×
Ad

ಜಿನಿವಾದಲ್ಲಿ ಸಿಎಎ ವಿಚಾರದಲ್ಲಿ ಕೇಂದ್ರದ ರಕ್ಷಣೆಗೆ ನಿಂತ ಎಂ.ಜೆ.ಅಕ್ಬರ್

Update: 2020-02-29 23:06 IST

ಹೊಸದಿಲ್ಲಿ, ಫೆ.29: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿ ಮಿಷೆಲ್ ಬ್ಯಾಚೆಲೆಟ್ ಅವರು ಸಿಎಎ ಕುರಿತು ಕಳವಳವನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಮತ್ತಿತರರು ನೂತನ ಪೌರತ್ವ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಜಿನಿವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ 43ನೇ ಅಧಿವೇಶನ ಗುರುವಾರ ಉದ್ಘಾಟನೆಗೊಂಡ ಸಂದರ್ಭದಲ್ಲಿ ಮಾತನಾಡಿದ್ದ ಬ್ಯಾಚೆಲೆಟ್ ಸಿಎಎ ಮತ್ತು ದಿಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ಪೊಲೀಸ್ ನಿಷ್ಕ್ರಿಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಹಿಂಸೆಯನ್ನು ತಡೆಯುವಂತೆ ಭಾರತೀಯ ರಾಜಕೀಯ ನಾಯಕರನ್ನು ಆಗ್ರಹಿಸಿದ್ದರು. ಜಮ್ಮು-ಕಾಶ್ಮೀರದಲ್ಲಿಯ ಸ್ಥಿತಿಯ ಕುರಿತೂ ಅವರು ಮಾತನಾಡಿದ್ದರು.

ಶನಿವಾರ ಅಧಿವೇಶನದ ನೇಪಥ್ಯದಲ್ಲಿ ಸಿಎಎ ಮತ್ತು ಭಾರತದಲ್ಲಿ ಮುಸ್ಲಿಮರಿಗೆ ಕಿರುಕುಳಗಳ ಆರೋಪಗಳ ಕುರಿತು ಭಾರತ ಮತ್ತು ಯುರೋಪ್ ಸಂಸದರು ನಡೆಸಿದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅಕ್ಬರ್ ಸಿಎಎ ಕುರಿತು ಭಾರತ ಸರಕಾರದ ನಿಲುವನ್ನು ವಿವರಿಸಿದರು. ಬಹುತ್ವವು ಭಾರತದ ಅತ್ಯಂತ ಮುಖ್ಯ ವೈಶಿಷ್ಟವಾಗಿದೆ ಮತ್ತು ಸಂವಿಧಾನವು ಧರ್ಮವನ್ನು ಪರಿಗಣಿಸದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಇತರ ಯಾವುದೇ ಧರ್ಮದ ಪ್ರಜೆಗಳಷ್ಟೇ ಮುಸ್ಲಿಮರೂ ಭಾರತದ ಭಾಗವಾಗಿದ್ದಾರೆ ಎಂದರು.

 ‘ಹಿಂದುಗಳು ಮತ್ತು ಮುಸ್ಲಿಮರು ಒಂದೇ. ದೇವರು ಅವರನ್ನು ಸೃಷ್ಟಿಸಿದ್ದಾನೆ ಮತ್ತು ಅವರನ್ನು ಪ್ರತ್ಯೇಕಿಸಲು ಯಾರಿಗೂ ಸಾಧ್ಯವಿಲ್ಲ ’ಎಂಬ ಮಹಾತ್ಮಾ ಗಾಂಧಿಯವರ ಉಕ್ತಿಯನ್ನೂ ಅವರು ಉಲ್ಲೇಖಿಸಿದರು.

ಅಕ್ಬರ್ ಜೊತೆಗೆ ಅಖಿಲ ಭಾರತ ಇಮಾಮ್‌ಗಳ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ,ಐರೋಪ್ಯ ಸಂಸತ್‌ನ ಸದಸ್ಯ ಫಲ್ವಿಯೊ ಮರ್ಚುಸಿಯೆಲೊ,ಪತ್ರಕರ್ತೆ ಆತಿಕಾ ಅಹ್ಮದ್ ಫಾರೂಕಿ ಮತ್ತು ಪೋರ್ಚುಗೀಸ್ ರಾಜಕಾರಣಿ ಪಾವ್ಲೊ ಕಾಸಾಕಾ ಅವರೂ ಸಿಎಎ ಮತ್ತು ಭಾರತದಲ್ಲಿ ಮುಸ್ಲಿಮರ ಸ್ಥಿತಿಯ ಬಗ್ಗೆ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News