ಈಶಾನ್ಯ ದಿಲ್ಲಿ: ಎಲ್ಲವನ್ನೂ ಕಳೆದುಕೊಂಡ 40 ಮುಸ್ಲಿಂ ಕುಟುಂಬಗಳಿಗೆ ಆಶ್ರಯ ನೀಡಿದ ಹಿಂದೂಗಳು

Update: 2020-02-27 11:05 GMT

ಹೊಸದಿಲ್ಲಿ: ಮೂರು ದಿನಗಳಿಂದ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾದ ಈಶಾನ್ಯ ದಿಲ್ಲಿಯ ಅಶೋಕ್ ನಗರ್ ಪ್ರದೇಶದಲ್ಲಿ ತಮ್ಮ ಮನೆಮಠ ಕಳೆದುಕೊಂಡ ಸುಮಾರು 40 ಮುಸ್ಲಿಂ ಕುಟುಂಬಗಳು ತಮ್ಮ ಹಿಂದು ನೆರೆಹೊರೆಯವರ ಮನೆಗಳಲ್ಲಿ ಆಶ್ರಯ ಪಡೆದಿವೆ. 

ಉದ್ರಿಕ್ತ ಗುಂಪೊಂದು ಈ ಪ್ರದೇಶದಲ್ಲಿನ ಹಲವು ಮನೆಗಳು ಹಾಗೂ ಅಂಗಡಿಗಳಿಗೆ ಬೆಂಕಿಯಿಕ್ಕಿದಾಗ ಸಂತ್ರಸ್ತರಿಗೆ ಅವರ ನೆರೆಹೊರೆಯವರೇ ಆಶ್ರಯದಾತರಾಗಿ ಮಾನವೀಯತೆ ಮೆರೆದರು.

ಸುಮಾರು 1000 ಮಂದಿಯಿದ್ದ ಗುಂಪು ಬಡೀ ಮಸ್ಜಿದ್ ಸಮೀಪದ ಈ ಕಾಲನಿಗೆ ಮಂಗಳವಾರ ಅಪರಾಹ್ನ ನುಗ್ಗಿತ್ತಲ್ಲದೆ ಮಸೀದಿಯಲ್ಲೂ ದಾಂಧಲೆ ನಡೆಸಿ ಕೇಸರಿ ಧ್ವಜ ಹಾರಿಸಿತ್ತು. ನಂತರ ಅಲ್ಲಿನ ಹಲವಾರು ಮಳಿಗೆಗಳಿಗೆ ಬೆಂಕಿ ಹಚ್ಚಿದ ಗುಂಪು ಅ ಪ್ರದೇಶದ ಮುಸ್ಲಿಂ ಮನೆಗಳಿಗೆ ನುಗ್ಗಿ ಎಲ್ಲವನ್ನೂ ಲೂಟಿಗೈಯ್ಯಿತು ಎಂದು ಸ್ಥಳೀಯ ನಿವಾಸಿ ಮುಹಮ್ಮದ್ ರಶೀದ್ ಹೇಳುತ್ತಾರೆ.

"ನಮಗಿನ್ನು ರಸ್ತೆಯೇ ಗತಿ ಎಂದು ತಿಳಿದಾಗ ನಮ್ಮ ಹಿಂದು ನೆರೆಹೊರೆಯವರು ನಮಗೆ ಆಶ್ರಯ ನೀಡಿದರು. ನಾವು ಈ ಪ್ರದೇಶದಲ್ಲಿ ಕಳೆದ 25 ವರ್ಷಗಳಿಂದ ವಾಸವಾಗಿದ್ದು ಒಂದೇ ಒಂದು ಬಾರಿ ಕೂಡ ನಮ್ಮ ಹಿಂದು ನೆರೆಹೊರೆಯವರ ಜತೆ ಯಾವುದೇ ಜಗಳವಾಗಿಲ್ಲ" ಎಂದು ಅವರು  ಹೇಳುತ್ತಾರೆ.

"ಏನೇ ಆದರೂ ನಾವು ಅವರ ಜತೆ ನಿಲ್ಲುತ್ತೇವೆ, ಇಂತಹ ಕಷ್ಟಕಾಲದಲ್ಲಿ ಅವರನ್ನು ಏಕಾಂಗಿಯಾಗಿಸುವುದಿಲ್ಲ'' ಎಂದು ಮುಸ್ಲಿಂ ಕುಟುಂಬಗಳಿಗೆ ಆಶ್ರಯ ನೀಡಿರುವ ವ್ಯಕ್ತಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News