×
Ad

ಟೈಮ್ ಮ್ಯಾಗಝಿನ್‌ ನ ‘ವಿಶ್ವದ 100 ಮಹಿಳೆಯರ’ ಪಟ್ಟಿಯಲ್ಲಿ ಇಂದಿರಾ ಗಾಂಧಿ, ಅಮೃತಾ ಕೌರ್

Update: 2020-03-06 23:52 IST

ನ್ಯೂಯಾರ್ಕ್,ಮಾ.6: ಟೈಮ್ ಮ್ಯಾಗಝಿನ್ ಸಿದ್ಧಪಡಿಸಿರುವ,ಕಳೆದ ಶತಮಾನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ವಿಶ್ವದ 100 ಮಹಿಳೆಯರ ಪಟ್ಟಿಯಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಸ್ವಾತಂತ್ರ ಹೋರಾಟಗಾರ್ತಿ ಅಮೃತಾ ಕೌರ್ ಅವರ ಹೆಸರುಗಳು ಸೇರ್ಪಡೆಗೊಂಡಿವೆ.

ಪ್ರಕಾಶನ ಸಂಸ್ಥೆಯು ಮರುಸೃಷ್ಟಿಸಿರುವ ಮ್ಯಾಗಝಿನ್‌ನ ವಿಶೇಷ ರಕ್ಷಾಪುಟಗಳಲ್ಲಿ ಕೌರ್ ಅವರನ್ನು 1947ನೇ ಸಾಲಿಗೆ ಮತ್ತು ಇಂದಿರಾರನ್ನು 1976ನೇ ಸಾಲಿಗೆ ‘ವರ್ಷದ ಮಹಿಳೆಯರು’ಎಂದು ಟೈಮ್ ಹೆಸರಿಸಿದೆ.

1976ರಲ್ಲಿ ಇಂದಿರಾ ಗಾಂಧಿ ಅವರು ಭಾರತದ ಮಹಾನ್ ಸರ್ವಾಧಿಕಾರಿಯಾಗಿದ್ದರು. ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ಅವರ ಪುತ್ರಿ ಇಂದಿರಾ ಎಷ್ಟು ವರ್ಚಸ್ಸಿಯಾಗಿದ್ದರೋ ಅಷ್ಟೇ ನಿರ್ದಯಿಯಾಗಿದ್ದರು. 1975ರಲ್ಲಿ ಆರ್ಥಿಕ ಅಸ್ಥಿರತೆಯ ಪರಿಣಾಮವಾಗಿ ಇಂದಿರಾರ ಸರಕಾರವು ಬೀದಿ ಪ್ರತಿಭಟನೆಗಳ ಮಹಾಪೂರದ ಸುಳಿಯಲ್ಲಿ ಸಿಲುಕಿತ್ತು ಮತ್ತು ಬಳಿಕ ಚುನಾವಣೆಯಲ್ಲಿ ಅವರ ಆಯ್ಕೆಯನ್ನು ನ್ಯಾಯಾಲಯವು ಅನೂರ್ಜಿತಗೊಳಿಸಿದಾಗ ಅವರು ತುರ್ತು ಸ್ಥಿತಿಯನ್ನು ಘೋಷಿಸಿದ್ದರು ಎಂದು ಸಂಕ್ಷಿಪ್ತ ವ್ಯಕ್ತಿಚಿತ್ರದಲ್ಲಿ ಟೈಮ್ ಹೇಳಿದೆ.

ಯುವ ರಾಜಕುಮಾರಿ ಅಮೃತಾ ಕೌರ್ ಆಕ್ಸ್‌ಫರ್ಡ್‌ನಲ್ಲಿ ವ್ಯಾಸಂಗದ ಬಳಿಕ 1918ರಲ್ಲಿ ಭಾರತಕ್ಕೆ ಮರಳಿದ್ದರು ಮತ್ತು ಕೆಲವೇ ಸಮಯದಲ್ಲಿ ಮಹಾತ್ಮಾ ಗಾಂಧಿಯವರ ಬೋಧನೆಗಳಿಂದ ಪ್ರಭಾವಿತರಾಗಿದ್ದರು. ಕಪೂರ್ತಲಾದ ರಾಜ ಮನೆತನದಲ್ಲಿ ಜನಿಸಿದ್ದ ಕೌರ್ ಭಾರತವು ವಸಾಹತುಶಾಹಿಯಿಂದ ಮತ್ತು ಕ್ರೂರ ಸಾಮಾಜಿಕ ಕಟ್ಟಲೆಗಳಿಂದ ಮುಕ್ತಗೊಳ್ಳಲು ನೆರವಾಗುವುದು ತನ್ನ ಜೀವನದ ಗುರಿ ಎಂದು ನಿರ್ಧರಿಸಿದ್ದರು. ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸಿದ ಅವರು ಮಹಿಳೆಯರ ಶಿಕ್ಷಣ,ಮತದಾನ ಮತ್ತು ವಿಚ್ಛೇದನದ ಹಕ್ಕುಗಳಿಗೆ ಒತ್ತು ನೀಡಿದ್ದರು ಹಾಗೂ ಬಾಲ್ಯವಿವಾಹದ ವಿರುದ್ಧ ಧ್ವನಿಯೆತ್ತಿದ್ದರು ಎಂದು ಕೌರ್ ವ್ಯಕ್ತಿಚಿತ್ರದಲ್ಲಿ ಟೈಮ್ ಹೇಳಿದೆ.

ಭಾರತವು 1947ರಲ್ಲಿ ಸ್ವಾತಂತ್ರ ಪಡೆದಾಗ ಕೌರ್ ಸಂಪುಟಕ್ಕೆ ಸೇರ್ಪಡೆಗೊಂಡ ಮೊದಲ ಮಹಿಳೆಯಾಗಿ 10 ವರ್ಷ ಆರೋಗ್ಯ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದ್ದ ಅವರು ದೇಶದ ಅತ್ಯುನ್ನತ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಸ್ಥಾಪನೆಗೆ ನೆರವಾಗಿದ್ದರು. ಮಲೇರಿಯಾ ತಡೆಯಲು ಅಭಿಯಾನ ನಡೆಸಿದ್ದ ಅವರು ಸಾವಿರಾರು ಜೀವಗಳನ್ನು ಉಳಿಸಿದ್ದರು ಎಂದೂ ಟೈಮ್ ಪ್ರಶಂಸಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News