ನನ್ನಲ್ಲಿ ಜನನ ಪ್ರಮಾಣ ಪತ್ರ ಇಲ್ಲ, ನಾನೇನು ಸಾಯಬೇಕೇ ?: ತೆಲಂಗಾಣ ಸಿಎಂ ಕೆಸಿಆರ್

Update: 2020-03-07 17:54 GMT

ಹೈದರಾಬಾದ್, ಮಾ. 7: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಕುರಿತ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ನನ್ನಲ್ಲಿ ಜನನ ಪ್ರಮಾಣ ಪತ್ರ ಇಲ್ಲ, ನಾನೇನು ಸಾಯಬೇಕೇ? ಎಂದು ಶನಿವಾರ ಪ್ರಶ್ನಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಂತಹ ವಿವಾದಾತ್ಮಕ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸಮಾಜದಲ್ಲಿ ಸಮಸ್ಯೆ ಸೃಷ್ಟಿಸುವ ಬದಲು ಕೇಂದ್ರ ಸರಕಾರ ರಾಷ್ಟ್ರೀಯ ಗುರುತು ಪತ್ರವನ್ನು ಪರಿಚಯಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ರಾಜ್ಯ ವಿಧಾನ ಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ಗೊತ್ತುವಳಿ ಕುರಿತ ಚರ್ಚೆಯ ವೇಳೆ ಮಧ್ಯಪ್ರವೇಶಿಸಿದ ಅವರು, ರಾಷ್ಟ್ರೀಯ ಜನಸಂಖ್ಯೆ ನೋಂದಣಿಯ ಭಾಗವಾಗಿ ತಮ್ಮ ಪೌರತ್ವ ಸಾಬೀತುಪಡಿಸಲು ಹೆತ್ತವರ ಜನನ ದಾಖಲೆಗಳನ್ನು ಸಲ್ಲಿಸಲು ಜನರಿಗೆ ತಿಳಿಸಲಾಗಿದೆ. ಇದು ತಪ್ಪು ಎಂದರು.

‘‘ಪ್ರಾಮಾಣಿಕವಾಗಿ ಹೇಳುತ್ತೇನೆ. ನನ್ನಲ್ಲಿ ಜನನ ಪ್ರಮಾಣಪತ್ರ ಇಲ್ಲ. ಈ ದೇಶದಲ್ಲಿ ನಾನು ಯಾರು ಎಂದು ಕೇಳಿದರೆ, ನಾನೇನು ಹೇಳಲಿ ? ನಾನು ಹೇಗೆ ಸಾಬೀತುಪಡಿಸಲಿ ? ನಾನು ನನ್ನ ಗ್ರಾಮದಲ್ಲಿ, ನನ್ನ ಮನೆಯಲ್ಲಿ ಜನಿಸಿದೆ. ಆಗ ಆಸ್ಪತ್ರೆ ಇರಲಿಲ್ಲ. ಆದುದರಿಂದ ನನ್ನಲ್ಲಿ ಜನನ ಪ್ರಮಾಣ ಪತ್ರ ಇಲ್ಲ’’ ಎಂದು ಅವರು ಹೇಳಿದರು.

ಹಿಂದಿನ ಕಾಲದಲ್ಲಿ ಪುರೋಹಿತರು ಜಾತಕ ಸಿದ್ಧಪಡಿಸುತ್ತಿದ್ದರು. ಅದನ್ನೇ ಜನನ ಪ್ರಮಾಣ ಪತ್ರವೆಂದು ಪರಿಗಣಿಸಲಾಗಿತ್ತು. ಅದರ ಮೇಲೆ ಸ್ಟಾಂಪ್ ಇಲ್ಲ. ಇಂದು ಕೂಡ ನನ್ನಲ್ಲಿ ಜನನ ನಕ್ಷತ್ರ ದಾಖಲೆಗಳು ಇವೆ. ಅದರಲ್ಲಿ ನನ್ನ ಪತ್ನಿಯ ನಕ್ಷತ್ರದ ವಿವರ ಕೂಡ ಇದೆ. ಈ ದಾಖಲೆ ಹೊರತುಪಡಿಸಿ ನನ್ನಲ್ಲಿ ಇತರ ಯಾವುದೇ ದಾಖಲೆಗಳಿಲ್ಲ. ನಾನು ಸಾಯಬೇಕೇ ? ತಂದೆಯ ಜನನ ಪ್ರಮಾಣ ಪತ್ರ ಕೇಳಿದರೆ, ಅದು ನನ್ನಲ್ಲಿ ಇಲ್ಲ ಎಂದು ಕೆ. ಚಂದ್ರಶೇಖರ ರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News