ಡೇವಿಸ್ ಕಪ್: ಕ್ರೊಯೇಶಿಯ ವಿರುದ್ಧ ಪಂದ್ಯಕ್ಕೆ ಸುಮಿತ್ ಅಲಭ್ಯ

Update: 2020-03-06 18:49 GMT

ಮುಂಬೈ, ಮಾ.6: ಡೇವಿಸ್ ಕಪ್ ಗ್ರೂಪ್ ಕ್ವಾಲಿಫೈಯರ್ ಶುಕ್ರವಾರ ತಡರಾತ್ರಿ ಕ್ರೊಯೇಶಿಯದಲ್ಲಿ ಝಗ್ರೆಬ್‌ನಲ್ಲಿ ಆರಂಭವಾಗಲಿದ್ದು, ಭಾರತ ಹಾಗೂ ಕ್ರೊಯೇಶಿಯ ತಂಡಗಳು ತಮ್ಮ ಅಂತಿಮ ತಂಡದಲ್ಲಿ ಕೆಲವು ಅಚ್ಚರಿ ಆಯ್ಕೆ ಮಾಡಿವೆ.

ಗುರುವಾರ ಡ್ರಾ ಪ್ರಕ್ರಿಯೆಗೆ ಮೊದಲು ಕ್ರೊಯೇಶಿಯದ ತಂಡದ ಅಗ್ರಮಾನ್ಯ ಡಬಲ್ಸ್ ಆಟಗಾರ, ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಇವಾನ್ ಡೊಡಿಗ್ ಕೈನೋವಿನಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ವಿಶ್ವದ ನಂ.32ನೇ ಆಟಗಾರ ಫ್ರಾಂಕೊ ಕುಗೊರ್ ವಿಶ್ವದ ನಂ.10ನೇ ಆಟಗಾರ ಮ್ಯಾಟ್ ಪಾವಿಕ್ ಅವರೊಂದಿಗೆ ಡಬಲ್ಸ್ ಪಂದ್ಯ ಆಡಲಿದ್ದಾರೆ. ಈ ಜೋಡಿಯು ಭಾರತದ ಡಬಲ್ಸ್ ಸ್ಪೆಷಲಿಸ್ಟ್ ರೋಹನ್ ಬೋಪಣ್ಣ ಹಾಗೂ ಲಿಯಾಂಡರ್ ಪೇಸ್‌ರನ್ನು ಎದುರಿಸಲಿದೆ. ಭಾರತದ ಉನ್ನತ ರ್ಯಾಂಕಿನ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್(127)ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಭಾರತದ ನಂ.2ನೇ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಬೊರ್ನ ಗೊಜೊ ಅವರನ್ನು ಎದುರಿಸಲಿದ್ದಾರೆ. ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಮಾಜಿ ನಂ.3ನೇ ಆಟಗಾರ ಮರಿನ್ ಸಿಲಿಕ್ ಅವರು ರಾಮಕುಮಾರ್ ರಾಮನಾಥನ್‌ರನ್ನು ಎದುರಿಸಲಿದ್ದಾರೆ. ಶನಿವಾರ ರಿವರ್ಸ್ ಪಂದ್ಯಗಳಿಗಿಂತ ಮೊದಲು ಡಬಲ್ಸ್ ಪಂದ್ಯ ನಡೆಯಲಿದೆ.

ಕ್ರೊಯೇಶಿಯಕ್ಕೆ ತೆರಳಿರುವ ಭಾರತದ ಆರು ಸದಸ್ಯರ ತಂಡದಲ್ಲಿ ಮೂವರು ಡಬಲ್ಸ್ ಸ್ಪೆಷಲಿಸ್ಟ್‌ಗಳಾದ ವಿಶ್ವದ ನಂ.37ನೇ ಹಾಗೂ ದೇಶದ ಉನ್ನತ ರ್ಯಾಂಕಿನ ಆಟಗಾರ ಬೋಪಣ್ಣ, ಭಾರತದ ನಂ.2 ದಿವಿಜ್ ಶರಣ್ ಹಾಗೂ ನಂ.5ನೇ ಆಟಗಾರ ಪೇಸ್ ಅವರಿದ್ದಾರೆ. ಪೇಸ್ ಈ ವರ್ಷವೇ ಟೆನಿಸ್‌ಗೆವಿದಾಯ ಹೇಳಲು ನಿರ್ಧರಿಸಿದ್ದಾರೆ.

127ನೇ ರ್ಯಾಂಕಿನ ಸುಮಿತ್ ನಗಾಲ್ ಅಗತ್ಯವಿದ್ದರೆ ಮಾತ್ರ ಪಂದ್ಯ ಆಡಲಿದ್ದಾರೆ. ಆಟಗಾರರನ್ನು ಬದಲಿಸುವ ಅವಕಾಶ ಇರುವ ಕಾರಣ ಸುಮಿತ್ ಆಡುವ ಸಾಧ್ಯತೆಯೂ ಇದೆ. ಬೆಸ್ಟ್ ಆಫ್ ತ್ರಿ ಮಾದರಿಯಲ್ಲಿ ಪಂದ್ಯಗಳನ್ನು ಆಡಲಾಗುತ್ತದೆ.

ಭಾರತ ಏಳು ವರ್ಷಗಳಲ್ಲಿ ಏಳನೇ ಬಾರಿ ವಿಶ್ವ ಗ್ರೂಪ್ ಸ್ಪರ್ಧೆಯಲ್ಲಿ ಪ್ರವೇಶಿಸುವ ಗುರಿ ಇಟ್ಟುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News