ದಿಲ್ಲಿಯಲ್ಲಿ ರಜೆ ಹಾಕಿದ ಸಂವಿಧಾನ, ಇನ್ನೂ ಉಸಿರಾಡುತ್ತಿರುವ ಭಾರತೀಯತೆ

Update: 2020-02-28 05:29 GMT

ದಿಲ್ಲಿಯಲ್ಲಿ ಸಂಘಪರಿವಾರ ಗೂಂಡಾಗಳಿಂದ ನಡೆಯುತ್ತಿರುವ ಏಕಮುಖ ಹಿಂಸಾಚಾರ ಎರಡು ವಿಷಯಗಳನ್ನು ದೇಶಕ್ಕೆ ಸ್ಪಷ್ಟ ಪಡಿಸಿದೆ. ಒಂದನೆಯದು, ಈ ದೇಶದಲ್ಲಿ ಸಂವಿಧಾನ ರಜೆಯಲ್ಲಿದೆ. ಎರಡನೆಯದು, ಈ ದೇಶದಲ್ಲಿ ಜನಸಾಮಾನ್ಯರಿಗೆ ಹಿಂಸಾಚಾರ ಬೇಕಾಗಿಲ್ಲ. ಅವರು ಹಿಂಸೆಯ ರಾಜಕಾರಣವನ್ನು ಒಪ್ಪುವುದಿಲ್ಲ. ದಿಲ್ಲಿ ಹಿಂಸಾಚಾರವನ್ನು ಆಳುವವರು ಬಲವಂತದಿಂದ ಜನಸಾಮಾನ್ಯರ ತಲೆಗೆ ಕಟ್ಟುತ್ತಿದ್ದಾರೆ. ಹಿಂಸೆಗಿಳಿದವರು ಯಾವುದೇ ಧರ್ಮವನ್ನು ಪ್ರತಿನಿಧಿಸುತ್ತಿರಲಿಲ್ಲ. ‘ಶ್ರೀ ರಾಮ’ನ ಹೆಸರನ್ನೇ ಸ್ಪಷ್ಟವಾಗಿ ಉಚ್ಚರಿಸಲು ಬಾರದ ಬೀದಿ ಗೂಂಡಾಗಳನ್ನು ಸರಕಾರವೇ ಛೂಬಿಟ್ಟು ಅವರೆಲ್ಲರನ್ನು, ಸಿಎಎ ವಿರೋಧಿಗಳ ಕುರಿತಂತೆ ಆಕ್ರೋಶಗೊಂಡ ಈ ದೇಶದ ಪ್ರಜೆಗಳು ಎಂದು ಬಿಂಬಿಸಲು ವಿಫಲ ಪ್ರಯತ್ನ ಮಾಡಿದೆ. ಸಂಘಪರಿವಾರದ ವೇಷದಲ್ಲಿರುವ ಪೊಲೀಸರು ಮತ್ತು ಸಂಘಪರಿವಾರದ ಮೂರನೇ ದರ್ಜೆಯ ತಳಸ್ತರದ ಗೂಂಡಾಗಳು ಜೊತೆಸೇರಿ ನಿರ್ದಿಷ್ಟ ಸಮುದಾಯದ ಪ್ರಾರ್ಥನಾಲಯ, ಅಂಗಡಿ, ಮನೆಗಳನ್ನು ನಾಶ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಈ ಗೂಂಡಾಗಳಿಂದ ಅಮಾಯಕರನ್ನು ರಕ್ಷಿಸಲು ಹಿಂದೂ ಸಮುದಾಯಕ್ಕೆ ಸೇರಿದ ನೂರಾರು ಜನರು ಬೀದಿಗಿಳಿದಿದ್ದರು ಎನ್ನುವ ಅಂಶವನ್ನು ನಾವಿಂದು ಎತ್ತಿ ಹಿಡಿಯಬೇಕಾಗಿದೆ. ಹಲವೆಡೆ ಹಿಂದೂ ಸಂತ್ರಸ್ತರನ್ನು ಮುಸ್ಲಿಮರು ರಕ್ಷಿಸಿದರೆ, ಇನ್ನು ಹಲವೆಡೆ ಮುಸ್ಲಿಮ್ ಸಮುದಾಯದ ಜನರನ್ನು ಹಿಂದೂ ಧರ್ಮೀಯರು ರಕ್ಷಿಸಿದ್ದರು. ಪರಸ್ಪರ ರಕ್ಷಣೆಯನ್ನು ನೀಡಿದ್ದರು. ಎಲ್ಲ ರಾಜಕೀಯ ಸಂಚುಗಳ ನಡುವೆಯೂ ಈ ದೇಶದ ಭಾರತೀಯ ಅಸ್ಮಿತೆ ಜೀವಂತವಾಗಿದೆ ಎನ್ನುವ ಅಂಶವನ್ನು ಈ ಮಾನವೀಯ ಸ್ಪಂದನಗಳು ಸ್ಪಷ್ಟಪಡಿಸಿವೆ.

ದಿಲ್ಲಿಯ ಯಮುನಾ ವಿಹಾರ ಮಾರುಕಟ್ಟೆಯಲ್ಲಿ ನಡೆದ ಪ್ರಕರಣ ದಿಲ್ಲಿಯ ವಾಸ್ತವವನ್ನು ತಿಳಿಸಿದೆ. ಇಲ್ಲಿಗೆ ಗಲಭೆ ನಡೆಸಲು ಒಂದಿಷ್ಟು ಜನರ ಗುಂಪು ಶಸ್ತ್ರಾಸ್ತ್ರಗಳೊಂದಿಗೆ ದಾಳಿಯಿಟ್ಟಿತು. ಆದರೆ ಅದಾಗಲೇ ಇಲ್ಲಿನ ಹಿಂದೂ ಮುಸ್ಲಿಮರು ಒಂದಾಗಿ ಗಲಭೆಕೋರರನ್ನು ಎದುರಿಸುವ ನಿರ್ಧಾರವನ್ನು ತಳೆದಿದ್ದರು. ಗಲಭೆಕೋರರು ಆಗಮಿಸುತ್ತಿದ್ದಂತೆಯೇ ಉಭಯ ಸಮುದಾಯಗಳ ನಾಯಕರು ಜೊತೆಗೂಡಿ ಅವರನ್ನು ಎದುರಿಸಿದರು. ಅನಿವಾರ್ಯವಾಗಿ ಗಲಭೆಕೋರರು ಅಲ್ಲಿಂದ ಕಾಲ್ಕಿತ್ತರು. ‘‘ಒಗ್ಗಟ್ಟಿನಿಂದ ಇದ್ದರೆ ಮಾತ್ರ ಇಂತಹ ಶಕ್ತಿಗಳನ್ನು ಎದುರಿಸಬಹುದು’’ ಎಂದು ಸ್ಥಳೀಯರಾದ ರಾಹುಲ್ ಮತ್ತು ರೈಸುದ್ದೀನ್ ರೆಹಾನ್ ಹೇಳುತ್ತಾರೆ. ಇವರು ಇಡೀ ಭಾರತದ ಆತ್ಮವನ್ನು ಪ್ರತಿನಿಧಿಸಿ ದಿಲ್ಲಿಯನ್ನು ರಕ್ಷಿಸಲು ತಮ್ಮ ಅಳಿಲು ಸೇವೆಯನ್ನು ಮಾಡಿದ್ದಾರೆ. ಇಷ್ಟೇ ಅಲ್ಲ, ಬ್ರಿಜ್‌ಪುರಿ ಪ್ರದೇಶದ ಹಿಂದೂ ಮತ್ತು ಮುಸ್ಲಿಮರು ಜೊತೆ ಸೇರಿ ಶಾಸ್ತ್ರಿ ಸರ್ಕಲ್‌ವರೆಗೆ ಸೌಹಾರ್ದ ಮೆರವಣಿಗೆಯನ್ನು ನಡೆಸಿದರು.

ಫೆಬ್ರವರಿ 25ರಂದು ದಿಲ್ಲಿಯ ಅಶೋಕ್‌ನಗರದಲ್ಲೂ ಭಾರತೀಯತೆ ತನ್ನ ಹಿರಿಮೆಯನ್ನು ಮೆರೆಯಿತು. ಇಲ್ಲಿನ ಮಸೀದಿಗೆ ಕೆಲವು ದುಷ್ಕರ್ಮಿಗಳು ಬೆಂಕಿ ಹಚ್ಚಲು ಬಂದಾಗ ಸ್ಥಳೀಯ ಹಿಂದೂಗಳು ಮಸೀದಿಗೆ ಕಾವಲು ನಿಂತರು. ಅದನ್ನು ರಕ್ಷಿಸಿದ್ದು ಮಾತ್ರವಲ್ಲ, ದುಷ್ಕರ್ಮಿಗಳಿಂದ ಮುಸ್ಲಿಮರಿಗೆ ಹಿಂದೂಗಳು ತಮ್ಮ ನಿವಾಸದಲ್ಲಿ ಆಶ್ರಯ ನೀಡಿದರು. ಚಾಂದ್‌ಬಾಗ್‌ನಲ್ಲಿ ಇದಕ್ಕಿಂತ ವ್ಯತಿರಿಕ್ತವಾದುದು ನಡೆಯಿತು. ಇದು ಮುಸ್ಲಿಮ್ ಬಾಹುಳ್ಯ ಇರುವ ಪ್ರದೇಶ. ಇಲ್ಲಿ ಸಣ್ಣದಾಗಿರುವ ಮೂರು ದೇವಸ್ಥಾನಗಳಿದ್ದವು. ದುಷ್ಕರ್ಮಿಗಳು ಇಲ್ಲಿ ದಾಂಧಲೆ ನಡೆಸುತ್ತಿದ್ದಂತೆಯೇ ಇಲ್ಲಿರುವ ಹಿಂದೂ ಕುಟುಂಬಗಳ ನೆರವಿಗೆ ಮುಸ್ಲಿಮರು ಧಾವಿಸಿದರು. ಒಬ್ಬನೇ ಒಬ್ಬ ಹಿಂದೂವಿನ ಮೇಲೆ ದಾಳಿ ನಡೆಯದಂತೆ ಸ್ಥಳೀಯರು ರಕ್ಷಿಸಿದ್ದಾರೆ. ದಿಲ್ಲಿಯ ಪ್ರೇಮ್ ಕುಮಾರ್ ಬಗೇಲ್, ತನ್ನ ಜೀವವನ್ನು ಒತ್ತೆಯಿಟ್ಟು ಬೆಂಕಿಗೆ ಆಹುತಿಯಾಗುತ್ತಿರುವ ನೆರೆಮನೆಯ ಆರು ಮಂದಿಯನ್ನು ರಕ್ಷಿಸಿ, ರಾಜಕಾರಣಿಗಳ ದ್ವೇಷ ರಾಜಕಾರಣಕ್ಕೆ ಸವಾಲು ಹಾಕಿದ್ದಾರೆ. ನೆರೆಯ ಆರುಮಂದಿಯನ್ನು ರಕ್ಷಿಸಿದ ಪ್ರೇಮ್‌ಕುಮಾರ್ ಸ್ವತಃ ಬೆಂಕಿಯಿಂದ ಭಾಗಶಃ ಸುಟ್ಟು ಹೋದರು. ಇವರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಸೂಕ್ತವಾಹನಗಳಿಲ್ಲದೆ ಹಲವು ಗಂಟೆಗಳ ಕಾಲ ಸಾವು ಬದುಕಿನ ನಡುವೆ ಒದ್ದಾಡಿದರು. ಮರುದಿನ ಬೆಳಗ್ಗೆ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.

‘‘ನನ್ನ ಗೆಳೆಯನ ತಾಯಿಯನ್ನು ರಕ್ಷಿಸಿದ ಸಂತೃಪ್ತಿ ನನಗಿದೆ’’ ಇದು ಬಗೆಲ್ ಅವರ ಮಾತು. ಹಲವೆಡೆ ಗುರುದ್ವಾರಗಳು ಅಮಾಯಕ ಮುಸ್ಲಿಮರನ್ನು ತಾಯಿಯ ಮಡಿಲಂತೆ ಪೊರೆಯಿತು. ದುಷ್ಕರ್ಮಿಗಳು ದಾಳಿ ನಡೆಸಿದಾಗ ಗುರುದ್ವಾರ ಸಂತ್ರಸ್ತರಿಗೆ ತನ್ನ ಬಾಗಿಲನ್ನು ತೆರೆಯಿತು. ಹಿಂಸಾಚಾರ ನಡೆಸಿದ ದುಷ್ಕರ್ಮಿಗಳು ಯಾರೂ ಸ್ಥಳೀಯರಲ್ಲ ಎನ್ನುವುದು ಗಮನಾರ್ಹ. ದಾಳಿ ನಡೆಯುತ್ತಿರುವಾಗ ಅದನ್ನು ತಡೆಯುವ ಧೈರ್ಯವಿಲ್ಲದೆ ಸ್ಥಳೀಯರು ವೌನವಾಗಿದ್ದರು. ದುಷ್ಕರ್ಮಿಗಳ ಜೊತೆಗೆ ಪೊಲೀಸರೂ ಶಾಮೀಲಾಗಿರುವಾಗ, ಸ್ಥಳೀಯರು ಅದರ ವಿರುದ್ಧ ಧ್ವನಿಯೆತ್ತುವುದಾದರೂ ಹೇಗೆ? ಒಂದೆಡೆ ಬಿಜೆಪಿಯ ಸ್ಥಳೀಯ ಮುಖಂಡರೇ ಮುಸ್ಲಿಮರಿಗೆ ನೆರವಾಗಿದ್ದಾರೆ ಎನ್ನುವುದನ್ನು ಗಮನಿಸುವಾಗ, ನಿಜಕ್ಕೂ ದಾಳಿ ನಡೆಸಿದ ದುಷ್ಕರ್ಮಿಗಳು ಎಲ್ಲಿಂದ ಬಂದರು ಎನ್ನುವ ಪ್ರಶ್ನೆ ತಲೆಯೆತ್ತುತ್ತದೆ? ಇವರನ್ನು ಸೃಷ್ಟಿಸಿದವರು ಯಾರು? ಇವರ ಕೈಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟವರು ಯಾರು? ಸಿಎಎ ಬಿಡಿ, ಶ್ರೀರಾಮನ ಕುರಿತಂತೆಯೂ ವಿವರಗಳಿಲ್ಲದ ಇವರು, ಲೂಟಿ, ದರೋಡೆಗಾಗಿಯೇ ಬೀದಿಗಿಳಿದಿದ್ದಾರೆ. ಬಿಜೆಪಿ ನಾಯಕರು ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದಾರೆ. ಈ ದೇಶದ ಪ್ರಧಾನಿ, ಗೃಹಸಚಿವ, ಪೊಲೀಸ್ ಇಲಾಖೆ, ದಿಲ್ಲಿಯ ಮುಖ್ಯಮಂತ್ರಿ ಎಲ್ಲರೂ ಈ ಹಿಂಸಾಚಾರದ ಬಗ್ಗೆ ವೌನವಾಗಿದ್ದಾಗ ಜನರಿಗೆ ‘ಸಂವಿಧಾನ ರಜೆಯಲ್ಲಿದೆಯೇ?’ ಎಂಬ ಅನುಮಾನ ಎದುರಾಗಿತ್ತು.

ಆ ಸಂದರ್ಭದಲ್ಲಿ ದಿಲ್ಲಿ ಹೈಕೋರ್ಟ್‌ನ ನ್ಯಾಯಾಧೀಶರು ಈ ದೇಶದ ಸಂವಿಧಾನ ಮತ್ತು ಪ್ರಜಾಸತ್ತೆಯನ್ನು ಉಳಿಸಲು ಧಾವಿಸಿದರು. ನ್ಯಾಯಾಧೀಶ ಮುರಳೀಧರ್ ಅವರು, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲು ಆದೇಶ ನೀಡಿದ್ದು ಮಾತ್ರವಲ್ಲ, ಪೊಲೀಸರ ವೈಫಲ್ಯವನ್ನು ಬೆಟ್ಟು ಮಾಡಿದರು. ದ್ವೇಷ ಭಾಷಣ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ ಎಂದು ಸೂಚನೆ ನೀಡಿದರು. ‘‘ಕಪಿಲ್ ಮಿಶ್ರಾ ಅವರ ದ್ವೇಷ ಭಾಷಣದ ಬಗ್ಗೆ ಅರಿವಿಲ್ಲ’’ ಎಂದ ಪೊಲೀಸರಿಗೆ, ನ್ಯಾಯಾಧೀಶರೇ ‘ಅದರ ವೀಡಿಯೊ’ವನ್ನು ಪ್ರದರ್ಶಿಸಿದರು. ‘‘ದಿಲ್ಲಿಯಲ್ಲಿ 1984ನ್ನು ಮರುಕಳಿಸಲು ಅವಕಾಶ ನೀಡುವುದಿಲ್ಲ’’ ಎಂಬ ಸ್ಪಷ್ಟ ಎಚ್ಚರಿಕೆ ನೀಡಿದರು. ವಿಪರ್ಯಾಸವೆಂದರೆ, ಇದಾದ 24 ಗಂಟೆಯಲ್ಲಿ ಕೇಂದ್ರ ಸರಕಾರ ಅವರನ್ನು ಪಂಜಾಬ್‌ಗೆ ವರ್ಗಾವಣೆ ಮಾಡುವ ಮೂಲಕ, ದಿಲ್ಲಿಯಲ್ಲಿ ಹಿಂಸೆ ನಡೆಯುವುದು ಯಾರಿಗೆ ಬೇಕಾಗಿದೆ? ಎನ್ನುವುದನ್ನು ದೇಶಕ್ಕೆ ಸ್ಪಷ್ಟಪಡಿಸಿತು. ಆದರೆ ಒಂದೇ ಒಂದು ಭರವಸೆ, ಈ ದೇಶದ ಭಾರತೀಯತೆ ಇನ್ನೂ ದಿಲ್ಲಿಯಲ್ಲಿ ಉಸಿರಾಡುತ್ತಿದೆ. ರಾಜಕಾರಣಿಗಳು ಹರಡಿದ ದ್ವೇಷವನ್ನು ಈ ಸದ್ಭಾವನೆಗಳು ಮುಂದಿನ ದಿನಗಳಲ್ಲಿ ದಿಟ್ಟವಾಗಿ ಎದುರಿಸಲಿದೆ. ಇಂತಹ ಮನಸ್ಸುಗಳು ಧೈರ್ಯದಿಂದ ಒಂದಾಗಿ ನಿಂತರೆ ಮಾತ್ರ ಕಳೆದು ಕೊಂಡ ತನ್ನ ಘನತೆಯನ್ನು ಭಾರತ ಮತ್ತೆ ತನ್ನದಾಗಿಸಿಕೊಂಡೀತು. ದಿಲ್ಲಿಯಲ್ಲಿ ನಡೆದ ಘಟನೆಗಳಿಂದ ಸಂಪೂರ್ಣ ನಿರಾಶರಾಗದೆ, ಅಲ್ಲಲ್ಲಿ ಹೊಳೆದ ಮಾನವೀಯತೆಯ ಬೆಳಕಿನಲ್ಲಿ ನಾವು ಮುಂದೆ ಸಾಗಬೇಕಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News