಿ ಸೋಮವಾರ ಟ್ರೆಂಡ್ ಆಗಿರುವುದು ಅಚ್ಚರಿ ಮೂಡಿಸಿದೆ.

ತಮ್ಮ ಸಾಪ್ತಾಹಿಕ ಪ್ರಚಲಿತ ವಿದ್ಯಮಾನಗಳ ಬಗೆಗಿನ ಕಾರ್ಯಕ್ರಮದ ವೀಡಿಯೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ಹರಿದಾಡಿವೆ. ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರು ತಮ್ಮ ಕಾರ್ಯಕ್ರಮದಲ್ಲಿ ಕಟುವಾಗಿ ಟೀಕಿಸಿದ್ದರು.

ಎಚ್‌ಬಿಒ ಚಾನಲ್‌ನಲ್ಲಿ ಪ್ರಸಾರವಾಗುವ ಪ್ರಚಲಿತ ವಿದ್ಯಮಾನ ಬಗೆಗಿನ "ಲಾಸ್ಟ್ ವೀಕ್ ಟು ನೈಟ್" ಕಾರ್ಯಕ್ರಮದಲ್ಲಿ ಒಲಿವರ್ 18 ನಿಮಿಷ ಕಾಲ ಸಿಎಎ ಬಗ್ಗೆ ವಿವರಣೆ ನೀಡಿದ್ದಾರೆ. ಇದು ಮುಸ್ಲಿಂ ವಿರೋಧಿಯಾಗಿದ್ದು, ಕಳೆದ ಎರಡು ತಿಂಗಳಿನಿಂದ ಭಾರತದಾದ್ಯಂತ ಮಾರಕ ಪ್ರತಿಭಟನೆಗಳಿಗೆ ಕಾರಣವಾಗಿದೆ ಎಂದು ಹೇಳಿದ್ದರು.

"ಮೋದಿ ಹಾಗೂ ಅವರ ಪಕ್ಷ ಲಕ್ಷಾಂತರ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುವ ದಿನ ಸನ್ನಿಹಿತವಾಗಿದೆ. ಇದನ್ನು ಜಾಣ್ಮೆಯಿಂದ ಎರಡು ಹೆಜ್ಜೆಯ ದಾರಿಯನ್ನಾಗಿ ಮಾಡಿದ್ದಾರೆ" ಎಂದು ಸಿಎಎ ಮತ್ತು ಎನ್‌ಆರ್‌ಸಿ ನಡುವಿನ ಸಂಬಂಧವನ್ನು ವಿವರಿಸಿದ್ದಾರೆ.
ಈ ಕಾರ್ಯಕ್ರಮ ಬಗೆಗಿನ ವೀಡಿಯೊವನ್ನು ಸಾವಿರಾರು ಮಂದಿ ಟ್ವೀಟ್ ಮಾಡಿದ್ದು, ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ. ಇದನ್ನು ವೀಕ್ಷಿಸುವಂತೆ ಟ್ವಿಟ್ಟರ್‌ನಲ್ಲಿ ಹಲವು ಮಂದಿ ಜನರಿಗೆ ಮನವಿ ಮಾಡಿದ್ದಾರೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News