ಬೆಂಗಳೂರು: ನಟ ಯಶ್ ಹತ್ಯೆಗೆ ಸಂಚು ರೂಪಿಸಿದ್ದ ರೌಡಿಶೀಟರ್ ಪೊಲೀಸರ ಎನ್‌ಕೌಂಟರ್‌ಗೆ ಬಲಿ

Update: 2020-02-27 15:59 GMT

ಬೆಂಗಳೂರು, ಫೆ.27: ನಟ ಯಶ್ ಹತ್ಯೆಗೆ ಸಂಚು ರೂಪಿಸಿದ್ದ ರೌಡಿಶೀಟರ್ ಸ್ಲಂ ಭರತ್ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಂದ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.

ಪೊಲೀಸರ ಎನ್‌ಕೌಂಟರ್‌ನಿಂದ ಗುಂಡೇಟು ತಗುಲಿದ್ದ ಭರತ್ ನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಕಳೆದ ಕೆಲವು ತಿಂಗಳುಗಳ ಹಿಂದೆ ನಟ ಯಶ್ ಹತ್ಯೆಗೆ ಸಹಚರರ ಜತೆಗೂಡಿ ಸಂಚು ರೂಪಿಸಿದ್ದ. ಅದರಂತೆ ಹತ್ಯೆಗೆ ತೆರಳುತ್ತಿದ್ದ ವೇಳೆ ಸಿಸಿಬಿ ಪೊಲೀಸರು ಆತನನ್ನು ಸೆರೆಹಿಡಿದಿದ್ದರು. ಇದರಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಕೌಂಟರ್ ನಡೆದದ್ದು ಹೇಗೆ?: ಯಶ್ ಹತ್ಯೆಗೆ ಸಂಚು ರೂಪಿಸಿದ್ದ ಭರತ್ ಉತ್ತರ ಪ್ರದೇಶದಲ್ಲಿದ್ದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು, ಆತನನ್ನು ಬಂಧಿಸಿದ್ದರು. ಬಂಧಿಯಾಗಿದ್ದ ಭರತ್‌ನನ್ನು ಎರಡು ವಾಹನಗಳಲ್ಲಿ ಕರೆದೊಯ್ಯುತ್ತಿದ್ದ ವೇಳೆ ಆತನ ಸಹಚರರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಸಹಚರರು ಹೊಡೆದ ಗುಂಡು ಪೊಲೀಸ್ ವಾಹನಕ್ಕೆ ತಗುಲಿದೆ. ಬಳಿಕ, ಭರತ್ ಕಾರಿನಿಂದ ಪರಾರಿಯಾಗಿದ್ದಾನೆ. ಗುರುವಾರ ನಸುಕಿನ 5 ಗಂಟೆಗೆ ವಯರ್ ಲೆಸ್ ಮೂಲಕ ಸಿಕ್ಕಿದ ಮಾಹಿತಿ ಪ್ರಕಾರ ಹೆಸರುಘಟ್ಟ ಬಳಿ ಕಾರು ಗುರುತಿಸಲಾಗಿದೆ. ಬೆನ್ನಟ್ಟಿದ ರಾಜಗೋಪಾಲ ನಗರ ಠಾಣೆ ಇನ್‌ಸ್ಪೆಕ್ಟರ್, ಕಾರನ್ನು ಅಡ್ಡಗಟ್ಟಿದಾಗ ಭರತ್ ಮೂರು ಸುತ್ತು ಗುಂಡು ಹಾರಿಸಿದ್ದಾನೆ.

ಒಂದು ಗುಂಡು ಇನ್‌ಸ್ಪೆಕ್ಟರ್ ಹೊಟ್ಟೆಗೆ ತಗುಲಿದೆ. ಆದರೆ, ಅವರು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಯಾವುದೇ ಅಪಾಯ ಆಗಿಲ್ಲ. ಎರಡು ಗುಂಡು ಕಾರುಗಳ ಮೇಲೆ ಬಿದ್ದಿದೆ. ಇನ್ನೊಬ್ಬ ಇನ್‌ಸ್ಪೆಕ್ಟರ್ ಒಂದು ಗುಂಡು ಗಾಳಿಯಲ್ಲಿ ಹಾರಿಸಿ, ಎರಡು ಗುಂಡುಗಳನ್ನು ಭರತ್ ಮೇಲೆ ಹಾರಿಸಿದ್ದಾರೆ. ಗುಂಡು ತಗುಲಿದ ಭರತ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ನಟ ಯಶ್ ಹತ್ಯೆಗೆ ಸಂಚು: ಭರತ್‌ನ ಸಹಚರರಾದ ನಿತ್ಯಾನಂದ, ಮಧು, ಪೃಥ್ವಿ, ನಿತೇಶ್ ಸೇರಿ ನಟ ಯಶ್ ಹತ್ಯೆ ಮಾಡುವ ಸಲುವಾಗಿ ಮಾ. 7, 2019 ರಂದು ನಗರದ ಶೇಷಾದ್ರಿಪುರಂನ ಬಿಡಿಎ ಕಚೇರಿ ಬಳಿ ಹತ್ಯೆಗೆ ತಯಾರಾಗಿದ್ದರು. ಈ ವಿಚಾರ ತಿಳಿದ ಕೂಡಲೇ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟಿದ್ದರು.

ಸ್ಲಂ ಭರತ್ ಕಡೆಯಿಂದ ನಮಗೆ ಆದೇಶ ಬಂದಿದ್ದಷ್ಟೇ ಗೊತ್ತು ಎಂದು ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಆಗ ಸಿಸಿಬಿ ಪೊಲೀಸರು ಭರತ್‌ನನ್ನು ವಿಚಾರಣೆಗೊಳಪಡಿಸಿ ಜೈಲಿಗಟ್ಟಿದ್ದರು. ನಂತರ ಮತ್ತೆ ಜಾಮೀನು ಮೇಲೆ ಹೊರ ಬಂದು ತನ್ನ ಹಳೆ ಚಾಳಿ ಮುಂದುವರೆಸಿದ್ದ.

ಪ್ರಕರಣ ದಾಖಲು: ಸ್ಲಂ ಭರತ್ನ ವಿರುದ್ಧ ವಿವಿಧ ಹಿನ್ನೆಲೆಯಲ್ಲಿ ಹಲವು ಠಾಣೆಗಳಲ್ಲಿ ಪ್ರಕರಣಗಳಿವೆ. ರಾಜಗೋಪಾಲನಗರ ಠಾಣೆ, ನಂದಿನಿ ಲೇಔಟ್ ಠಾಣೆ, ಪೀಣ್ಯ ಪೊಲೀಸ್ ಠಾಣೆ, ಸೋಲದೇವನಹಳ್ಳಿ ಪೊಲೀಸ್ ಠಾಣೆ, ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ಡಕಾಯಿತಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಶಸ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಎಲ್ಲ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸ್ಲಂ ಭರತ್ ಮತ್ತು ಈತನ ಸಹಚರರ ಪತ್ತೆಗಾಗಿ 3 ತಂಡಗಳನ್ನು ರಚಿಸಲಾಗಿತ್ತು. ಆರೋಪಿ ಭರತ್ನ ಮೇಲೆ ರಾಜಗೋಪಾಲನಗರ ಠಾಣೆ ಸೇರಿದಂತೆ ಆರು ಪೊಲೀಸ್ ಠಾಣೆಗಳಲ್ಲಿ ರೌಡಿ ಪಟ್ಟಿಯಲ್ಲಿ ಈತನ ಹೆಸರಿದೆ. ಆರೋಪಿ ಸ್ಲಂ ಭರತ್ ಮತ್ತು ಈತನ ಸಹಚರರ ಮೇಲೆ ಬೆಂಗಳೂರು ನಗರ ಮತ್ತು ಇತರೆ ಪೊಲೀಸ್ ಠಾಣೆಗಳಲ್ಲಿ 41 ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News