ಆಕಾಶ ನೋಡಿ ಉಗುಳಿದ ಯತ್ನಾಳ್

Update: 2020-02-29 05:35 GMT

ಹಿರಿಯರು ಮನೆಗೆ ಭೂಷಣ. ಅವರ ಅಪಾರ ಜೀವನಾನುಭವ ಮನೆಯ ಹೊಸ ತಲೆಮಾರನ್ನು ಮುನ್ನಡೆಸುತ್ತದೆ. ಅದಕ್ಕಾಗಿಯೇ ಕವಿಗಳು ಹೇಳಿದ್ದಾರೆ ‘ಹಳೆ ಬೇರು, ಹೊಸ ಚಿಗುರು ಮರ ಸೊಬಗು’. ಮನೆಯಲ್ಲಿರುವ ಹಿರಿಯರ ಅನುಭವಗಳನ್ನು, ಮಾರ್ಗದರ್ಶನಗಳನ್ನು ತಿರಸ್ಕರಿಸುವುದೆಂದರೆ ಹೊಸ ಚಿಗುರು ಮರದ ಬೇರನ್ನೇ ನಿರಾಕರಿಸಿದಂತೆ. ಇದು ಕೇವಲ ಮನೆಗೆ ಮಾತ್ರವಲ್ಲ, ಒಂದು ನಾಡಿಗೂ ಅನ್ವಯವಾಗುತ್ತದೆ. ಹೊಸ ತಲೆಮಾರು ಇಂದು ಅನುಭವಿಸುತ್ತಿರುವ ಸಕಲ ಫಲಗಳ ಹಿಂದೆ ನಮ್ಮ ಹಿರಿಯರ ಶ್ರಮ, ಬೆವರು ಇದೆ. ಇಂದು ನಾವು ಹಣ್ಣು ತಿನ್ನುತ್ತಿದ್ದೇವೆ ಎಂದರೆ, ಹಲವು ವರ್ಷಗಳ ಹಿಂದೆ ಆ ಹಣ್ಣಿನ ಗಿಡವನ್ನು ನೆಟ್ಟು ಬೆಳೆಸಿ ಕಾಪಾಡಿದ ಹಿರಿಯರನ್ನು ನೆನಪಿಸಬೇಕಾಗುತ್ತದೆ. ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಅಳಿದುಳಿದ ಹಿರಿಯರೆಲ್ಲ ಒಬ್ಬೊಬ್ಬರಾಗಿ ನಮ್ಮನ್ನು ಬಿಟ್ಟು ಅಗಲುತ್ತಿದ್ದಾರೆ. ಬೆರಳೆಣಿಕೆಯ ಜನರಷ್ಟೇ ನಮ್ಮ ನಡುವೆ ಇದ್ದಾರೆ. ಅವರಲ್ಲಿ ಕೆಲವರು ಇಂದಿಗೂ ಈ ದೇಶದ ಒಳಿತಿಗಾಗಿ ಬೀದಿಗಿಳಿದು ಹೋರಾಟವನ್ನು ಮುಂದುವರಿಸಿದ್ದಾರೆ. ಬ್ರಿಟಿಷರು ಹೋದಾಕ್ಷಣ ಈ ದೇಶ ಸಂಪೂರ್ಣ ಸ್ವತಂತ್ರಗೊಂಡಿತು ಎಂದು ಈ ಹಿರಿಯರು ನಂಬಿಲ್ಲ. ಬ್ರಿಟಿಷರಿಂದ ನಾವು ಪಡೆದುಕೊಂದ ಸ್ವಾತಂತ್ರ, ಪ್ರಜಾಸತ್ತೆ, ಸಂವಿಧಾನ ಉಳಿಯಬೇಕಾದರೆ ಹೋರಾಟ ನಿರಂತರವಾಗಿರಬೇಕು ಎಂದು ಭಾವಿಸಿ ಇಂದಿಗೂ ಪ್ರಭುತ್ವದ ಜನ ವಿರೋಧಿ ನೀತಿಗಳ ವಿರುದ್ಧ ತಮ್ಮ ಹೋರಾಟಗಳನ್ನು ಜೀವಂತವಿಟ್ಟಿದ್ದಾರೆ. ಅಂತಹ ಹೋರಾಟಗಾರರಲ್ಲಿ ಶತಾಯುಷಿ ದೊರೆಸ್ವಾಮಿ ಒಬ್ಬರು.

ದೊರೆಸ್ವಾಮಿ ಅವರು ಹಿರಿಯ ಸ್ವಾತಂತ್ರ ಹೋರಾಟಗಾರರು ಮಾತ್ರವಲ್ಲ, ಬರಹಗಾರರು, ಚಿಂತಕರೂ ಹೌದು. ಸಮಾಜದ ಕುರಿತಂತೆ ಇಂದಿಗೂ ತೀವ್ರ ಕಾಳಜಿಯನ್ನು ಹೊಂದಿ, ಇಳಿ ವಯಸ್ಸಿನಲ್ಲೂ ತನ್ನ ಹೋರಾಟದ ಕಿಚ್ಚನ್ನು ಉಳಿಸಿಕೊಂಡವರು. ಬೀದಿಗಿಳಿದು ಹೋರಾಟ ಮಾಡುತ್ತಿರುವವರು. ಹೊಸ ಪೀಳಿಗೆಯ ಹೋರಾಟಗಾರರಿಗೆ ಮಾರ್ಗದರ್ಶನ ನೀಡುತ್ತಿರುವವರು. ಇವರು ನಮ್ಮ ನಡುವೆ ಇದ್ದಾರೆ ಎನ್ನುವುದೇ ನಾಡಿಗೊಂದು ಹೆಮ್ಮೆ, ಭರವಸೆ. ಆದಿವಾಸಿಗಳು, ದಲಿತರು, ಕಾರ್ಮಿಕರ ಪರವಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ದೊರೆಸ್ವಾಮಿ, ಈ ನಾಡಿನ ಆಳುವವರನ್ನು ತಮ್ಮ ಮಾತುಗಳ ಮೂಲಕ ಪದೇ ಪದೇ ಎಚ್ಚರಿಸುತ್ತಾ ಬಂದವರು. ನಮ್ಮ ಮನೆಯ ಹಿರಿಯಜ್ಜನೊಬ್ಬ ತನ್ನ ಜೀವನಾನುಭವದ ಮಾತುಗಳನ್ನು ಹೇಳಿ, ಆಳುವವರನ್ನು ಎಚ್ಚರಿಸುವಾಗ ಅದು ಅವರಿಗೆ ತುಸು ಕಹಿಯಾಗುವುದು ಸಹಜ. ಆದರೆ ನಾಡಿನ ಒಳಿತಿಗಾಗಿ ಹಿರಿಯರು ಮಾಡುವ ಟೀಕೆ, ವಿಮರ್ಶೆಗಳು ಆಳುವವರಲ್ಲಿ ಅಸಹನೆಯನ್ನು ಸೃಷ್ಟಿಸಬಾರದು. ಬದಲಿಗೆ ಅವುಗಳನ್ನು ಎಚ್ಚರದಿಂದ ಆಲಿಸಿ, ಬೇಕಾದುದನ್ನು ಆರಿಸಿ ನಾಡಿನ ಒಳಿತಿಗೆ ಬಳಸಬೇಕು.

ದುರದೃಷ್ಟಕ್ಕೆ, ಈ ನಾಡಿನ ಒಳಿತನ್ನು ದೃಷ್ಟಿಯಲ್ಲಿಟ್ಟು ಸರಕಾರವನ್ನು ವಿಮರ್ಶಿಸಿದ ಹಿರಿಯರನ್ನೇ ‘ಪಾಕಿಸ್ತಾನಿ ಏಜೆಂಟ್’ ಎಂದು ಕರೆದು ಅವರನ್ನು ಬಾಯಿ ಮುಚ್ಚಿಸುವ ಪ್ರಯತ್ನವನ್ನು ಬಿಜೆಪಿಯ ಶಾಸಕರೊಬ್ಬರು ಮಾಡಿದ್ದಾರೆ. ಅಷ್ಟೇ ಅಲ್ಲ, ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ದೊರೆಸ್ವಾಮಿಯನ್ನು ‘ದೇಶದ್ರೋಹಿ’ ಎಂದೂ ಕರೆದಿದ್ದಾರೆ. ದೊರೆಸ್ವಾಮಿಯಂತಹ ಹಿರಿಯರನ್ನು ಕೀಳುಅಭಿರುಚಿಯ ಭಾಷೆಯಲ್ಲಿ ನಿಂದಿಸುವ ಮೂಲಕ ಶಾಸಕರು ಸ್ವತಃ ಸರಕಾರಕ್ಕೆ ಮತ್ತು ತನ್ನ ವ್ಯಕ್ತಿತ್ವಕ್ಕೇ ಮಸಿ ಬಳಿದುಕೊಂಡಿದ್ದಾರೆ. ಇದರಿಂದ ದೊರೆಸ್ವಾಮಿ ಕಳೆದುಕೊಳ್ಳುವಂತಹದು ಏನೂ ಇಲ್ಲ.

ಹಿಂದೆ ಬ್ರಿಟಿಷರು ಸ್ವಾತಂತ್ರ ಹೋರಾಟಗಾರರನ್ನು ದೇಶದ್ರೋಹಿಗಳು ಎಂದು ಕರೆದು ಬಂಧಿಸುತ್ತಿದ್ದರು. ಇಂದು ಶಾಸಕ ಯತ್ನಾಳ್ ಅವರು ದೊರೆಸ್ವಾಮಿಯನ್ನು ದೇಶದ್ರೋಹಿ ಎಂದು ಕರೆಯುವ ಮೂಲಕ, ತನ್ನನ್ನು ತಾನು ಬ್ರಿಟಿಷರ ಪ್ರತಿನಿಧಿಯೆಂದು ಘೋಷಿಸಿಕೊಂಡಂತಾಗಿದೆ. ಸ್ವಾತಂತ್ರ ಹೋರಾಟ ಮುಗಿಲು ಮುಟ್ಟಿದ ಸಂದರ್ಭದಲ್ಲಿ ಸಂಘಪರಿವಾರ ಬ್ರಿಟಿಷರ ಜೊತೆಗೆ ನಿಂತು ದೇಶಕ್ಕೆ ದ್ರೋಹ ಎಸಗಿರುವುದು ಗುಟ್ಟಿನ ಸಂಗತಿಯಲ್ಲ. ವಿನಾಯಕ ದಾಮೋದರ್ ಸಾವರ್ಕರ್ ಅವರಂತೂ ಎರಡೆರಡು ಬಾರಿ ಬ್ರಿಟಿಷರಿಗೆ ಕ್ಷಮಾಯಾಚನಾ ಪತ್ರ ಬರೆದು ‘ನಾನು ನಿಮ್ಮ ವಿನೀತ ಸೇವಕ’ ಎಂದು ಘೋಷಿಸಿಕೊಂಡಿದ್ದರು. ಸ್ವಾತಂತ್ರ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ ಆರೋಪವೂ ಹಿಂದೂ ಮಹಾಸಭಾ ನಾಯಕರ ಮೇಲಿದೆ.

ಹೀಗಿರುವಾಗ, ಸಂಘಪರಿವಾರದ ಹಿನ್ನೆಲೆಯಿರುವ ಪಕ್ಷವೊಂದರ ಶಾಸಕ, ಸ್ವಾತಂತ್ರ ಹೋರಾಟಗಾರರೊಬ್ಬರನ್ನು ದೇಶದ್ರೋಹಿ ಎಂದು ಕರೆಯುವುದು ಸಹಜವೇ ಆಗಿದೆ. ಇದೇ ಸಂದರ್ಭದಲ್ಲಿ ದೊರೆಸ್ವಾಮಿಯನ್ನು ‘ಪಾಕಿಸ್ತಾನದ ಏಜೆಂಟ್’ ಎಂದೂ ಕರೆದಿದ್ದಾರೆ. ಮಹಾತ್ಮಾ ಗಾಂಧೀಜಿಯನ್ನೇ ‘ಪಾಕಿಸ್ತಾನದ ಏಜೆಂಟ್’ ಎಂದು ಸಂಘಪರಿವಾರ ಕರೆಯುತ್ತಿರುವಾಗ ದೊರೆಸ್ವಾಮಿಯನ್ನು ಕರೆಯುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಗೋಡ್ಸೆ ಹುಟ್ಟಿದ ದಿನ, ಮಹಾತ್ಮಾಗಾಂಧೀಜಿಯ ಪ್ರತಿಕೃತಿಗೆ ಗುಂಡು ಹಾರಿಸಿ ಜೈ ಗೋಡ್ಸೆ ಎಂದು ಕೂಗಿದವರು ಯಾವ ದೇಶದ್ರೋಹದ ಪ್ರಕರಣವೂ ಇಲ್ಲದೆ ಮುಕ್ತವಾಗಿ ಓಡಾಡುತ್ತಿರುವಾಗ, ಯತ್ನಾಳ್ ಅವರಿಗೆ ದೊರೆಸ್ವಾಮಿ ದೇಶದ್ರೋಹಿಯಾಗಿ ಕಾಣುವುದರಲ್ಲಿ ವಿಶೇಷವಿಲ್ಲ.

ಯಾವುದೇ ಪಕ್ಷಗಳೊಂದಿಗೆ ಗುರುತಿಸಿಕೊಳ್ಳದ ಓರ್ವ ಹಿರಿಯ ಸ್ವಾತಂತ್ರ ಹೋರಾಟಗಾರ ಸರಕಾರದ ತಪ್ಪು ಒಪ್ಪುಗಳನ್ನು ತಿದ್ದುವುದಕ್ಕೆ ಮುಂದಾದರೆ, ಅದನ್ನು ಸರಕಾರದ ವಿರುದ್ಧ ಹೇಳಿಕೆಯಾಗಿ ಭಾವಿಸುವುದೇ, ನಮ್ಮ ನಾಯಕರ ಸಂಕುಚಿತ ವ್ಯಕ್ತಿತ್ವವನ್ನು ಹೇಳುತ್ತದೆ. ವಿಮರ್ಶೆ, ಟೀಕೆಗಳಿಗೆ ಮುಖ ಕೊಡದೆ ರಾಜ್ಯವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವುದು ಹೇಗೆ ಸಾಧ್ಯ? ಇಷ್ಟಕ್ಕೂ ಸರಕಾರವನ್ನು ಟೀಕಿಸುವುದು ದೇಶವನ್ನು ಟೀಕಿಸಿದಂತಾಗುತ್ತದೆಯೇ? ದೇಶ ಬೇರೆ, ಸರಕಾರ ಬೇರೆ. ಜನರಿಂದ ಆಯ್ಕೆಯಾದವರು ಜನರ ಟೀಕೆ, ಟಿಪ್ಪಣಿಗಳನ್ನು ಎದುರಿಸುತ್ತಾ, ಅವರ ಸಲಹೆಗಳನ್ನು ಪಡೆಯುತ್ತಾ ಮುಂದುವರಿಯಬೇಕು. ಬದಲಿಗೆ, ಟೀಕಿಸಿದ ಜನರನ್ನೇ ದೇಶದ್ರೋಹಿ ಎನ್ನುವುದೇ ದೇಶದ್ರೋಹದ ಕೆಲಸ.

ದೊರೆಸ್ವಾಮಿಯಂತಹ ಹಿರಿಯರ ಬಗ್ಗೆ ನಿಂದನೆಯ ಮಾತುಗಳನ್ನು ಆಡುವ ಮೂಲಕ, ತಮ್ಮ ಮನೆಯ ಹಿರಿಯರನ್ನೇ ಯತ್ನಾಳ್ ನಿಂದಿಸಿದಂತಾಗಿದೆ. ಒಂದು ರೀತಿಯಲ್ಲಿ ಆಕಾಶಕ್ಕೆ ನೋಡಿ ಉಗುಳಿದ್ದಾರೆ. ಅವರ ಉಗುಳು ಅವರ ಮುಖಕ್ಕೇ ಬಿದ್ದಿದೆ. ಅಷ್ಟೇ ಅಲ್ಲ ಬಿಜೆಪಿ ಸರಕಾರದ ಮುಖಕ್ಕೂ ಬಿದ್ದಿದೆ. ಯತ್ನಾಳ್ ಅವರ ಕೃತ್ಯ, ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರಕ್ಕೆ ಅನಗತ್ಯ ಮುಜುಗರ ತಂದಿದೆ. ಹಿರಿಯರೊಂದಿಗೆ ಹೇಗೆ ವರ್ತಿಸಬೇಕು, ಅವರಿಗೆ ಯಾವ ರೀತಿಯಲ್ಲಿ ಗೌರವ ನೀಡಬೇಕು ಎನ್ನುವ ಸಂಸ್ಕಾರವನ್ನು ಯತ್ನಾಳ್ ಅವರಿಗೆ ಸ್ವತಃ ಮುಖ್ಯಮಂತ್ರಿಯೇ ಖಾಸಗಿಯಾಗಿ ನೀಡಬೇಕಾಗಿದೆ. ಜೊತೆಗೆ, ತನ್ನ ಹೇಳಿಕೆಗಾಗಿ ಯತ್ನಾಳ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ತನ್ನ ಮುಖದ ಮೇಲೆ ಬಿದ್ದಿರುವ ಉಗುಳನ್ನು ಒರೆಸುವುದಕ್ಕೆ ಅವರ ಮುಂದಿರುವುದು ಇದೊಂದೇ ಮಾರ್ಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News