ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವಲ್ಲಿ ಕೇಂದ್ರ, ದಿಲ್ಲಿ ಸರಕಾರ ವಿಫಲ: ಮಾನವ ಹಕ್ಕು ಹೋರಾಟಗಾರರು

Update: 2020-03-02 17:48 GMT

ಹೊಸದಿಲ್ಲಿ, ಮಾ. 2: ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಸಂತ್ರಸ್ತರಿಗೆ ಯಾವುದೇ ರೀತಿಯ ವೈದ್ಯಕೀಯ ಹಾಗೂ ಕಾನೂನು ನೆರವು ನೀಡಲು ಕೇಂದ್ರ ಸರಕಾರ ಹಾಗೂ ದಿಲ್ಲಿ ಸರಕಾರ ವಿಫಲವಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಸೋಮವಾರ ಆರೋಪಿಸಿದ್ದಾರೆ.

ಹರ್ಷ ಮಂದರ್, ಅಂಜಲಿ ಭಾರದ್ವಾಜ್, ಆ್ಯನ್ನಿ ರಾಜಾ ಹಾಗೂ ಹರ್ಜಿತ್ ಸಿಂಗ್ ಭಟ್ಟಿ ಸಹಿತ ಮಾನವ ಹಕ್ಕು ಹೋರಾಟಗಾರರು ಕಳಪೆ ಆರೋಗ್ಯ ಸೇವೆ ವ್ಯವಸ್ಥೆಯನ್ನು ಟೀಕಿಸಿದ್ದಾರೆ.

ಗುಂಡು ತಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬವಾಗಿದೆ. ಸಂತ್ರಸ್ತರಿಗೆ ನೆರವು ನೀಡಲು ಹಿಂಸಾಚಾರ ಪೀಡಿತ ಪ್ರದೇಶಕ್ಕೆ ತೆರಳಲು ಪೊಲೀಸರು ಅವಕಾಶ ನೀಡದ ಇರುವುದು ಇದಕ್ಕೆ ಕಾರಣ ಎಂದು ‘ಪ್ರೋಗ್ರೆಸಿವ್ ಮೆಡಿಕೋಸ್ ಆ್ಯಂಡ್ ಸಯಂಟಿಸ್ಟ್’ನ ಭಟ್ಟಿ ಪ್ರತಿಪಾದಿಸಿದ್ದಾರೆ.

‘‘ಪೊಲೀಸರು ಒರಟರಾದರು. ಜನರಿಗೆ ನಂಬಿಕೆ ಇಲ್ಲದೇ ಇದ್ದುದರಿಂದ ಹಾಗೂ ಭೀತಿಯ ಕಾರಣಕ್ಕೆ ಗಾಯಗೊಂಡವರು ಸರಕಾರಿ ಆಸ್ಪತ್ರೆಗಳಿಗೆ ತೆರಳಲು ಸಿದ್ಧರಿರಲಿಲ್ಲ. ಈಗಲೂ ದೊಡ್ಡ ಸಂಖ್ಯೆಯ ಜನರಿಗೆ ಯಾವುದೇ ರೀತಿಯ ವೈದ್ಯಕೀಯ ನೆರವು ಲಭ್ಯವಾಗಿಲ್ಲ’’ ಎಂದು ಮಾನವ ಹಕ್ಕು ಹೋರಾಟಗಾರ ಭಾರದ್ವಾಜ್ ಹೇಳಿದ್ದಾರೆ.

‘‘ಈ ಹಿಂಸಾಚಾರ ಭಾರತದ ಕಳಪೆ ಆರೋಗ್ಯ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಯಾವುದೇ ಆಸ್ಪತ್ರೆಗಳು ಇರಲಿಲ್ಲ. ಸಮೀಪ ಇದ್ದ ಆಸ್ಪತ್ರೆ 10 ಕಿ.ಮೀ. ದೂರದಲ್ಲಿ ಇತ್ತು’’ ಎಂದು ಅವರು ಪ್ರತಿಪಾದಿಸಿದ್ದಾರೆ.

ಫೆಬ್ರವರಿ 29ರ ವರೆಗೆ ಕೇಂದ್ರ ಸರಕಾರ ಹಾಗೂ ದಿಲ್ಲಿ ಸರಕಾರ ಯಾರೊಬ್ಬರನ್ನೂ ಭೇಟಿಯಾಗಿಲ್ಲ ಎಂದು ಭಾರದ್ವಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News