ಕಲ್ಲಿನ ಕೋರೆಯ ಮೇಲೆ ಬಂಡೆ ಉರುಳಿ ಐವರು ಕಾರ್ಮಿಕರು ಮೃತ್ಯು
Update: 2020-03-01 22:34 IST
ಲಕ್ನೊ, ಮಾ.1: ಉತ್ತರಪ್ರದೇಶದ ಸೋನಭದ್ರ ಪ್ರದೇಶದ ಬಿಲ್ಲಿ ಮಾರ್ಕುಂಡಿ ಎಂಬಲ್ಲಿ ಕಲ್ಲಿನ ಕೋರೆಯಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಳವಾದ ಕಲ್ಲಿನ ಕೋರೆಯೊಳಗೆ ಇಳಿದಿದ್ದ ಕಾರ್ಮಿಕರು ಅಲ್ಲಿ ಡ್ರಿಲ್ಲಿಂಗ್ ಯಂತ್ರದ ಮೂಲಕ ಕೆಲಸ ಮಾಡುತ್ತಿದ್ದಾಗ ಮೇಲ್ಭಾಗದಲ್ಲಿದ್ದ ಮೂರು ಬೃಹತ್ ಬಂಡೆಗಲ್ಲುಗಳು ಕೋರೆಯೊಳಗೆ ಉರುಳಿಬಿದ್ದು ಈ ದುರಂತ ಸಂಭವಿಸಿದೆ. ಐದು ಮಂದಿ ಮೃತರಾಗಿದ್ದು ಮೂವರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್‌ನ 40 ಸಿಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು ಗಾಯಗೊಂಡವರನ್ನು ಕೋರೆಯಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋರೆಯೊಳಗೆ ಇನ್ನಷ್ಟು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆಯಿದೆ ಎಂದು ಎನ್‌ಡಿಆರ್‌ಎಫ್‌ನ ಅಧಿಕಾರಿ ನೀರಜ್ ಕುಮಾರ್ ಹೇಳಿದ್ದಾರೆ.