ಭಾರತದ ಮೂಲನಿವಾಸಿಗಳಲ್ಲಿ ಭೀತಿ ಹುಟ್ಟಿಸುವ ಯತ್ನ: ದಿಲ್ಲಿ ಹಿಂಸಾಚಾರ ಬಗ್ಗೆ ಹಾಲಿವುಡ್ ನಟ ಕ್ಯುಸ್ಯಾಕ್

Update: 2020-02-27 05:55 GMT
ಫೋಟೊ ಕೃಪೆ: The Quint

ಹೊಸದಿಲ್ಲಿ, ಫೆ.26: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿರುವ ಬಾಲಿವುಡ್ ಸೆಲೆಬ್ರೆಟರಿಗಳ ಜೊತೆ ಸೇರಿರುವ ಹಾಲಿವುಡ್ ನಟ ಜಾನ್ ಕ್ಯುಸ್ಯಾಕ್, ಹಿಂಸಾಚಾರದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬನ ವೀಡಿಯೊದ ಜೊತೆ ‘ಇದು ನಿರಂಕುಶ ಪ್ರಭುತ್ವ. ನಾವೇ ಸರಕಾರ ಎಂದು ಟ್ರಂಪ್ ಮತ್ತು ಮೋದಿ ಘೋಷಿಸಿಕೊಂಡ ಸಮಯದಲ್ಲೇ ದಿಲ್ಲಿ ಹೊತ್ತಿ ಉರಿದಿದೆ. ಅನಾಗರಿಕವಾದ ಕಾರ್ಯಾಚರಣೆ ಮತ್ತಷ್ಟು ವ್ಯಾಪಿಸಿದೆ. ಭಾರತದ ಮೂಲ ನಿವಾಸಿಗಳ ತೇಜೋವಧೆ ಮತ್ತು ಅವರಲ್ಲಿ ಭೀತಿ ಹುಟ್ಟಿಸುವುದನ್ನು ಹೊರತುಪಡಿಸಿ ಬೇರೆ ಯಾವ ಗುರಿಯೂ ಇಲ್ಲ. ಕಳೆದ ವಾರ, ಈ ರಾತ್ರಿ ಭಾರತದಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಿ’ ಎಂದು ಟ್ವೀಟ್ ಮಾಡಿದ್ದಾರೆ.

ಇದರ ಜೊತೆಗೆ, ದಿಲ್ಲಿ ಹಿಂಸಾಚಾರದ ಕುರಿತು ಹಲವು ಪತ್ರಕರ್ತರು ಮತ್ತು ಸಂಘಟನೆಗಳು ಮಾಡಿರುವ ಟ್ವೀಟ್‌ಗಳನ್ನು ಕ್ಯುಸ್ಯಾಕ್ ಶೇರ್ ಮಾಡಿಕೊಂಡಿದ್ದಾರೆ. ಜಾನ್ ಕ್ಯುಸ್ಯಾಕ್ 2019ರಲ್ಲಿ ಜಾಮಿಯಾ ಮಿಲ್ಲಿಯಾ ವಿವಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. “ಮೋದಿಯ ಅಮಾನುಷ ಕ್ರಮದಿಂದ ಘಾಸಿಗೊಳಗಾದ ನಮ್ಮ ಮುಸ್ಲಿಂ ಸಹೋದರರು, ಸಹೋದರಿಯರು ಮತ್ತು ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ” ಎಂದು ಟ್ವೀಟ್ ಮಾಡಿದ್ದರು.

ದಿಲ್ಲಿ ಹಿಂಸಾಚಾರವನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಹಿಂದಿ ಸಿನೆಮ ನಿರ್ಮಾಪಕ ಅನುರಾಗ್ ಕಶ್ಯಪ್, ‘ಒಂದು ವಿಷಯವಂತೂ ಸ್ಪಷ್ಟವಾಗಿದೆ. ಪೌರತ್ವ ಕಾಯ್ದೆ ಪರ ಎಂದರೆ ಮುಸ್ಲಿಮ್ ವಿರೋಧಿ ಎಂದರ್ಥ’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News