ದಿಲ್ಲಿಯಲ್ಲಿ ಹಿಂಸಾಚಾರ :ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆ

Update: 2020-02-26 10:40 GMT

ಹೊಸದಿಲ್ಲಿ, ಫೆ.26: ಈಶಾನ್ಯ  ದಿಲ್ಲಿಯ  ಹಲವಡೆ ಭುಗಿಲೆದ್ದ  ಹಿಂಸಾಚಾರದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 18 ಕ್ಕೆ ಏರಿದೆ.

ಐದು  ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈಶಾನ್ಯ ದಿಲ್ಲಿಯ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಬುಧವಾರ ಮುಚ್ಚಲ್ಪಟ್ಟಿದೆ.  ಸಿಬಿಎಸ್ಇ ಮಂಡಳಿ ಪರೀಕ್ಷೆಗಳನ್ನು  ಮುಂದೂಡಲಾಗಿದೆ.

"ಶಿಕ್ಷಣ ನಿರ್ದೇಶನಾಲಯ ಮತ್ತು ದಿಲ್ಲಿ ಸರ್ಕಾರದ ಕೋರಿಕೆಯ ಆಧಾರದ ಮೇಲೆ ಮತ್ತು ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪೋಷಕರಿಗೆ ಅನಾನುಕೂಲತೆಯನ್ನು ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ  ಎಂದು ಸಿಬಿಎಸ್ಇ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಾಪಾರ, ರಕ್ಷಣಾ ಮತ್ತು ಇತರ ಒಪ್ಪಂದಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದ ದಿನವೇ  ಹಿಂಸಾಚಾರ  ಕಾಣಿಸಿಕೊಂಡಿದೆ

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಬೆಂಬಲಿಸುವ ಮತ್ತು ಪ್ರತಿಭಟಿಸುವ ಗುಂಪುಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಸೋಮವಾರ ದಿಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಮೂವರು ನಾಗರಿಕರು ಸಾವನ್ನಪ್ಪಿದ್ದರು.

ಕೇಂದ್ರ ಗೃಹ ಸಚಿವಾಲಯವು ಹೊಸ ದಿಲ್ಲಿ ಪೊಲೀಸ್ ವಿಶೇಷ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ) ನಿಯೋಜನೆಗೊಂಡಿರುವ  ಐಪಿಎಸ್ ಅಧಿಕಾರಿ ಎಸ್.ಎನ್.  ಶ್ರೀವಾಸ್ತವ್ ಅವರು ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಮಂಗಳವಾರ ನಡೆದ ಭದ್ರತಾ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಹಿಂಸಾಚಾರವನ್ನು ತಡೆಗೆಟ್ಟುವ ನಿಟ್ಟಿನಲ್ಲಿ ಚರ್ಚಿಸಿದರು.

ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ 11 ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವಿಶೇಷ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ)  ಎಸ್.ಎನ್.  ಶ್ರೀವಾಸ್ತವ್ ತಿಳಿಸಿದ್ದಾರೆ

ರಾಷ್ಟ್ರ ರಾಜಧಾನಿಯ ಹಲವಡೆ  ಹಿಂಸಾಚಾರ ಮುಂದುವರಿದಿದ್ದರೂ ಈಶಾನ್ಯ ದಿಲ್ಲಿಯ  ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು  ಪೊಲೀಸ್ ಮೂಲಗಳು ತಿಳಿಸಿವೆ

"ಹಿಂಸಾಚಾರವನ್ನು ಪ್ರೋತ್ಸಾಹಿಸುವ ಅಥವಾ ಪ್ರಚೋದಿಸುವ ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಗೆ ವಿರುದ್ಧವಾಗಿ ಅಥವಾ ರಾಷ್ಟ್ರ ವಿರೋಧಿ ವರ್ತನೆಗಳನ್ನು ಉತ್ತೇಜಿಸುವ ಯಾವುದೇ ವಿಷಯದ ಬಗ್ಗೆ ಎಲ್ಲಾ ಟಿವಿ ಚಾನೆಲ್‌ಗಳು ವಿಶೇಷವಾಗಿ ಜಾಗರೂಕರಾಗಿರಲು ಸೂಚಿಸಲಾಗಿದೆ ಎಂದು ದಿಲ್ಲಿಯ ಪೊಲೀಸ್ ವಕ್ತಾರ ಮಂದೀಪ್ ರಾಂಧವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News