ಸಿಎಎ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನ್

Update: 2020-03-03 08:12 GMT

ಹೊಸದಿಲ್ಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನ್ ಪೌರತ್ವ ತಿದ್ದುಪಡಿ ಕಾಯಿದೆ ಕುರಿತಾದ ಪ್ರಕರಣದಲ್ಲಿ ಮಧ್ಯಪ್ರವೇಶ  ಅರ್ಜಿ (ಇಂಟರ್‍ವೆನ್ಸನ್ ಅಪ್ಲಿಕೇಶನ್) ಸಲ್ಲಿಸಿದೆ. ಪೌರತ್ವ ಭಾರತದ ಆಂತರಿಕ ವಿಚಾರ, ಯಾವುದೇ ವಿದೇಶಿ ಸಂಸ್ಥೆ ಭಾರತದ ಸಾರ್ವಭೌಮತ್ವ ಕುರಿತಂತೆ ಹಸ್ತಕ್ಷೇಪ ನಡೆಸುವಂತಿಲ್ಲ ಎಂದು ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನ್ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ಕುರಿತಂತೆ  ಜಿನೀವಾದಲ್ಲಿರುವ ಭಾರತದ ಖಾಯಂ ಮಿಷನ್‍ ಗೆ ಸೋಮವಾರ ಸಂಜೆ  ಮಾನವ ಹಕ್ಕುಗಳ ವಿಶ್ವ ಸಂಸ್ಥೆಯ ಹೈಕಮಿಷನರ್ ಮಿಷೆಲ್ ಬ್ಯಾಚೆಲೆಟ್ ತಿಳಿಸಿದ್ದಾರೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

"ಕಾಯಿದೆಯ ಸಾಂವಿಧಾನಿಕ ಬದ್ಧತೆಯ ಬಗ್ಗೆ ನಮಗೆ ಸ್ಪಷ್ಟತೆಯಿದೆ. ನಮ್ಮ  ಸುಪ್ರೀಂ ಕೋರ್ಟ್ ಸರಕಾರದ ಕಾನೂನಾತ್ಮಕ ನಿಲುವನ್ನು ಸಮರ್ಥಿಸುವುದೆಂಬ ಆಶಾವಾದವಿದೆ'' ಎಂದೂ ಅವರು ಹೇಳಿದರು.

ಸಿಎಎ ಹಾಗೂ ಈಶಾನ್ಯ ದಿಲ್ಲಿಯ ಹಿಂಸಾಚಾರ ಕುರಿತಂತೆ ಕಳೆದ ವಾರ ತಮ್ಮ ಆತಂಕ ತೋಡಿಕೊಂಡಿದ್ದ ಮಿಷೆಲ್,  ಹಿಂಸೆಯನ್ನು ತಡೆಗಟ್ಟಲು ಭಾರತದ ನಾಯಕತ್ವ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News