10ನೇ ತರಗತಿಯ ಪ್ರಶ್ನೆಪತ್ರಿಕೆಯಲ್ಲಿ ‘ಆಝಾದ್ ಕಾಶ್ಮೀರ’ ಎಂದು ಪಿಒಕೆ ಉಲ್ಲೇಖ!

Update: 2020-03-07 17:26 GMT

ಭೋಪಾಲ,ಮಾ.7: ರಾಜ್ಯ ಪರೀಕ್ಷಾ ಮಂಡಳಿಯ 10ನೇ ತರಗತಿಯ ಪ್ರಶ್ನೆಪತ್ರಿಕೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ವನ್ನು ‘ಆಝಾದ್ ಕಾಶ್ಮೀರ’ಎಂದು ಎರಡು ಬಾರಿ ಉಲ್ಲೇಖಿಸಲಾಗಿದ್ದು,ಇದು ಮಧ್ಯಪ್ರದೇಶದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿದೆ.

 ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆಯಲ್ಲಿ ‘ಆಝಾದ್ ಕಾಶ್ಮೀರ’ ಉಲ್ಲೇಖಗೊಂಡಿದ್ದು ಈಗಾಗಲೇ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ರಾಜ್ಯದಲ್ಲಿ ವಿವಾದವನ್ನು ಹುಟ್ಟಿಸಿದೆ. ಬಿಜೆಪಿಯು ತನ್ನ ಸರಕಾರವನ್ನು ಉರುಳಿಸಲು ತನ್ನ 14 ಶಾಸಕರನ್ನು ಅಪಹರಿಸಿದೆ ಎಂದು ಕಾಂಗ್ರೆಸ್‌ಆರೋಪಿಸಿದೆ.

ಪ್ರಶ್ನೆಪತ್ರಿಕೆ ವಿವಾದ ಕುರಿತು ಕಮಲನಾಥ ಸರಕಾರದ ವಿರುದ್ಧ ದಾಳಿ ನಡೆಸಿದ ಬಿಜೆಪಿ ನಾಯಕ ವಿಶ್ವಾಸ ಸಾರಂಗ ಅವರು,ಕಾಶ್ಮೀರವು ಮೊದಲೂ ನಮ್ಮದಾಗಿತ್ತು, ಭವಿಷ್ಯದಲ್ಲಿಯೂ ಅದು ನಮ್ಮದಾಗಿರಲಿದೆ. ದೇಶದ್ರೋಹದ ಅಡಿಯಲ್ಲಿ ಬರುವ ಇಂತಹ ಪ್ರಶ್ನೆಗಳನ್ನು ಕೇಳುವುದು ಕಾಂಗ್ರೆಸಿನ ಮಾನಸಿಕತೆಯನ್ನು ತೋರಿಸುತ್ತಿದೆ. ಕಾಂಗ್ರೆಸ್‌ನ ಮೂಲಕ ಪಾಕಿಸ್ತಾನವು ಭಾರತದಲ್ಲಿ ತನ್ನ ಅಜೆಂಡಾ ಜಾರಿಗೊಳಿಸುತ್ತಿದೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ನರೇಂದ್ರ ಸಲುಜಾ ಅವರು, ಅತ್ಯಂತ ಆಕ್ಷೇಪಾರ್ಹವಾದ ಈ ವಿಷಯವನ್ನು ಮುಖ್ಯಮಂತ್ರಿಗಳು ತಕ್ಷಣ ಗಮನಿಸಿದ್ದಾರೆ ಮತ್ತು ಕಾರಣಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ಅವರ ನಿರ್ದೇಶದ ಮೇರೆಗೆ ಪ್ರಶ್ನೆಪತ್ರಿಕೆ ಸಿದ್ಧಗೊಳಿಸಿದವರನ್ನು ತಕ್ಷಣ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News