ಪಾನ್ ಮತ್ತು ಆಧಾರ್ ಜೋಡಿಸದಿದ್ದರೆ?

Update: 2020-02-29 05:29 GMT

ಆಧಾರ್ ಸಂಖ್ಯೆಯನ್ನು ಪಾನ್‌ನೊಂದಿಗೆ ಜೋಡಣೆಗೊಳಿಸಲು 2020, ಮಾರ್ಚ್ 31 ಅಂತಿಮ ದಿನಾಂಕವಾಗಿದೆ. ಈ ಗಡುವಿನೊಳಗೆ ಇವೆರಡನ್ನೂ ಜೋಡಣೆಗೊಳಿಸದಿದ್ದರೆ ಪಾನ್ ನಿಷ್ಕ್ರಿಯಗೊಳ್ಳುತ್ತದೆ. ಮಾ.31ರ ನಂತರ ತಮ್ಮ ಪಾನ್ ಸಂಖ್ಯೆಯೊಂದಿಗೆ ಆಧಾರ್ ಅನ್ನು ಜೋಡಣೆೆಗೊಳಿಸುವವರ ಪಾನ್ ಆಧಾರ್ ಸಂಖ್ಯೆ ಜೋಡಣೆಗೊಳಿಸಿದ ದಿನಾಂಕದಿಂದ ಸಕ್ರಿಯಗೊಳ್ಳುತ್ತದೆ ಎಂದೂ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಸ್ಪಷ್ಟಪಡಿಸಿದೆ.

►ಪಾನ್ ನಿಷ್ಕ್ರಿಯಗೊಂಡರೆ ಏನಾಗುತ್ತದೆ?

 ಗಡುವಿನೊಳಗೆ ಪಾನ್ ಮತ್ತು ಆಧಾರ್ ಜೋಡಣೆ ಮಾಡಲು ವಿಫಲಗೊಂಡ ವ್ಯಕ್ತಿಯ ಪಾನ್ ನಿಷ್ಕ್ರಿಯಗೊಳ್ಳುವುದರಿಂದ ಪಾನ್ ಸಂಖ್ಯೆಯನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕಾದ ಯಾವುದೇ ಹಣಕಾಸು ವಹಿವಾಟುಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಲವಾರು ಹಣಕಾಸು ವಹಿವಾಟುಗಳನ್ನು ನಡೆಸಲು ಪಾನ್ ಅಗತ್ಯವಾಗಿದೆ. ಪಾನ್ ನಿಷ್ಕ್ರಿಯಗೊಂಡರೆ ಹೊಸ ಬ್ಯಾಂಕ್ ಖಾತೆಯನ್ನು ತೆರೆಯಲು, ಆಸ್ತಿಯ ಮಾರಾಟ ಅಥವಾ ಖರೀದಿ, ಹೂಡಿಕೆ ಇತ್ಯಾದಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನಿಷ್ಕ್ರಿಯಗೊಂಡ ಪಾನ್ ಮತ್ತು ಪಾನ್ ಕಾರ್ಡ್ ಇಲ್ಲದಿರುವುದು ಒಂದೇ ಆಗುತ್ತದೆ. ಪಾನ್ ಇಲ್ಲದಿದ್ದರೆ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್)ದ ದರ ಹೆಚ್ಚಬಹುದು, ಜೊತೆಗೆ ಪಾನ್ ಉಲ್ಲೇಖ ಅಗತ್ಯವಿರುವ ಹಣಕಾಸು ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.

ಮಾ.31ರೊಳಗೆ ಪಾನ್ ಮತ್ತು ಆಧಾರ್ ಜೋಡಿಸಲು ವಿಫಲಗೊಂಡರೆ ಪಾನ್ ನಿಷ್ಕ್ರಿಯವಾಗುತ್ತದೆ. ಪಾನ್‌ಗೆ ಆಧಾರ್‌ನ್ನು ಜೋಡಿಸಿದರೆ ಮಾತ್ರ ಅದು ಮತ್ತೆ ಕ್ರಿಯಾಶೀಲಗೊಳ್ಳುತ್ತದೆ, ಆದರೂ ಮಾ.31ರ ಗಡುವಿನೊಳಗೇ ಅವೆರಡನ್ನೂ ಪರಸ್ಪರ ಜೋಡಣೆಗೊಳಿಸುವುದು ಒಳ್ಳೆಯದು.

►ನಿಷ್ಕ್ರಿಯ ಪಾನ್ ಬಳಸಿದರೆ ಏನಾಗುತ್ತದೆ?

ಆದಾಯ ತೆರಿಗೆ ಕಾನೂನುಗಳಂತೆ ಮಾ.31ರೊಳಗೆ ಪಾನ್ ಮತ್ತು ಆಧಾರ್ ಜೋಡಣೆ ಮಾಡದ ವ್ಯಕ್ತಿಯ ಪಾನ್ ನಿಷ್ಕ್ರಿಯಗೊಂಡಿದ್ದರೆ ಮತ್ತು ಅಂತಹ ವ್ಯಕ್ತಿ ಪಾನ್ ಅನ್ನು ಒದಗಿಸುವ, ತಿಳಿಸುವ ಅಥವಾ ಉಲ್ಲೇಖಿಸುವ ಅಗತ್ಯವಿದ್ದಾಗ ಆತ/ಆಕೆ ಹಾಗೆ ಮಾಡಿಲ್ಲ ಎಂದು ಪರಿಗಣಿಸಲಾಗುತ್ತದೆ ಮತ್ತು ಕಾನೂನಿನಡಿ ಎಲ್ಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಕಲಂ 272ಬಿ ಅಡಿ ಆತ/ಆಕೆಗೆ 10,000 ರೂ.ದಂಡವನ್ನೂ ವಿಧಿಸಬಹುದು.

►ಪಾನ್ ಮತ್ತು ಆಧಾರ್ ಜೋಡಣೆ ಹೇಗೆ ಮಾಡಬೇಕು?

ಯಾವುದೇ ವ್ಯಕ್ತಿ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ 567678 ಅಥವಾ 56161ನ್ನು ಬಳಸಿ ನಿರ್ದಿಷ್ಟ ರೂಪದಲ್ಲಿ ಪಾನ್ ಸೇವೆ ಪೂರೈಕೆದಾರ (ಎನ್‌ಎಸ್‌ಡಿಎಲ್/ಯುಟಿಐಐಟಿಎಲ್)ರಿಗೆ ಎಸ್‌ಎಂಎಸ್ ಅನ್ನು ರವಾನಿಸುವ ಮೂಲಕ ಪಾನ್ ಮತ್ತು ಆಧಾರ್ ಅನ್ನು ಪರಸ್ಪರ ಜೋಡಣೆ ಮಾಡಬಹುದು. ಅಲ್ಲದೆ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ವ್ಯಕ್ತಿಯು ತನ್ನ ಪಾನ್ ಮತ್ತು ಆಧಾರ್ ಪರಸ್ಪರ ಜೋಡಣೆಗೊಂಡಿದೆಯೇ ಎನ್ನುವುದನ್ನೂ ಪರಿಶೀಲಿಸಬಹುದು.

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News