ಮೀಸಲಾತಿಯು ನಿರಂತರವಾಗಿರಬೇಕೇ? ನಿರ್ಧರಿಸುವವರು ಯಾರು?

Update: 2020-03-04 18:28 GMT

ಭಾಗ-1

ಅಸಲಿಗೆ ಈ ನಾಯಕರಿಗೆ ಮೀಸಲಾತಿಯ ಅರ್ಥ, ಸ್ವರೂಪ, ಉದ್ದೇಶ ಮತ್ತು ಚರಿತ್ರೆಯ ಬಗ್ಗೆ ಏನಾದರೂ ಗೊತ್ತಿದೆಯಾ ಎಂಬುದೇ ಅನುಮಾನವಾಗಿದೆ. ವಿಷಯಜ್ಞಾನದ ಅರಿವಿಲ್ಲದ ಸಾಮಾನ್ಯರು ಮೀಸಲಾತಿ ನೀತಿ ಮತ್ತು ಸಂವಿಧಾನದ ಬಗ್ಗೆ ತಪ್ಪಾಗಿ ಮಾತಾಡಿದರೆ, ಅವರನ್ನು ಕ್ಷಮಿಸಬಹುದು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡಿದರೆ, ಅವರ ಅವಿವೇಕತನವನ್ನು ಕ್ಷಮಿಸಲಾಗದು. ಆದರೆ ಈ ಅಪಕ್ವ ನಾಯಕರ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳನ್ನು ನಂಬುವ ಮುಗ್ಧರೂ ಹಲವರಿದ್ದಾರೆ. ಅಂತಹ ಅಮಾಯಕರಿಗಾಗಿ ಈ ಲೇಖನವನ್ನು ಬರೆಯಲಾಗಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಅಮರೇಗೌಡ ಬಯ್ಯಪುರರವರು, ಇತ್ತೀಚೆಗೆ ಒಂದು ಕಮ್ಮಟದಲ್ಲಿ ಮಾತಾಡುತ್ತಾ, ‘‘ತಾತ್ಕಾಲಿಕವಾಗಿದ್ದ ಮೀಸಲಾತಿ ವ್ಯವಸ್ಥೆಯನ್ನು ರಾಜಕೀಯ ಕಾರಣಗಳಿಗಾಗಿ ಅನೇಕ ದಶಕಗಳಿಂದ ಮುಂದುವರಿಸಿಕೊಂಡು ಬರಲಾಗಿದೆ’’ ಎಂದು ಹೇಳಿರುವುದಾಗಿ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿದೆ. ಇಷ್ಟೇ ಅಲ್ಲದೆ, ಮೀಸಲಾತಿಯ ಬೆಂಬಲವಿಲ್ಲದೆ, ದಲಿತರು, ಇತರರಂತೆ ಮೇಲೆ ಬರಬೇಕೆನ್ನುವ ಛಲ ಹೊಂದಿರಬೇಕು ಎಂಬ ಉಪದೇಶವನ್ನು ಸಹ ಅವರು ನೀಡಿರುವುದಾಗಿ ವರದಿಯಾಗಿದೆ.

ಮಾನ್ಯ ಶಾಸಕರಂತೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮತ್ತು ಜನಪ್ರತಿನಿಧಿಗಳು ಅನೇಕರು ಇಂತಹ ಹೇಳಿಕೆಗಳನ್ನು ಬಲು ಹಿಂದಿನಿಂದಲೂ ನೀಡುತ್ತಲೇ ಇದ್ದಾರೆ. ಈ ನಾಯಕರಿಗೆ ಮೀಸಲಾತಿ ಎಂಬ ವಿಷಯವು ಎಷ್ಟು ತಲೆ ಕೆಡಿಸಿದೆಯೆಂದರೆ, ಪ್ರಥಮ ಬಾರಿಗೆ ದಿ. ವಾಜಪೇಯಿಯವರ ನೇತೃತ್ವದಲ್ಲಿ ಸ್ಥಿರ ಸರಕಾರವನ್ನು ಮಾಡಿದ ಭಾರತೀಯ ಜನತಾ ಪಕ್ಷವು (ಬಿಜೆಪಿ) ಭಾರತದ ಸಂವಿಧಾನವನ್ನೇ ಪರಾಮರ್ಶಿಸುವ ಸಾಹಸ ಮಾಡಿತ್ತು ಮತ್ತು ಇದೀಗ, ಆ ಪಕ್ಷದ ನಾಯಕರು ‘‘ಸಂವಿಧಾನವನ್ನು ಬದಲಾಯಿಸಲೆಂದೇ ತಾವು ಅಧಿಕಾರಕ್ಕೆ ಬಂದಿರುವುದಾಗಿ’’ ಹೇಳುತ್ತಿದ್ದಾರೆ! ಅಸಲಿಗೆ ಈ ನಾಯಕರಿಗೆ ಮೀಸಲಾತಿಯ ಅರ್ಥ, ಸ್ವರೂಪ, ಉದ್ದೇಶ ಮತ್ತು ಚರಿತ್ರೆಯ ಬಗ್ಗೆ ಏನಾದರೂ ಗೊತ್ತಿದೆಯಾ ಎಂಬುದೇ ಅನುಮಾನವಾಗಿದೆ. ವಿಷಯಜ್ಞಾನದ ಅರಿವಿಲ್ಲದ ಸಾಮಾನ್ಯರು ಮೀಸಲಾತಿ ನೀತಿ ಮತ್ತು ಸಂವಿಧಾನದ ಬಗ್ಗೆ ತಪ್ಪಾಗಿ ಮಾತಾಡಿದರೆ, ಅವರನ್ನು ಕ್ಷಮಿಸಬಹುದು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡಿದರೆ, ಅವರ ಅವಿವೇಕತನವನ್ನು ಕ್ಷಮಿಸಲಾಗದು. ಆದರೆ ಈ ಅಪಕ್ವ ನಾಯಕರ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳನ್ನು ನಂಬುವ ಮುಗ್ಧರೂ ಹಲವರಿದ್ದಾರೆ. ಅಂತಹ ಅಮಾಯಕರಿಗಾಗಿ ಈ ಲೇಖನವನ್ನು ಬರೆಯಲಾಗಿದೆ.

ಮೊದಲನೆಯದಾಗಿ, ಮೀಸಲಾತಿ ವ್ಯವಸ್ಥೆಯು ಈ ನಾಡಿಗೆ ಡಾ. ಅಂಬೇಡ್ಕರ್ ಬರೆದ ಸಂವಿಧಾನದ ಮೂಲಕ ಬಂದಂತಹ ಹೊಸ ನೀತಿಯಲ್ಲ. ಎರಡು ಸಾವಿರ ವರ್ಷಗಳಿಗಿಂತ ಮುನ್ನ, ‘ಮನುಸ್ಮತಿ’ ಎಂಬ ಬ್ರಾಹ್ಮಣವಾದಿ ಸಂವಿಧಾನದ ಮೂಲಕ ಜಾರಿಗೆ ಬಂದ ಚಾತುರ್ವರ್ಣ್ಯ ವ್ಯವಸ್ಥೆಯೇ ಭಾರತದೇಶದ ಮೊತ್ತಮೊದಲ ಮೀಸಲಾತಿ ನೀತಿಯಾಗಿದೆ. ಶಿಕ್ಷಣದ ಹಕ್ಕನ್ನು ಬ್ರಾಹ್ಮಣರಿಗೂ, ಅಧಿಕಾರವನ್ನು ಕ್ಷತ್ರಿಯರಿಗೂ ಮತ್ತು ಸಂಪತ್ತನ್ನು ವೈಶ್ಯರಿಗೂ ಮೀಸಲಾಗಿರಿಸಿದ ಚಾತುರ್ವರ್ಣ್ಯ ವ್ಯವಸ್ಥೆಯು ಈ ಮೂರು ವರ್ಣಗಳಿಗೆ ಚಾಕರಿಸೇವೆ ಮಾಡುವುದನ್ನು ಶೂದ್ರ ವರ್ಣಕ್ಕೆ ಕಡ್ಡಾಯವಾಗಿಸಿತು. ಬಹುಸಂಖ್ಯಾತರಾದ ಶೂದ್ರರನ್ನು ಶಸ್ತ್ರ ಮತ್ತು ಶಾಸ್ತ್ರಗಳಿಂದ ವಂಚಿಸಿ ಗುಲಾಮರನ್ನಾಗಿಸಿದ ಪರಿಣಾಮವಾಗಿ, ಪರದೇಶಿ ಆಕ್ರಮಣಕಾರರು ಸುಮಾರು 2,000 ವರ್ಷಗಳ ಕಾಲ ಭಾರತದೇಶವನ್ನು ಗುಲಾಮಗಿರಿಯಲ್ಲಿರಿಸಲು ಸಾಧ್ಯವಾಯಿತು. ಚಾತುರ್ವರ್ಣ್ಯ ವ್ಯವಸ್ಥೆಯ ಹಳೆಯ ಮೀಸಲಾತಿ ನೀತಿಯಿಂದ ಆಗಿದ್ದ ಅನಾಹುತವನ್ನು, ಹೊಸ ಮೀಸಲಾತಿ ನೀತಿಯು ಸರಿಪಡಿಸಿದ್ದರಿಂದಲೇ ಇಂದು ಭಾರತ ದೇಶದ ಗಡಿಗಳು ಸುಭದ್ರವಾಗಿವೆ. ಇಂದು ನಮ್ಮ ನಾಡಿನಲ್ಲಿ ನಡೆಯುತ್ತಿರುವ ಎಲ್ಲಾ ಕ್ಷೋಭೆಗಳ ಹಿಂದೆ, ಹಳೆಯ ಮೀಸಲಾತಿ ನೀತಿಯ ಫಲಾನುಭವಿಗಳು ಹೊಸ ಫಲಾನುಭವಿಗಳ ವಿರುದ್ಧ ನಡೆಸುತ್ತಿರುವ ಮಸಲತ್ತೇ ಮೂಲಕಾರಣವಾಗಿದೆ. ಹಳೆಯ ಮೀಸಲಾತಿಯು ಜಾರಿಯಲ್ಲಿದ್ದ ಕಾಲದಲ್ಲಿ, ಅದರ ಫಲಾನುಭವಿಗಳು ಪರದೇಶಿ ಆಕ್ರಮಣಕಾರರನ್ನು ಕೆಂಪು ಹಾಸು ಹಾಕಿ ಸ್ವಾಗತಿಸಿದರೆ, ಅದೇ ಮೀಸಲಾತಿ ನೀತಿಯ ಬಲಿಪಶುಗಳಾಗಿದ್ದ ಶೂದ್ರರು ಆಕ್ರಮಣಕಾರರ ಪಡೆಗಳಲ್ಲಿ ಸೈನಿಕರಾಗಿ ಹೋರಾಡಿರುವ ವಿಪರ್ಯಾಸದ ಚರಿತ್ರೆಯನ್ನು ಮರೆಯಬಾರದು. ಚರಿತ್ರೆಯನ್ನು ಮರೆಯುತ್ತಿರುವ ಅಜ್ಞಾನಿಗಳು ಪುಣೆಯ ಭೀಮಾನದಿ ತೀರದಲ್ಲಿರುವ ಕೋರೆಗಾಂವ್ ಯುದ್ಧ ಸ್ಮಾರಕನ್ನು ಒಮ್ಮೆ ನೋಡಿ ಬರಬೇಕಾಗಿದೆ.

ಇದೀಗ, ಮನುವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ಹೊಸ ಮೀಸಲಾತಿ ನೀತಿಯತ್ತ ನೋಡೋಣ. ಜನವರಿ 26, 1950ರಂದು ಕಾರ್ಯರೂಪಕ್ಕೆ ಬಂದ ಭಾರತದ ಸಂವಿಧಾನದ ಪ್ರಕಾರ, ಮೀಸಲಾತಿಯು ಮೂಲಭೂತವಾಗಿ ಎರಡು ರೂಪಗಳಲ್ಲಿದೆ. ಅನುಚ್ಛೇದ 16(4)ರ ಪ್ರಕಾರ, ಸರಕಾರಿ ಸೇವೆಗಳಲ್ಲಿ ಎಲ್ಲಾ ಹಿಂದುಳಿದ ವರ್ಗಗಳಿಗೆ ಮೀಸಲಾತಿಯಿದೆ. ಎರಡನೆಯದಾಗಿ, ಅನುಚ್ಛೇದಗಳು 330 ಮತ್ತು 332ರ ಪ್ರಕಾರ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಕ್ರಮವಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೀಸಲಾತಿಯಿದೆ.

ಛತ್ರಪತಿ ಶಾಹುಮಹಾರಾಜರು ಜುಲೈ 26, 1902ರಂದು ತಮ್ಮ ಕೊಲ್ಹಾಪುರ ಸಂಸ್ಥಾನದಲ್ಲಿ, ಮೊತ್ತಮೊದಲ ಬಾರಿಗೆ ಸರಕಾರಿ ನೌಕರಿಗಳಲ್ಲಿ ಬ್ರಾಹ್ಮಣೇತರರಿಗೆ ಶೇ.50ರಷ್ಟು ಮೀಸಲಾತಿಯನ್ನು ಜಾರಿಮಾಡಿದರು. ಇವರಂತೆಯೇ, ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಬ್ರಾಹ್ಮಣೇತರರಿಗೆ ತಮ್ಮ ಸರಕಾರದಲ್ಲಿ ಶೇ.75ರಷ್ಟು ಮೀಸಲಾತಿಯನ್ನು 1921ರಲ್ಲಿ ನೀಡಿದರು. ಶಾಹುಮಹಾರಾಜರ ನಿರ್ಧಾರವನ್ನು ಉಗ್ರವಾಗಿ ವಿರೋಧಿಸಿದ ಬಾಲಗಂಗಾಧರ ತಿಲಕರು ಕೋರ್ಟ್‌ಗೆಮೊರೆಹೋಗಿ ಸೋತರು. ನಂತರ, ತಿಲಕರು ಬ್ರಿಟಿಷ್ ಸರಕಾರಕ್ಕೆ ಮನವಿ ಸಲ್ಲಿಸಿ, ಕೊಲ್ಹಾಪುರ ಸಂಸ್ಥಾನವನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೇರ್ಪಡೆ ಮಾಡುವಂತೆ ವಿನಂತಿಸಿಕೊಂಡರು. ಅವರ ಮನವಿಯಲ್ಲಿ, ಅವರು ಬ್ರಿಟಿಷ್ ಸರಕಾರಕ್ಕೆ ಹೇಳಿರುವುದೇನೆಂದರೆ, ‘‘ಮನುಸ್ಮತಿಯ ಅನುಸಾರ ನೀವು ಆಡಳಿತ ನಡೆಸುವುದಾದರೆ, ನೀವು ಹಲವು ವರ್ಷಗಳ ಕಾಲ ಇಲ್ಲಿ ದೊರೆಗಳಾಗಿರಬಹುದು. ನೀವು ರಾಜರಾಗಿರಿ, ನಾವು ನಿಮಗೆ ಮಂತ್ರಿಗಳಾಗಿರುತ್ತೇವೆ’’! ಆದರೆ, ಬ್ರಿಟಿಷರು ತಿಲಕರ ಮಾತಿಗೆ ಮರುಳಾಗಲಿಲ್ಲ. ಆಗ, ತಿಲಕರು ಶಾಹುಜೀಯವರ ವಿರುದ್ಧ ತಮ್ಮವರನ್ನು ಎತ್ತಿಕಟ್ಟಿ ಹೋರಾಟಕ್ಕಿಳಿದರು. ಇನ್ನು ನಾಲ್ವಡಿ ಕೃಷ್ಣರಾಜ ಒಡೆಯರು, ಜಾನ್ ಮಿಲ್ಲರ್‌ರವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಿಸಿದಾಗಲೇ, ಅವರ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ತೀವ್ರವಾಗಿ ವಿರೋಧಿಸಿ, ತಮ್ಮ ಸ್ಥಾನವನ್ನು ಕಳೆದುಕೊಂಡರು! ಹೀಗೆ ಆರಂಭದಿಂದಲೇ, ಸರಕಾರಿ ಸೇವೆಗಳಲ್ಲಿರುವ ಮೀಸಲಾತಿಯ ವಿರುದ್ಧ ಮನುವಾದಿಗಳು ಪ್ರತಿಭಟಿಸುತ್ತಾ ಬಂದಿದ್ದಾರೆ. ಏಕೆಂದರೆ, ಈ ಮೀಸಲಾತಿ ನೀತಿಯಿಂದಾಗಿ ಚಾತುರ್ವರ್ಣ್ಯ ವ್ಯವಸ್ಥೆಯು ಧ್ವಂಸವಾಗುತ್ತದೆ ಎನ್ನುವುದು ಅವರಿಗೆ ಅಂದೇ ಮನವರಿಕೆಯಾಗಿತ್ತು!

 ಉದ್ಯೋಗ ಮೀಸಲಾತಿಯು ಎಲ್ಲಾ ಹಿಂದುಳಿದ ವರ್ಗಗಳಿಗೆ ಅಥವಾ ಬ್ರಾಹ್ಮಣೇತರ ವರ್ಗಗಳಿಗೆ ಸಂಬಂಧಿಸಿದ್ದಾಗಿತ್ತು. ಆದರೆ ರಾಜಕೀಯ ಮೀಸಲಾತಿಯು ಕೇವಲ ಎಸ್ಸಿ/ಎಸ್ಟಿಗಳಿಗೆ ಮಾತ್ರ ಸಂಬಂಧಿಸಿದ್ದು, ಅದಕ್ಕೆ ಬೇರೆಯದೇ ಆದ ಚರಿತ್ರೆಯಿದೆ. ಸಿಪಾಯಿ ದಂಗೆಯ ನಂತರ, ಭಾರತೀಯರಿಗೆ ಆಡಳಿತದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಲು ನಿರ್ಧರಿಸಿದ ಬ್ರಿಟಿಷ್ ಸರಕಾರವು, ಆರಂಭಕ್ಕೆ ಧರ್ಮವನ್ನು ಆಧರಿಸಿ, ವಿವಿಧ ಧಾರ್ಮಿಕ ಗುಂಪುಗಳಿಗೆ ಪ್ರಾತಿನಿಧ್ಯವನ್ನು ನೀಡಿದರು. ಎಲ್ಲಾ ಹಿಂದುಳಿದ ಜಾತಿಗಳನ್ನು (ಶೂದ್ರಾತಿಶೂದ್ರರು) ‘ಹಿಂದೂಗಳು’ ಎಂಬ ಹಣೆಪಟ್ಟಿಯಲ್ಲಿ ಒಂದುಗೂಡಿಸಿದ್ದ ಬ್ರಾಹ್ಮಣರು ಆಡಳಿತದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆದಿದ್ದರು. ಇದನ್ನು ಗಮನಿಸಿದ ಮುಸ್ಲಿಮ್ ನಾಯಕರು, 1905ರಲ್ಲಿ, ನೂರಕ್ಕೆ ನೂರರಷ್ಟು ಹಿಂದೂಗಳಲ್ಲದವರನ್ನು ಹಿಂದೂಗಳಿಂದ ಪ್ರತ್ಯೇಕಿಸುವಂತೆ, ಬ್ರಿಟಿಷರಿಗೆ ಮನವಿ ಸಲ್ಲಿಸಿದರು. ಅದರಂತೆಯೇ, 1911ರ ಜನಗಣತಿಯಲ್ಲಿ, ಹಿಂದೂಗಳಲ್ಲದವರನ್ನು ಪ್ರತ್ಯೇಕಿಸಲು ಬ್ರಿಟಿಷ್ ಜನಗಣತಿ ಆಯುಕ್ತರು 10 ಮಾನದಂಡಗಳನ್ನು ನಿಗದಿ ಪಡಿಸಿದರು. ಈ ಮಾನದಂಡಗಳ ಆಧಾರದ ಮೇಲೆ 429 ಹಿಂದೂಗಳಲ್ಲದ ಸಮುದಾಯಗಳನ್ನು ಗುರುತಿಸಿ, ಅವರನ್ನು (i) UNTOUCHABLES; (ii) ANIMISTS ಮತ್ತು (iii) TRIBALSಎಂದು ವಿಂಗಡಿಸಿದರು. ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಭಿನ್ನರಾಗಿರುವ ಈ ಹಿಂದೂಗಳಲ್ಲದ ಸಮುದಾಯಗಳಿಗೆ ರಾಜಕೀಯವಾಗಿಯೂ ಪ್ರತ್ಯೇಕ ಮಾನ್ಯತೆ ನೀಡಬೇಕೆನ್ನುವುದೇ ಬಾಬಾಸಾಹೇಬ್ ಅಂಬೇಡ್ಕರ್‌ರವರ ನಿಲುವಾಗಿತ್ತು. ಆದರೆ, ಈ ಸಮುದಾಯಗಳೂ ಸಹ ಹಿಂದೂಗಳೇ ಆಗಿರುವುದರಿಂದ ಪ್ರತ್ಯೇಕ ರಾಜಕೀಯ ಮಾನ್ಯತೆಯ ಅವಶ್ಯಕತೆಯಿಲ್ಲ ಎನ್ನುವುದು ಗಾಂಧೀಜಿ ಮತ್ತು ಕಾಂಗ್ರೆಸ್ ನಾಯಕರ ನಿಲುವಾಗಿತ್ತು. 1919ರಲ್ಲಿ ಜಾರಿಗೆ ಬಂದ ಭಾರತ ಸರಕಾರ ಕಾಯ್ದೆಯು, ಬಾಬಾಸಾಹೇಬರ ಮನವಿಯನ್ನು ಮನ್ನಿಸಿ, ಹಿಂದೂಗಳಿಂದ ಮುಟ್ಟಿಸಿಕೊಳ್ಳದೆ ದೂರವುಳಿದು ತಮ್ಮ ಪ್ರತ್ಯೇಕತೆಯನ್ನು ಕಾಪಾಡಿಕೊಂಡಿರುವ ಸಮುದಾಯಗಳಿಗೆ ಪ್ರತ್ಯೇಕ ರಾಜಕೀಯ ಮಾನ್ಯತೆಯನ್ನು ನೀಡಿ, ಅವರ ಪ್ರತಿನಿಧಿಗಳನ್ನು ಕೇಂದ್ರ ಮತ್ತು ಪ್ರಾಂತೀಯ ಸಭೆಗಳಿಗೆ ನೇಮಿಸುವ ವ್ಯವಸ್ಥೆ ಮಾಡಿದರು.

1927-28ರಲ್ಲಿ, ಭಾರತಕ್ಕೆ ಬಂದ ಸೈಮನ್ ಆಯೋಗವನ್ನು ಭೇಟಿ ಮಾಡಿ ಮತ್ತೊಂದು ಮನವಿಯನ್ನು ಸಲ್ಲಿಸಿದ ಡಾ. ಅಂಬೇಡ್ಕರರು, ‘‘ಶಾಸನ ಸಭೆಗಳಿಗೆ ಶೋಷಿತ ವರ್ಗದ ಪ್ರತಿನಿಧಿಗಳನ್ನು ನೇಮಿಸುವುದರಿಂದ, ಆ ವರ್ಗಗಳಿಗೆ ಯಾವುದೇ ಉಪಯೋಗವಾಗಿಲ್ಲ. ಆದಕಾರಣ, ವಯಸ್ಕ ಮತದಾನದ ಪದ್ಧತಿಯುಳ್ಳ ಪ್ರತ್ಯೇಕ ಚುನಾಯಕಗಳನ್ನು (Separate Electrorates) ನೀಡುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ’’ ಎಂಬ ಕೋರಿಕೆಯನ್ನು ಮುಂದಿಟ್ಟರು. ಭಾರತದಲ್ಲಿದ್ದ ವಿಭಿನ್ನ ಸಾಮಾಜಿಕ ಗುಂಪುಗಳ ಪ್ರತಿನಿಧಿಗಳಿಗೂ ಶೋಷಿತ ವರ್ಗಗಳ ನಾಯಕರಾಗಿದ್ದ ಡಾ. ಅಂಬೇಡ್ಕರ್‌ರವರಿಗೂ ಮಾನ್ಯತೆ ನೀಡಿದ ಸೈಮನ್ ಆಯೋಗವನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ವಿರೋಧಿಸಿ, ಅದರ ಸಭೆಗಳನ್ನು ಬಹಿಷ್ಕರಿಸಿದರು. ಕಾಂಗ್ರೆಸ್ ನಾಯಕರ ವಿರೋಧವನ್ನು ನಿವಾರಿಸುವ ಪ್ರಯತ್ನವನ್ನು ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಮಾಡಲಾಯಿತು.

Writer - ಎಂ. ಗೋಪಿನಾಥ್

contributor

Editor - ಎಂ. ಗೋಪಿನಾಥ್

contributor

Similar News

ಜಗದಗಲ
ಜಗ ದಗಲ