ದಿಲ್ಲಿ ಹಿಂಸಾಚಾರ: ಸಾವಿನ ಸಂಖ್ಯೆ 13ಕ್ಕೇರಿಕೆ

Update: 2020-02-26 10:24 GMT

ಹೊಸದಿಲ್ಲಿ, ಫೆ. 25: ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳು ಹಾಗೂ ಬೆಂಬಲಿಗರ ನಡುವೆ ನಡೆದ ಘರ್ಷಣೆಯಿಂದ ಸೋಮವಾರ ಭುಗಿಲೆದ್ದ ಹಿಂಸಾಚಾರ ಮಂಗಳವಾರ ಕೂಡ ಮುಂದುವರಿದಿದ್ದು, ದಿಲ್ಲಿ ಪೊಲೀಸ್‌ನ ಹೆಡ್ ಕಾನ್ಸ್‌ಟೆಬಲ್ ಸಹಿತ ಕನಿಷ್ಠ 13ಮಂದಿ ಸಾವನ್ನಪ್ಪಿದ್ದಾರೆ ಹಾಗೂ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಈಶಾನ್ಯ ದಿಲ್ಲಿಯ ಭಜನ್‌ಪುರ, ಚಾಂದ್‌ಬಾಗ್ ಹಾಗೂ ಕಾರವಲ್ ನಗರದಲ್ಲಿ ಬೀದಿಗಿಳಿದ ಸಿಎಎ ಪರ ಬೆಂಬಲಿಗರು ಅವ್ಯಾಹತ ಹಿಂಸಾಚಾರ ಎಸಗಿದ್ದಾರೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಮಧ್ಯೆ ರಾಜಧಾನಿಯಲ್ಲಿ ಹಿಂಸೆಯನ್ನು ನಿಗ್ರಹಿಸಲು ಸೇನೆಗೆ ಕರೆ ನೀಡುವ ಪ್ರಸ್ತಾವವನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿದೆ ಹಾಗೂ ಗಲಭೆ ನಿಯಂತ್ರಣಕ್ಕೆ ಸಾಕಷ್ಟು ಕೇಂದ್ರೀಯ ಪಡೆಗಳು ಹಾಗೂ ಪೊಲೀಸರನ್ನು ನಿಯೋಜಿಸಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಹಿಂಸಾಚಾರ ಭುಗಿಲೆದ್ದ ಪ್ರದೇಶಗಳಲ್ಲಿ 6,000 ಪೊಲೀಸರು ಹಾಗೂ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಚಾಂದ್‌ಬಾಗ್‌ನಲ್ಲಿ ಇಂದು ಸಂಜೆ ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದರು. ಭಜನ್‌ಪುರದಲ್ಲಿ ಸಿಎಎ ಪರ ಹಾಗೂ ವಿರೋಧಿ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ದೊಣ್ಣೆಯಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಇಲ್ಲಿ ಕಡಿಮೆ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದುದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಚಾಂದ್‌ಬಾಗ್‌ನಲ್ಲಿ ಸಾಕಷ್ಟು ಪೊಲೀಸರು ನಿಯೋಜಿಸದೇ ಇರುವುದು ಹಾಗೂ ನಿಯೋಜಿತರಾದ ಪೊಲೀಸರು ಕಾರ್ಯಪ್ರವೃತ್ತರಾಗದೇ ಇದ್ದುದರಿಂದ ಕಲ್ಲು ತೂರಾಟ ನಡೆದು ಕೆಲವು ಅಂಗಡಿಗಳಿಗೆ ಹಾನಿ ಉಂಟಾಗಿವೆ.

 ಸೋಮವಾರ ರಾತ್ರಿ ಬೆಂಕಿಗಾಹುತಿಯಾಗಿರುವ ಕಟ್ಟಡಗಳಿಂದ ಹೊಗೆ ಹೊಮ್ಮುತ್ತಿರುವುದು ಕಂಡು ಬಂದಿದೆ. ದೊಣ್ಣೆ ಹಿಡಿದುಕೊಂಡ ಗಲಭೆಕೋರರು ಗೋಕುಲಪುರಿಯಲ್ಲಿರುವ ಟಯರ್ ಮಾರುಕಟ್ಟೆಗೆ ಬೆಂಕಿ ಹಚ್ಚಿದ್ದಾರೆ ಹಾಗೂ ಕಟ್ಟಡಗಳ ಒಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಯಾವುದೇ ಪ್ರಚೋದನಾಕಾರಿ ಹೇಳಿಕೆ ನೀಡದಂತೆ ಕೇಂದ್ರ ಗೃಹ ಸಚಿವಾಲಯ ವಿನಂತಿಸಿದೆ. ಸಮಾಜ ವಿರೋಧಿಗಳು ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ಉತ್ತರಪ್ರದೇಶ ಹಾಗೂ ಹರ್ಯಾಣದ ದಿಲ್ಲಿ ಗಡಿಯಲ್ಲಿ ನಿಗಾ ವಹಿಸುವಂತೆ ಅದು ಸೂಚಿಸಿದೆ.

ಈಶಾನ್ಯ ದಿಲ್ಲಿಯ ಕಾರವಲ್ ನಗರ್, ಮೌಜ್‌ಪುರ, ಭಜನಪುರ, ವಿಜಯ್ ಪಾರ್ಕ್ ಹಾಗೂ ಯಮುನಾ ವಿಹಾರದಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ.

‘‘ನಮ್ಮಲ್ಲಿ ಸಾಕಷ್ಟು ಭದ್ರತಾ ಪಡೆ ಇದೆ. ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ’’ ಎಂದು ದಿಲ್ಲಿ ಪೊಲೀಸ್‌ನ ಎಂ.ಎಸ್ ರಾಂಧವ ಅವರು ತಿಳಿಸಿದ್ದಾರೆ. ‘‘ಗೃಹ ಸಚಿವಾಲಯ ನಮಗೆ ನಿರಂತರ ಬೆಂಬಲ ನೀಡುತ್ತಿದೆ. ನಮ್ಮಲ್ಲಿ ಸಾಕಷ್ಟು ಭದ್ರತಾ ಪಡೆ ಇದೆ. ಭದ್ರತಾ ಪಡೆ ಕೊರತೆಯನ್ನು ನಾವು ನಿರಾಕರಿಸುತ್ತೇವೆ’’ ಎಂದು ದಿಲ್ಲಿ ಪೊಲೀಸ್ ವರಿಷ್ಠ ಅಮೂಲ್ಯಾ ಪಟ್ನಾಯಕ್ ಹೇಳಿದ್ದಾರೆ.

ಹಿಂಸಾಚಾರದ ಹಿನ್ನೆಲೆಯಲ್ಲಿ ಈಶಾನ್ಯ ದಿಲ್ಲಿ ಜಿಲ್ಲೆಯಲ್ಲಿ ಇಂದು ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿ ದಿಲ್ಲಿ ಸರಕಾರ ಆದೇಶಿಸಿದೆ. ಜಾಫರ್‌ಬಾದ್, ವೌಜ್‌ಪುರ-ಬಾಬರ್‌ಪುರ, ಗೋಕುಲ್‌ಪುರಿ, ಜೋಹ್ರಿ ಎಂಕ್ಲೇವ್ ಹಾಗೂ ಶಿವವಿಹಾರ್ ನಿಲ್ದಾಣಗಳಿಗೆ ಸಂಚರಿಸುವ ದಿಲ್ಲಿ ಮೆಟ್ರೊ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗುಂಪು ಸೇರುವುದನ್ನು ನಿಷೇಧಿಸಲು ಸೆಕ್ಷನ್ 144 ಜಾರಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News