ಅಫ್ಘಾನ್ ಸರಕಾರವನ್ನು ತಾಲಿಬಾನ್ ಉರುಳಿಸಬಹುದು
ವಾಶಿಂಗ್ಟನ್, ಮಾ. 7: ಅಮೆರಿಕದ ಸೈನಿಕರು ಅಫ್ಘಾನಿಸ್ತಾನದಿಂದ ವಾಪಸಾದ ಬಳಿಕ, ಅಫ್ಘಾನ್ ಸರಕಾರವನ್ನು ತಾಲಿಬಾನ್ ಉರುಳಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
‘‘ದೇಶಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.
ತಾಲಿಬಾನ್ ನಿಧಾನವಾಗಿ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ‘‘ಹಾಗೆ ಆಗಬಾರದು, ಆದರೆ, ಹಾಗೆಯೇ ಆಗಬಹುದು’’ ಎಂದು ಹೇಳಿದರು.
‘‘ನಾವು ಅಲ್ಲಿ ಇನ್ನೂ 20 ವರ್ಷಗಳ ಕಾಲ ಇರಲು ಸಾಧ್ಯವಿಲ್ಲ. ನಾವು ಅಲ್ಲಿ 20 ವರ್ಷಗಳಿಂದ ಇದ್ದೇವೆ ಹಾಗೂ ದೇಶವನ್ನು ರಕ್ಷಿಸುತ್ತಿದ್ದೇವೆ. ಆದರೆ, ಇನ್ನೂ 20 ವರ್ಷಗಳ ಕಾಲ ನಾವು ಅಲ್ಲಿರಲು ಸಾಧ್ಯವಿಲ್ಲ. ಮುಂದೆ ಅವರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು’’ ಎಂದು ಟ್ರಂಪ್ ನುಡಿದರು.
ತಾಲಿಬಾನ್ ಅಫ್ಘಾನಿಸ್ತಾನವನ್ನು 1996ರಿಂದ 2001ರವರೆಗೆ ಆಳಿತ್ತು ಹಾಗೂ ಈ ಅವಧಿಯಲ್ಲಿ ಅದು ಮಹಿಳೆಯರ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಿತ್ತು.
ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಿಂದ ವಾಪಸಾದ ಬಳಿಕ, ತಾಲಿಬಾನ್ ಗೆರಿಲ್ಲಾಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಅಫ್ಘಾನ್ ಸರಕಾರಕ್ಕೆ ಇದೆಯೇ, ಇಲ್ಲವೇ ಎನ್ನುವುದು ತಿಳಿದಿಲ್ಲ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು.
‘‘ನನಗೆ ಗೊತ್ತಿಲ್ಲ. ಆ ಪ್ರಶ್ನೆಗೆ ನಾನು ಉತ್ತರಿಸಲಾರೆ’’ ಎಂದರು. ‘‘ಏನಾಗುತ್ತದೆ ಎನ್ನುವುದನ್ನು ನಾವು ನೋಡಬೇಕಷ್ಟೆ’’ ಎಂದು ಅವರು ನುಡಿದರು.