'ನಮ್ಮ ಪುತ್ರನ ಸಾವಿಗೆ ಆಪ್ ನಾಯಕ ತಾಹಿರ್ ಕಾರಣ': ಹತ್ಯೆಗೀಡಾದ ಗುಪ್ತಚರ ಅಧಿಕಾರಿಯ ತಂದೆಯ ಆರೋಪ

Update: 2020-03-08 10:54 GMT
ಕೌನ್ಸಿಲರ್ ತಾಹಿರ್ ಹುಸೈನ್ 

ಹೊಸದಿಲ್ಲಿ : ದಿಲ್ಲಿ ಹಿಂಸಾಚಾರದ ವೇಳೆ ದುಷ್ಕರ್ಮಿಗಳಿಂದ ಹತ್ಯೆಗೈಯ್ಯಲ್ಪಟ್ಟ ಗುಪ್ತಚರ ಇಲಾಖೆ ಸಿಬ್ಬಂದಿ ಅಂಕಿತ್ ಶರ್ಮ ಅವರ ಕುಟುಂಬ ಶರ್ಮ ಸಾವಿಗೆ ಮುಸ್ತಫಾಬಾದ್ ನ ನೆಹರೂ ವಿಹಾರ್ ಪ್ರದೇಶದ ಆಪ್ ಕೌನ್ಸಿಲರ್ ಹಾಜಿ ತಾಹಿರ್ ಹುಸೈನ್ ಕಾರಣ ಎಂದು ಆರೋಪಿಸಿದೆ.

ಶರ್ಮ ಅವರ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿತ್ತು. ಅವರ ಮೇಲೆ ದಾಳಿಗೈದು ಚರಂಡಿಗೆ ನೂಕಲಾಗಿದೆ ಎಂದು ಆರೋಪಿಸಲಾಗಿದೆ. ಅವರ ದೇಹದಲ್ಲಿ ಗುಂಡೇಟಿನ ಗುರುತುಗಳಿವೆ ಎಂದು ಹೇಳಲಾಗಿದೆ.

ಖಜೂರಿ ಖಸ್ ಪ್ರದೇಶದ ನಿವಾಸಿಯಾಗಿರುವ ಶರ್ಮ ಅವರ ಮೃತದೇಹ ಚಾಂದ್ ಬಾಗ್ ನಲ್ಲಿ ಪತ್ತೆಯಾಗಿತ್ತು. ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಕಿತ್ ತಂದೆ ರವೀಂದರ್ ಶರ್ಮ, ತಮ್ಮ ಪುತ್ರನ ಸಾವಿಗೆ ತಾಹಿರ್ ಹುಸೈನ್ ಅವರೇ ಕಾರಣ ಎಂದು ಆರೋಪಿಸುತ್ತಿದ್ದಾರೆ.

ಈ ಆರೋಪಗಳನ್ನು ತಾಹಿರ್ ಹುಸೈನ್ ನಿರಾಕರಿಸಿದ್ದು, ಆಧಾರರಹಿತ ಆರೋಪಗಳು ಎಂದಿದ್ದಾರೆ. "ನನ್ನನ್ನು ಗುರಿ ಮಾಡುತ್ತಿರುವುದು ತಪ್ಪು. ನನಗೂ ಈ ಕೊಲೆಗೂ ಸಂಬಂಧವಿಲ್ಲ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ" ಎಂದವರು ಹೇಳಿದ್ದಾರೆ.

 ‘‘ನಾನು ಹಿಂಸಾಚಾರ ನಿಲ್ಲಿಸಲು ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನು ಅಮಾಯಕ. ಜನರು ನನ್ನ ಕಟ್ಟಡದ ಮೇಲೆ ಹತ್ತುವುದನ್ನು ನಾನು ತಡೆದೆ. ಫೆಬ್ರವರಿ 24ರಂದು ಪೊಲೀಸರು ನನ್ನ ಕಟ್ಟಡದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಅಲ್ಲದೆ, ನನ್ನನ್ನು ಅಲ್ಲಿಂದ ಹೊರಗೆ ಹಾಕಿದರು. ಅನಂತರ ನಾವು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆಗೊಂಡೆವು. ಫೆಬ್ರವರಿ 25ರಂದು ಸಂಜೆ 4 ಗಂಟೆ ವರೆಗೆ ಪೊಲೀಸರು ಆ ಕಟ್ಟಡದಲ್ಲಿ ಇದ್ದರು’’ ಎಂದು ಹುಸೈನ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News