ಮೀಸಲಾತಿಯು ನಿರಂತರವಾಗಿರಬೇಕೇ? ನಿರ್ಧರಿಸುವವರು ಯಾರು?

Update: 2020-03-06 03:49 GMT

ಭಾಗ-2

ರಾಜಕೀಯ ಮೀಸಲಾತಿಯ ವಿರುದ್ಧ ಯಾರೂ ದನಿಯೆತ್ತಿಲ್ಲ. ಯಾಕೆಂದರೆ, ಮೀಸಲು ಕ್ಷೇತ್ರಗಳಿಂದ ಆರಿಸಿ ಬರುವ ಎಸ್ಸಿ/ಎಸ್ಟಿಗಳು, ಡಾ. ಅಂಬೇಡ್ಕರರ ಕಾಲದಿಂದಲೂ, ತಮ್ಮ ತಮ್ಮ ಪಕ್ಷಗಳಿಗೆ ನಿಷ್ಠಾವಂತರಾಗಿದ್ದಾರೆಯೇ ಹೊರತು, ತಮಗೆ ಜನ್ಮ ನೀಡಿದ ಸಮುದಾಯಗಳಿಗೆ ನಿಷ್ಠರಾಗಿಲ್ಲ. ಡಾ. ಅಂಬೇಡ್ಕರ್‌ರವರು ಅತ್ಯಂತ ದುಃಖಿತರಾಗಿ ಹೇಳಿದ್ದೇನೆಂದರೆ, ‘‘ಎಸ್ಸಿ/ಎಸ್ಟಿ ಪ್ರತಿನಿಧಿಗಳು ತಮ್ಮ ಪಕ್ಷದ ಆಣತಿಯನ್ನು ಪಾಲಿಸುವಂತಹ ಮೂಗುದಾರ ಹಾಕಿದ ಮೂಕಪಶುಗಳಾಗಿದ್ದಾರೆ. ಯಾವ ಉದ್ದೇಶಕ್ಕಾಗಿ, ಇವರಿಗೆ ರಾಜಕೀಯ ಮೀಸಲಾತಿಯನ್ನು ಪಡೆಯಲಾಯಿತೋ, ಆ ಉದ್ದೇಶಗಳು ಈಡೇರುತ್ತಿಲ್ಲ.’’


1931-32ರಲ್ಲಿ, ನಡೆದ ಎರಡನೆಯ ದುಂಡು ಮೇಜಿನ ಸಭೆಯಲ್ಲಿ, ‘‘ಶೋಷಿತ ವರ್ಗಗಳು ಹಿಂದೂಗಳಲ್ಲವಾದ್ದರಿಂದ, ಇತರ ಹಿಂದೂಯೇತರ ಸಮುದಾಯಗಳಾದ ಮುಸ್ಲಿಮ್, ಕ್ರೈಸ್ತ, ಸಿಖ್ಖರಿಗೆ ನೀಡಿರುವಂತಹ ಪ್ರತ್ಯೇಕ ಚುನಾಯಕಗಳನ್ನು ತಮಗೂ ನೀಡಬೇಕು’’ ಎಂದು ಡಾ. ಅಂಬೇಡ್ಕರ್ ವಾದಿಸಿದರು. ತಮ್ಮ ವಾದಕ್ಕೆ ಸಮರ್ಥನೆಯಾಗಿ, ತಾವು ಮುನ್ನಡೆಸಿದ್ದ ಚೌಡರ್‌ಕೆರೆ ಮತ್ತು ಕಾಲಾರಾಂ ದೇವಸ್ಥಾನ ಪ್ರವೇಶ ಚಳವಳಿಗಳನ್ನು ಪ್ರಸ್ತಾಪಿಸಿದರು. ತಾವು ಹಿಂದೂಗಳಲ್ಲವಾದ್ದರಿಂದಲೇ, ತಮಗೆ ಹಿಂದೂಗಳು ಸಾರ್ವಜನಿಕ ಕೆರೆಯಲ್ಲಿ ನೀರನ್ನು ಮುಟ್ಟಲು ಬಿಡಲಿಲ್ಲ ಮತ್ತು ಕಾಲಾರಾಂ ದೇವಸ್ಥಾನಕ್ಕೆ ಪ್ರವೇಶ ನೀಡಲಿಲ್ಲ ಎಂದು ವಾದಿಸಿದರು. ಬಾಬಾಸಾಹೇಬರ ಶಕ್ತಿಯುತವಾದದ ಎದುರು ಗಾಂಧೀಜಿಯವರು ನಿರುತ್ತರರಾದರೂ, ‘‘ಶೋಷಿತರು ಹಿಂದೂಗಳಲ್ಲ ಎಂಬ ವಾದವು ಸರಿಯಲ್ಲವೆಂದೂ, ಅವರಿಗೆ ಪ್ರತ್ಯೇಕ ಚುನಾಯಕಗಳನ್ನು ನೀಡುವುದು ಸಮರ್ಥನೀಯವಲ್ಲ’’ ಎಂದು ವಾದಿಸಿದರು. ‘‘ಈ ದೇಶಕ್ಕೆ ಸ್ವಾತಂತ್ರ್ಯ ದೊರಕದಿದ್ದರೂ ಚಿಂತೆಯಿಲ್ಲ. ಆದರೆ, ಶೋಷಿತರು ರಾಜಕೀಯವಾಗಿ ಪ್ರತ್ಯೇಕವಾಗುವುದನ್ನು ನಾನು ಸಹಿಸಲಾರೆ. ಅವರಿಗೆ ಬೇಕೆನಿಸಿದರೆ, ಅವರು ಇಸ್ಲಾಮ್ ಅಥವಾ ಕ್ರೈಸ್ತ ಧರ್ಮಕ್ಕೆ ಹೋಗಲಿ. ಆದರೆ ಹಿಂದೂಗಳಾಗಿದ್ದುಕೊಂಡು, ಪ್ರತ್ಯೇಕ ಚುನಾಯಕಗಳನ್ನು ಬೇಡುವುದು ಸರಿಯಲ್ಲ’’ ಎಂದು ಅವರು ವಾದಿಸಿದರು. ಮುಂದೆ, ಆಗಸ್ಟ್ 17, 1932ರಂದು ಬ್ರಿಟಿಷ್ ಸರಕಾರವು ಘೋಷಿಸಿದ ‘ಕಮ್ಯುನಲ್ ಅವಾರ್ಡ್’ನಲ್ಲಿ, ಶೋಷಿತರಿಗೆ ಎರಡು ಮತದಾನಗಳ ಹಕ್ಕುಳ್ಳ 78 ಪ್ರತ್ಯೇಕ ಚುನಾಯಕಗಳನ್ನು ನೀಡಲಾಯಿತು. ಈ ವ್ಯವಸ್ಥೆಯ ಪ್ರಕಾರ, ಒಂದು ಹೋಟಿನ ಮೂಲಕ ಅವರು ತಮ್ಮ ಪ್ರತಿನಿಧಿಗಳನ್ನು ತಾವೇ ಆರಿಸುವುದು ಹಾಗೂ ಮತ್ತೊಂದು ಹೋಟಿನ ಮೂಲಕ ಸಾಮಾನ್ಯ ಕ್ಷೇತ್ರಗಳ ಇತರರನ್ನು ಆರಿಸುವುದು.

ಶೋಷಿತ ವರ್ಗಗಳಿಗೆ ದೊರಕಿದ 78 ಪ್ರತ್ಯೇಕ ಚುನಾಯಕಗಳನ್ನು ಹಾಗೂ ಎರಡು ಹೋಟುಗಳ ಹಕ್ಕನ್ನು ತೀವ್ರವಾಗಿ ವಿರೋಧಿಸಿದ ಗಾಂಧೀಜಿಯವರು, ಸೆಪ್ಟಂಬರ್ 20, 1932ರಂದು ಪುಣೆಯ ಯರವಾಡ ಜೈಲಿನಲ್ಲಿ ಆಮರಣಾಂತ ಉಪವಾಸವನ್ನು ಕೈಗೊಂಡರು. ತಮ್ಮ ಉಪವಾಸ ಸತ್ಯಾಗ್ರಹದ ಮೂಲಕ ಅವರು ಬಾಬಾಸಾಹೇಬರ ಮೇಲೆ ತೀವ್ರವಾದ ಒತ್ತಡವನ್ನು ಹಾಕಿದರು. ಒಂದೆಡೆ, ಗಾಂಧೀಜಿಯವರ ಪ್ರಾಣವನ್ನು ಉಳಿಸಬೇಕು, ಮತ್ತೊಂದೆಡೆ ಶತಮಾನಗಳ ಕಾಲ ಶೋಷಿತರಾಗಿರುವ ತಮ್ಮವರ ಹಕ್ಕುಗಳನ್ನು ಸಂರಕ್ಷಿಸುವಂತಹ ಒತ್ತಡಕ್ಕೆ ಬಾಬಾಸಾಹೇಬರು ಸಿಲುಕಿದರು. ಕೊನೆಗೆ, ಒಂದು ಹೊಂದಾಣಿಕೆ ಸೂತ್ರವನ್ನು ಒಪ್ಪಿಕೊಳ್ಳಲಾಯಿತು. ಶೋಷಿತ ವರ್ಗದ ಪ್ರತಿನಿಧಿಗಳನ್ನು ಶೋಷಿತ ಸಮಾಜದ ಮತದಾರರೇ ಆರಿಸುವಂತಹ 78 ಪ್ರತ್ಯೇಕ ಚುನಾಯಕಗಳ ಬದಲಿಗೆ, ಎಲ್ಲರೂ ಕೂಡಿ ಮತ ಚಲಾಯಿಸಿ, ಶೋಷಿತ ವರ್ಗದ ಪ್ರತಿನಿಧಿಗಳನ್ನು ಆರಿಸುವಂತಹ ಜಂಟಿ ವ್ಯವಸ್ಥೆಯುಳ್ಳ 151 ಮೀಸಲು ಕ್ಷೇತ್ರಗಳನ್ನು ಶೋಷಿತರಿಗೆ ನೀಡಲಾಯಿತು. ಇದಕ್ಕೆ ಪೂರಕವಾಗಿ ಕಾರ್ಯಾಂಗದಲ್ಲೂ ಸರಕಾರಿ ಸೇವೆಗಳಲ್ಲೂ ಮೀಸಲಾತಿಯನ್ನು ನೀಡುವಂತೆ ತೀರ್ಮಾನಿಸಲಾಯಿತು. ಈ ರಾಜಕೀಯ ಮೀಸಲಾತಿಯು ಮುಂದಿನ 20 ವರ್ಷಗಳ ತನಕ ಜಾರಿಯಲ್ಲಿರಬೇಕೆಂದು ಎರಡೂ ಪಕ್ಷಗಳವರು ಒಪ್ಪಿಕೊಂಡರು. ಇದುವೇ ಪುಣೆ ಕರಾರು. ಈ ಕರಾರಿನ ಷರತ್ತುಗಳನ್ನು 1935ರಲ್ಲಿ ಜಾರಿಯಾದ ಎರಡನೆಯ ಭಾರತ ಸರಕಾರ ಕಾಯ್ದೆಯಲ್ಲಿ ಅಡಕಗೊಳಿಸಲಾಯಿತು. ಈ ಕಾಯ್ದೆಯ ಮೂಲಕ ಹಿಂದೂಗಳಲ್ಲದ ಸಮುದಾಯಗಳಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳು ಎಂಬ ಹೊಸ ನಾಮದೇಯವನ್ನು ನೀಡಲಾಯಿತು.

ಮುಂದೆ, ಸ್ವತಂತ್ರ ಭಾರತದ ಸಂವಿಧಾನದಲ್ಲಿ ಪ.ಜಾ/ ಪ.ವ.ಗಳಿಗೆ ನೀಡಲಾದ ರಾಜಕೀಯ ಮೀಸಲಾತಿಯನ್ನು ಮುಂದಿನ ಹತ್ತು ವರ್ಷಗಳ ತನಕ ಜಾರಿಯಲ್ಲಿರುವಂತೆ ತೀರ್ಮಾನಿಸಲಾಯಿತು. ಆದರೆ, ಪ್ರತಿ ಹತ್ತು ವರ್ಷಕ್ಕೊಮ್ಮೆ, ಮುಂದಿನ ಹತ್ತು ವರ್ಷಗಳ ತನಕ ಈ ರಾಜಕೀಯ ಮೀಸಲಾತಿಯನ್ನು, ಬಹುಮತದ ಮೂಲಕ ಮುಂದುವರಿಸುತ್ತಲೇ ಬರಲಾಗಿದೆ. ಈ ರಾಜಕೀಯ ಮೀಸಲಾತಿಯ ವಿರುದ್ಧ ಯಾರೂ ದನಿಯೆತ್ತಿಲ್ಲ. ಯಾಕೆಂದರೆ, ಮೀಸಲು ಕ್ಷೇತ್ರಗಳಿಂದ ಆರಿಸಿ ಬರುವ ಎಸ್ಸಿ/ಎಸ್ಟಿಗಳು, ಡಾ. ಅಂಬೇಡ್ಕರರ ಕಾಲದಿಂದಲೂ, ತಮ್ಮ ತಮ್ಮ ಪಕ್ಷಗಳಿಗೆ ನಿಷ್ಠಾವಂತರಾಗಿದ್ದಾರೆಯೇ ಹೊರತು, ತಮಗೆ ಜನ್ಮ ನೀಡಿದ ಸಮುದಾಯಗಳಿಗೆ ನಿಷ್ಠರಾಗಿಲ್ಲ. ಡಾ. ಅಂಬೇಡ್ಕರ್‌ರವರು ಅತ್ಯಂತ ದುಃಖಿತರಾಗಿ ಹೇಳಿದ್ದೇನೆಂದರೆ, ‘‘ಎಸ್ಸಿ/ಎಸ್ಟಿ ಪ್ರತಿನಿಧಿಗಳು ತಮ್ಮ ಪಕ್ಷದ ಆಣತಿಯನ್ನು ಪಾಲಿಸುವಂತಹ ಮೂಗುದಾರ ಹಾಕಿದ ಮೂಕಪಶುಗಳಾಗಿದ್ದಾರೆ. ಯಾವ ಉದ್ದೇಶಕ್ಕಾಗಿ, ಇವರಿಗೆ ರಾಜಕೀಯ ಮೀಸಲಾತಿಯನ್ನು ಪಡೆಯಲಾಯಿತೋ, ಆ ಉದ್ದೇಶಗಳು ಈಡೇರುತ್ತಿಲ್ಲ.’’ ಇಂತಹ ದನಿಸತ್ತ ಪ್ರತಿನಿಧಿಗಳಿಂದ, ಹಳೆಯ ಮೀಸಲಾತಿಯಾದ ಚಾತುರ್ವರ್ಣ್ಯ ವ್ಯವಸ್ಥೆಯು ಮತ್ತಷ್ಟು ಗಟ್ಟಿಯಾಗುತ್ತಿದೆಯೇ ಹೊರತು ಶಿಥಿಲವಾಗುತ್ತಿಲ್ಲ. ಆದ್ದರಿಂದಲೇ, ಎಸ್ಸಿ/ಎಸ್ಟಿಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಮತ್ತು ಶೋಷಣೆಗಳು ಹೆಚ್ಚುತ್ತಲೇ ಹೊರಟಿವೆ! ಮೀಸಲಾತಿಯ ವಿರುದ್ಧ ಬರುತ್ತಿರುವ ಎಲ್ಲಾ ಆಕ್ಷೇಪಗಳೂ ಉದ್ಯೋಗಕ್ಕೆ ಸಂಬಂಧಿಸಿದ್ದೇ ಹೊರತು, ರಾಜಕೀಯ ಮೀಸಲಾತಿಗೆ ಸಂಬಂಧಿಸಿದ್ದಲ್ಲ. ಸ್ವತಂತ್ರ ಭಾರತದ ಸಂವಿಧಾನವನ್ನು ರಚಿಸಲೆಂದು ಆಯ್ಕೆಯಾಗಿದ್ದ ರಾಜ್ಯಾಂಗ ಸಭೆಯಲ್ಲಿಯೂ ಸಹ ಈ ವಿವಾದವು ದೊಡ್ಡ ಅಲೆಯನ್ನು ಎಬ್ಬಿಸಿತ್ತು.

ಕಾಂಗ್ರೆಸಿಗರು ಬಹುಸಂಖ್ಯಾತರಿದ್ದ ಆ ಸಭೆಯಲ್ಲಿ, ಡಾ. ಅಂಬೇಡ್ಕರ್ ಮತ್ತು ಜೋಗೆಂದ್ರನಾಥ್ ಮಂಡಲ್‌ರವರ ಅಭಿಪ್ರಾಯಗಳಿಗೆ ಮನ್ನಣೆಯಿರಲಿಲ್ಲ. ಕಾಂಗ್ರೆಸ್ ನಾಯಕರೆಲ್ಲ ಒಕ್ಕೊರಲಿನಿಂದ, ರಾಜಕೀಯದಲ್ಲಿ ಮೀಸಲಾತಿಯಿರಲಿ, ಆದರೆ ಸರಕಾರಿ ಸೇವೆಗಳಲ್ಲಿರುವ ಮೀಸಲಾತಿಯನ್ನು ಸ್ವತಂತ್ರ ಭಾರತದಲ್ಲಿ ಮುಂದುವರಿಸುವುದು ಬೇಡ ಎಂದು ನಿರ್ಣಯ ಕೈಗೊಂಡರು. ಇದಕ್ಕೆ ನೀಡಿದ ಕಾರಣವೇನೆಂದರೆ, ಉದ್ಯೋಗದಲ್ಲಿರುವ ಮೀಸಲಾತಿಯಿಂದಾಗಿ, ಸರಕಾರಿ ಕಚೇರಿಗಳಲ್ಲಿ ಜಾತೀಯತೆಯ ಗದ್ದಲ ಶುರುವಾಗುತ್ತದೆ ಎಂಬುದು. ಮಾರ್ಚ್ 15, 1947ರಂದು, ಉದ್ಯೋಗ ಮೀಸಲಾತಿಯನ್ನು ರದ್ದುಗೊಳಿಸುವ ನಿರ್ಣಯವು ಅಂಗೀಕಾರಗೊಂಡಿತು. ಈ ನಿರ್ಣಯದ ವಿರುದ್ಧ ಡಾ. ಅಂಬೇಡ್ಕರ್‌ರವರು ಜನರನ್ನು ಸಂಘಟಿಸಿ ಸಾರ್ವಜನಿಕ ಪ್ರತಿಭಟನೆಗಳನ್ನು ನಡೆಸತೊಡಗಿದರು. ಇದರಿಂದ ಕಾಂಗ್ರೆಸ್ ನಾಯಕರಿಗೆ ಬಹಳ ಇರಿಸುಮುರಿಸಾಗತೊಡಗಿತು. ಇದಕ್ಕೆ ಪ್ರತೀಕಾರವೆಂಬಂತೆ, ಮುಂದೆ, ಭಾರತ ಮತ್ತು ಪಾಕಿಸ್ತಾನಗಳು ಪ್ರತ್ಯೇಕವಾದಾಗ, ಡಾ. ಅಂಬೇಡ್ಕರ್‌ರವರು ಪ್ರತಿನಿಧಿಸುತ್ತಿದ್ದ, ಬಂಗಾಳದ ಕುಲ್ನಾರ್ ಮತ್ತು ಜೈಸೂರ್ ಪ್ರದೇಶವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲಾಯಿತು. ಆ ಭಾಗದಲ್ಲಿ ಮುಸ್ಲಿಮರ ಜನಸಂಖ್ಯೆಯು ಅಲ್ಪಪ್ರಮಾಣದಲ್ಲಿದ್ದರೂ, ಡಾ. ಅಂಬೇಡ್ಕರ್‌ರನ್ನು ರಾಜ್ಯಾಂಗ ಸಭೆಯಿಂದ ಹೊರಗಿರಿಸಲೆಂದೇ, ಆ ಪ್ರದೇಶವನ್ನು ಪಾಕಿಸ್ತಾನಕ್ಕೆ ನೀಡಲಾಯಿತು.

ಪಾಕಿಸ್ತಾನ ದೇಶವು ಬಾಬಾ ಸಾಹೇಬರನ್ನು ತನ್ನ ರಾಜ್ಯಾಂಗ ಸಭೆಯ ಸದಸ್ಯರನ್ನಾಗಿ ಸ್ವಾಗತಿಸಲು ಸಿದ್ಧವಾಗಿತ್ತು. ಆದರೆ ಬಾಬಾಸಾಹೇಬರು, ಅದಕ್ಕೆ ಒಪ್ಪದೆ, ಭಾರತದಲ್ಲೇ ಉಳಿದು ಭಾರತದ ರಾಜ್ಯಾಂಗ ಸಭೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರು! ನಂತರ, ಬಾಬಾಸಾಹೇಬರು ತಮಗಾದ ಅನ್ಯಾಯವನ್ನು ಬ್ರಿಟಿಷ್ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟರು. ತಾವು ರಾಜ್ಯಾಂಗ ಸಭೆಯಲ್ಲಿ ಇಲ್ಲದೆ ಹೋದರೆ, ಸ್ವತಂತ್ರ ಭಾರತದಲ್ಲಿ ಹಿಂದುಳಿದ ವರ್ಗಗಳ ಪರಿಸ್ಥಿತಿಯು ಎಷ್ಟು ಹದಗೆಡಬಹುದೆಂಬುದನ್ನು ಅವರಿಗೆ ತಿಳಿಸಿಕೊಟ್ಟರು. ಬ್ರಿಟಿಷ್ ಸರಕಾರದ ಮಧ್ಯಸ್ಥಿಕೆಯಿಂದಾಗಿ, ಕಾಂಗ್ರೆಸ್ ಪಕ್ಷವು ಅನಿವಾರ್ಯವಾಗಿ, ಒಂದು ಉಪ ಚುನಾವಣೆಯನ್ನು ಸೃಷ್ಟಿಸಿ, ಡಾ. ಅಂಬೇಡ್ಕರ್‌ರನ್ನು ರಾಜ್ಯಾಂಗ ಸಭೆಗೆ ಚುನಾಯಿಸಿದ್ದಲ್ಲದೆ, ಕಾನೂನು ಸಚಿವರನ್ನಾಗಿ ಮಾಡಬೇಕಾಯಿತು. ಮುಂದೆ, ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಅಂಬೇಡ್ಕರ್‌ರವರು ರದ್ದಾಗಿದ್ದ ಉದ್ಯೋಗ ಮೀಸಲಾತಿಯನ್ನು ಅನುಚ್ಛೇದ 16(4) ಪ್ರಕಾರ ಮೂಲಭೂತ ಹಕ್ಕುಗಳಲ್ಲಿ ಅಳವಡಿಸುವಲ್ಲಿ ಯಶಸ್ವಿಯಾದರು.

(ಮುಂದುವರಿಯುವುದು)

Writer - ಎಂ. ಗೋಪಿನಾಥ್

contributor

Editor - ಎಂ. ಗೋಪಿನಾಥ್

contributor

Similar News