ಬಲವಂತದಿಂದ ರಾಷ್ಟ್ರಗೀತೆ ಹಾಡಿಸಿದ ಪ್ರಕರಣ: ಓರ್ವ ಮೃತಪಟ್ಟರೂ ದಿಲ್ಲಿ ಪೊಲೀಸರ ವಿರುದ್ಧ ಕ್ರಮವಿಲ್ಲ

Update: 2020-03-03 18:09 GMT

ಹೊಸದಿಲ್ಲಿ,ಮಾ.3: ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಐವರು ಯುವಕರಿಂದ ಬಲವಂತದಿಂದ ರಾಷ್ಟ್ರಗೀತೆಯನ್ನು ಹಾಡಿಸಿದ್ದ ಪೊಲೀಸರ ವಿರುದ್ಧ ಈವರೆಗೆ ಎಫ್‌ಐಆರ್ ದಾಖಲಾಗಿಲ್ಲ. ಹಿಂಸಾಚಾರದ ಸಂದರ್ಭದಲ್ಲಿಯ ನಿಷ್ಕ್ರಿಯತೆಯಿಂದಾಗಿ ದಿಲ್ಲಿ ಪೊಲೀಸರ ಪ್ರತಿಷ್ಠೆಗೆ ಈಗಾಗಲೇ ಸಾಕಷ್ಟು ಹಾನಿಯಾಗಿದೆ. ದಿಲ್ಲಿ ಪೊಲೀಸರು ರಾಜಾರೋಷ ತಾರತಮ್ಯವನ್ನು ಪ್ರದರ್ಶಿಸಿದ್ದರು ಎಂದು ಹಲವರು ಆರೋಪಿಸಿದ್ದಾರೆ.

ಫೆ.25ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವೀಡಿಯೊ ರಸ್ತ್ತೆಯಲ್ಲಿ ಬಿದ್ದಿದ್ದ ಗಾಯಾಳು ಯುವಕರ ಸುತ್ತ ನಿಂತಿದ್ದ ಪೊಲೀಸರು ಅವರನ್ನು ನಿಂದಿಸುತ್ತಿರುವ ಮತ್ತು ಬಲವಂತದಿಂದ ಅವರು ರಾಷ್ಟ್ರಗೀತೆಯನ್ನು ಹಾಡುವಂತೆ,ವಂದೇಮಾತರಂ ಹೇಳುವಂತೆ ಮಾಡಿದ್ದಕ್ಕೆ ಸಾಕ್ಷಿಯಾಗಿತ್ತು. ಗಾಯಾಳುಗಳ ಪೈಕಿ ಕದಮಪುರಿಯ ನಿವಾಸಿ ಫೈಝಾನ್ ಎಂಬಾತ ಜ.27ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ಫೈಝಾನ್ ಸಾವಿನ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದು,‘ಅಪರಿಚಿತ ವ್ಯಕ್ತಿಗಳನ್ನು’ಕೊಲೆ ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಅಲೋಕ ಕುಮಾರ ಸುದ್ದಿಸಂಸ್ಥೆಗೆ ತಿಳಿಸಿದರು. ಶಂಕಿತ ಪೊಲೀಸರನ್ನು ಸಮರ್ಥಿಸಿಕೊಂಡ ಕುಮಾರ,ಅವರು ಯುವಕರಿಗೆ ಥಳಿಸಿದ್ದು ಕಂಡುಬಂದಿರಲಿಲ್ಲ ,ಹೀಗಾಗಿ ಅವರನ್ನು ಎಫ್‌ಐಆರ್‌ನಲ್ಲಿ ಸೇರಿಸಿಲ್ಲ. ಅಲ್ಲದೆ ಈ ಪೊಲೀಸರೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದರು.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬ ಮಾಡಿದ್ದಕ್ಕಾಗಿ ಈ ಪೊಲೀಸರ ವಿರುದ್ಧ ಏಕೆ ಎಫ್‌ಐಆರ್‌ನಲ್ಲಿ ಆರೋಪಿಸಿಲ್ಲ?ಪೈಝಾನ್ ಸಾವಿಗೆ ವಿಳಂಬವೂ ಕಾರಣವಾಗಿರಲಿಲ್ಲವೇ ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗಳಿಗೆ ಕುಮಾರ ಬಳಿ ಸ್ಪಷ್ಟ ಉತ್ತರಗಳಿರಲಿಲ್ಲ.

ಆದರೆ ಪೊಲೀಸರು ತನ್ನ ಮಗನನ್ನು ನೇರವಾಗಿ ಆಸ್ಪತ್ರೆಗೆ ಒಯ್ಯದೇ ಜ್ಯೋತಿ ನಗರ ಠಾಣೆಗೆ ಒಯ್ದು ಥಳಿಸಿದ್ದರು. ಆಸ್ಪತ್ರೆಗೆ ದಾಖಲಿಸುವ ಮುನ್ನ ಎರಡು ದಿನಗಳ ಕಾಲ ಆತ ಲಾಕಪ್‌ನಲ್ಲಿಯೇ ಇದ್ದ ಎಂದು ಫೈಝಾನ್ ತಾಯಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News