30 ಕೋಟಿ ವಿದ್ಯಾರ್ಥಿಗಳು ವಾರಗಳ ಕಾಲ ಮನೆಯಲ್ಲಿ: ಯುನೆಸ್ಕೊ
ರೋಮ್ (ಇಟಲಿ), ಮಾ. 5: ವ್ಯಾಪಕವಾಗಿ ಹರಡುತ್ತಿರುವ ಕೊರೋನವೈರಸ್ ಸೋಂಕಿನ ಹಿನ್ನೆಲೆಯಲ್ಲಿ, ಜಾಗತಿಕವಾಗಿ ಸುಮಾರು 30 ಕೋಟಿ ವಿದ್ಯಾರ್ಥಿಗಳು ವಾರಗಳ ಕಾಲ ಮನೆಯಲ್ಲಿಯೇ ಉಳಿಯಬೇಕಾಗಿ ಬರುವ ಸಾಧ್ಯತೆಯನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ. ಶಾಲೆಗಳನ್ನು ಮುಚ್ಚುತ್ತಿರುವ ದೇಶಗಳ ಪಟ್ಟಿಗೆ ಹೊಸದಾಗಿ ಈಗ ಇಟಲಿ ಸೇರ್ಪಡೆಗೊಂಡಿದೆ.
ಕೊರೋನವೈರಸ್‌ನಿಂದಾಗಿ ಜಾಗತಿಕವಾಗಿ 3,200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 95,000ಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ವೈರಸ್ ಈಗ ಸುಮಾರು 80 ದೇಶಗಳಿಗೆ ಹರಡಿದೆ.
13 ದೇಶಗಳು ಶಾಲೆಗಳನ್ನು ಮುಚ್ಚಿದ್ದು, 29.05 ಕೋಟಿ ಮಕ್ಕಳು ತೊಂದರೆಗೀಡಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಘಟಕ ಯುನೆಸ್ಕೊ ಬುಧವಾರ ತಿಳಿಸಿದೆ. ಇತರ 9 ದೇಶಗಳು ಅಲ್ಲಲ್ಲಿ ಶಾಲೆಗಳನ್ನು ಮುಚ್ಚಿವೆ.
‘‘ಬಿಕ್ಕಟ್ಟಿನ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಶಾಲೆಗಳನ್ನು ಮುಚ್ಚುವುದು ಹೊಸತಲ್ಲವಾದರೂ, ಜಾಗತಿಕ ಮಟ್ಟದಲ್ಲಿ ಶಾಲೆಗಳು ಮುಚ್ಚುತ್ತಿರುವ ಇಂದಿನ ಪ್ರಮಾಣ ಮತ್ತು ವೇಗ ಹಿಂದೆಂದೂ ಇರಲಿಲ್ಲ. ಇದು ಮುಂದುವರಿದರೆ ಶಿಕ್ಷಣದ ಹಕ್ಕಿಗೇ ಬೆದರಿಕೆಯೊಡ್ಡಬಹುದು’’ ಎಂದು ಯುನೆಸ್ಕೊ ಮುಖ್ಯಸ್ಥ ಆಡ್ರಿ ಅಝೂಲಾಯ್ ಹೇಳಿದ್ದಾರೆ.