ಬಿಹಾರದ 38 ಜಿಲ್ಲೆಗಳಲ್ಲಿ ಸಿಎಎ ವಿರೋಧಿ ರ್ಯಾಲಿ ಪೂರ್ಣಗೊಳಿಸಿದ ಕನ್ಹಯ್ಯ ಕುಮಾರ್

Update: 2020-02-28 04:57 GMT

ಪಾಟ್ನಾ, ಫೆ.28: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಮತ್ತು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್  "ಸಂವಿಧಾನ್ ಬಚಾವೋ, ನಾಗರಿಕತ ಬಚಾವೊ" ಆಂದೋಲನದ ಅಂಗವಾಗಿ ಬಿಹಾರದ ಎಲ್ಲ 38 ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದ ಸಿಎಎ ವಿರೋಧಿ ರ್ಯಾಲಿಗಳನ್ನು ಗುರುವಾರ ಪೂರ್ಣಗೊಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಊಳಿಗಮಾನ್ಯ ಪದ್ಧತಿಯನ್ನು ಮತ್ತು ಬಂಡವಾಳಶಾಹಿತ್ವವನ್ನು ಬೆಳೆಸುತ್ತಿದೆ ಎಂದು ಕನ್ಹಯ್ಯ ಆಪಾದಿಸಿದ್ದಾರೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಪ್ರತಿ ಗಂಟೆಗೆ ಒಬ್ಬ ಯುವಕ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟರ್(ಎನ್.ಪಿ.ಆರ್.) ಮತ್ತು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಯನ್ಸ್(ಎನ್.ಆರ್.ಸಿ.) ಜಾರಿಗೊಳಿಸುವ ಮೂಲಕ ದೇಶವನ್ನು ವಿಭಜಿಸುತ್ತಿದೆ ಹಾಗೂ ಜನರು ನೈಜವಾಗಿ ಎದುರಿಸುತ್ತಿರುವ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು ತಿಳಿಸಿದರು. ಆಝಾದಿ ಘೋಷಣೆಗಳನ್ನು ಜನ ಕೂಗುತ್ತಿರುವುದು ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ಹಯ್ಯ ಅವರ ಭಾಷಣವನ್ನು ಚಿತ್ರೀಕರಿಸಿಕೊಳ್ಳುತ್ತಿರುವುದು ಕಂಡುಬಂತು.

ಜನವರಿ 30ರಂದು ಪಶ್ಚಿಮ ಚಂಪರಣ ಜಿಲ್ಲೆಯ ಭಿತರ್ವಾ ಆಶ್ರಮದಿಂದ ಕನ್ಹಯ್ಯ ಕುಮಾರ್ ಆರಂಭಿಸಿದ ಜನ ಗಣ ಮನ ಯಾತ್ರೆಯ ಸಮಾರೋಪದ ಅಂಗವಾಗಿ ಬೃಹತ್ ರ್ಯಾಲಿ ಆಯೋಜಿಸಲಾಗಿತ್ತು. ಖಡ್ವಾ ಶಾಸಕ ಶಕೀಲ್ ಅಹ್ಮದ್ ಖಾನ್ ಕೂಡಾ ಕಳೆದ ನಾಲ್ಕು ವಾರಗಳ ಕಾಲ 38 ಜಿಲ್ಲೆಗಳಲ್ಲಿ ನಡೆದ 62 ರ್ಯಾಲಿಗಳಲ್ಲಿ ಭಾಷಣ ಮಾಡಿದರು. ರ್ಯಾಲಿಯ ಅವಧಿಯಲ್ಲಿ ಒಂಬತ್ತು ಬಾರಿ ಕನ್ಹಯ್ಯ ಅವರ ಮೇಲೆ ದಾಳಿ ನಡೆದಿತ್ತು.

ಬಿಹಾರ ಚುನಾವಣೆ ಮತ್ತು ಈ ರ್ಯಾಲಿಗೆ ಯಾವುದೇ ಸಂಬಂಧ ಇಲ್ಲ. ಸಂವಿಧಾನದ ರಕ್ಷಣೆ ಇಂದಿನ ತುರ್ತು ಅಗತ್ಯ. ದೇಶದ ಸಂವಿಧಾನ ಉಳಿದರೆ ಮಾತ್ರ ಚುನಾವಣೆಗಳು ನಡೆಯುತ್ತವೆ. ಆದ್ದರಿಂದ ದೇಶದ ಸಂವಿಧಾನವನ್ನು ಉಳಿಸುವುದು ಅನಿವಾರ್ಯ ಎಂದು ಅವರು ಪ್ರತಿಪಾದಿಸಿದರು.
ಈಶಾನ್ಯ ದಿಲ್ಲಿ ಹಿಂಸಾಚಾರದ ಬಗೆಗಿನ ಕೇಂದ್ರದ ನಿರ್ಲಕ್ಷ್ಯವನ್ನು ಖಂಡಿಸಿದ ಅವರು, ಪ್ರಚೋದನಾಕಾರಿ ಭಾಷಣ ಮಾಡಿದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ವಿರುದ್ಧ ದೇಶದ್ರೋಹದ ಪ್ರಕರಣ ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News