ಕೋರೋನಾ: ದೇಶದಲ್ಲಿ 40ಕ್ಕೆ ಏರಿದ ಸೋಂಕಿತರ ಸಂಖ್ಯೆ
ತಿರುವನಂತಪುರ/ಚೆನ್ನೈ, ಮಾ. 8: ಕೇರಳದ ಒಂದೇ ಕುಟುಂಬದ 5 ಮಂದಿಗೆ ಹಾಗೂ ತಮಿಳುನಾಡಿನಲ್ಲಿ ಓರ್ವನಿಗೆ ಕೊರೋನಾ ವೈರಾಣು ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ವೈರಾಣು ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
ಕೊರೋನಾ ಸೋಂಕು ದೃಢಪಟ್ಟ ಪತ್ತನಂತಿಟ್ಟ ಜಿಲ್ಲೆಯ ಐವರು ನಿವಾಸಿಗಳಲ್ಲಿ 50 ವರ್ಷದ ದಂಪತಿ ಹಾಗೂ ಅವರ 26 ವರ್ಷದ ಪುತ್ರ ಇತ್ತೀಚೆಗೆ ಇಟಲಿಗೆ ಭೇಟಿ ನೀಡಿದ್ದರು. ಇಟಲಿಯಿಂದ ಹಿಂದಿರುಗಿದ ಈ ಕುಟುಂಬ ಕೆಲವು ಸಂಬಂಧಿಕರನ್ನು ಭೇಟಿಯಾಗಿತ್ತು. ಇದರಿಂದ ಅವರ ಇಬ್ಬರು ಸಂಬಂಧಿಕರಿಗೆ ಕೂಡ ಕೊರೋನಾ ವೈರಾಣು ಸೋಂಕು ಉಂಟಾಗಿದೆ. ಈಗ ಈ ಕುಟುಂಬವನ್ನು ದಿಗ್ಬಂಧನದಲ್ಲಿ ಇರಿಸಲಾಗಿದೆ. ಕುಟುಂಬ ತಮ್ಮ ಪ್ರಯಾಣದ ವಿವರಗಳನ್ನು ವಿಮಾನ ನಿಲ್ದಾಣದಲ್ಲಿ ನೀಡಿರಲಿಲ್ಲ ಹಾಗೂ ತಪಾಸಣೆಗೆ ಒಳಗಾಗಿರಲಿಲ್ಲ. ಇದು ಕೊರೋನಾ ವೈರಾಣು ಸೋಂಕು ಹರಡಲು ಕಾರಣವಾಗಿದೆ. ಆದುದರಿಂದ ಜನರು ಪ್ರಯಾಣ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕು. ಪತ್ತನಂತಿಟ್ಟದಲ್ಲಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಕೆ. ಶೈಲಜಾ ಹೇಳಿದ್ದಾರೆ. ತಮಿಳುನಾಡಿನಲ್ಲಿ ಇನ್ನೋರ್ವ ವ್ಯಕ್ತಿಗೆ ಕೊರೋನಾ ವೈರಾಣು ಸೋಂಕು ಆಗಿರುವುದು ದೃಢಪಟ್ಟಿದೆ. ಕೊರೋನಾ ವೈರಾಣು ಸೋಂಕು ಉಂಟಾದ ಮೊದಲ ವ್ಯಕ್ತಿ ಒಮನ್‌ಗೆ ಭೇಟಿ ನೀಡಿದ್ದ ಎಂದು ರಾಜ್ಯ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ಶನಿವಾರ ತಿಳಿಸಿದ್ದಾರೆ. ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರನ್ನು ನಿಗಾದಲ್ಲಿ ಇರಿಸಲಾಗಿದೆ. ಸರಕಾರ ರಾಜ್ಯದಾದ್ಯಂತ ಪರಿಸ್ಥಿತಿಯನ್ನು ನಿರಂತರ ಅವಲೋಕಿಸುತ್ತಿದೆ ಎಂದು ಸಿ. ವಿಜಯಭಾಸ್ಕರ್ ತಿಳಿಸಿದ್ದಾರೆ.