ಸಂತ್ರಸ್ತರಿಗೆ ಪುನರ್ವಸತಿ ಬಗ್ಗೆ ಪಾಲನಾ ವರದಿ ಸಲ್ಲಿಸಲು ಪೊಲೀಸರಿಗೆ ಹೈಕೋರ್ಟ್ ಆದೇಶ

Update: 2020-03-02 17:11 GMT

 ಹೊಸದಿಲ್ಲಿ,ಮಾ.2: ಕಳೆದ ವಾರ ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಜನರ ಸುರಕ್ಷಿತ ತೆರವು ಮತ್ತು ಗಾಯಾಳುಗಳಿಗೆ ಚಿಕಿತ್ಸೆಯನ್ನು ಖಚಿತಪಡಿಸುವಂತೆ ತನ್ನ ಫೆ.26ರ ಆದೇಶಕ್ಕೆ ಸಂಬಂಧಿಸಿದಂತೆ ಕ್ರಮಾನುಷ್ಠಾನ ವರದಿಯನ್ನು ಮೂರು ವಾರಗಳಲ್ಲಿ ಸಲ್ಲಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ.

ಹಿಂಸಾಚಾರದ ನಡುವೆ ಆಸ್ಪತ್ರೆಗಳಿಗೆ ಗಾಯಾಳುಗಳ ಸುರಕ್ಷಿತ ರವಾನೆ ಮತ್ತು ಸೂಕ್ತ ಚಿಕಿತ್ಸೆಯನ್ನು ಕೋರಿ ಕನ್ಸರ್ನ್ಡ್ ಸಿಟಿಝನ್ ಫಾರ್ ಪೀಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ಮತ್ತು ನ್ಯಾ.ಹರಿಶಂಕರ ಅವರ ಪೀಠವು ಈ ಆದೇಶವನ್ನು ಹೊರಡಿಸಿತು.

ಸಂತ್ರಸ್ತರ ಪುನರ್ವಸತಿಗಾಗಿ ಸಾಕಷ್ಟು ಸೌಲಭ್ಯಗಳೊಂದಿಗೆ ಅಗತ್ಯ ಸಂಖ್ಯೆಯಲ್ಲಿ ಆಶ್ರಯ ತಾಣಗಳನ್ನು ಖಚಿತಪಡಿಸಿಕೊಳ್ಳುವಂತೆ ದಿಲ್ಲಿ ಆಡಳಿತಕ್ಕೆ ತನ್ನ ಫೆ.26ರ ಆದೇಶದಲ್ಲಿ ಸೂಚಿಸಿದ್ದ ಉಚ್ಚ ನ್ಯಾಯಾಲಯವು, ಕೋಮು ಹಿಂಸಾಚಾರದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರ ಮೆರವಣಿಗೆ ಸಂದರ್ಭಗಳಲ್ಲಿ ಭದ್ರತೆಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶ ನೀಡಿತ್ತು. ಕಚೇರಿಗಳಲ್ಲಿ ದಿನದ 24 ಗಂಟೆಗಳ ಕಾಲ ಸಹಾಯ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ದಿಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ಅದು ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News