ಸೋಮವಾರ ವರ್ಷದ ಎರಡನೇ ಸೂಪರ್‌ಮೂನ್
ಹೊಸದಿಲ್ಲಿ,ಮಾ.8: ವರ್ಷದ ಮೊದಲ ಸೂಪರ್‌ಮೂನ್ ಫೆ.9ರಂದು ಬಾನನ್ನು ಬೆಳಗಿದ ನಂತರ ಎರಡನೇ ಸೂಪರ್‌ಮೂನ್ ಸೋಮವಾರ ತನ್ನ ಸಂಪೂರ್ಣ ವೈಭವದೊಂದಿಗೆ ಕಾಣಿಸಿಕೊಳ್ಳಲು ಸಜ್ಜಾಗಿದೆ. ಅಂದು ಭೂಮಿಯ ಅತ್ಯಂತ ಸಮೀಪ ದಲ್ಲಿರುವ ಚಂದ್ರ ಎಂದಿಗಿಂತ ದೊಡ್ಡ ಗಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ,ಇದೇ ಕಾರಣ ದಿಂದ ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಈ ಎರಡನೇ ಸೂಪರ್‌ಮೂನ್ ಅನ್ನು ‘ವರ್ಮ್ ಮೂನ್’ ಎಂದು ಹೆಸರಿಸಲಾಗಿದೆ.
ಈ ತಿಂಗಳ ಸೂಪರ್‌ಮೂನ್ ರವಿವಾರ ನಸುಕಿನಿಂದ ಆರಂಭಗೊಂಡಿದ್ದು,ಬುಧವಾರ ಬೆಳಗಿನವರೆಗೆ ಸುಮಾರು ಮೂರು ದಿನಗಳ ಕಾಲ ಪೂರ್ಣಪ್ರಮಾಣದಲ್ಲಿ ಕಾಣಿಸಲಿದೆ. ಸೋಮವಾರ ಅದು ತನ್ನ ಗರಿಷ್ಠ ಪೂರ್ಣತೆಯನ್ನು ಪ್ರದರ್ಶಿಸಲಿದೆ.
ಪ್ರತಿಯೊಂದು ಗ್ರಹದಂತೆ ಭೂಮಿಯ ಸುತ್ತಲಿನ ಚಂದ್ರನ ಕಕ್ಷೆಯೂ ವರ್ತುಲಾಕಾರದಲ್ಲಿಲ್ಲ. ಅದು ಅಂಡಾಕಾರ ಅಥವಾ ದೀರ್ಘ ವೃತ್ತಾಕಾರವನ್ನು ಹೊಂದಿದೆ. ಅಂದರೆ ಚಂದ್ರ ಪೃಥ್ವಿಯನ್ನು ಪರಿಭ್ರಮಿಸುವಾಗ ಹತ್ತಿರಕ್ಕೆ ಬರುತ್ತಿರುತ್ತಾನೆ ಮತ್ತು ದೂರಕ್ಕೆ ಸರಿಯುತ್ತಿರುತ್ತಾನೆ. ಹುಣ್ಣಿಮೆಗೆ ಒಂದೆರಡು ದಿನಗಳು ಬಾಕಿಯಿರುವಾಗ ಚಂದ್ರ ನಮ್ಮ ಗ್ರಹಕ್ಕೆ ಅತ್ಯಂತ ಸಮೀಪಕ್ಕೆ ಬಂದಾಗ ಅದನ್ನು ಸೂಪರ್‌ಮೂನ್ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಚಂದ್ರ ಎಂದಿಗಿಂತ ದೊಡ್ಡ ಗಾತ್ರದಲ್ಲಿ ಮತ್ತು ಅತ್ಯಂತ ಪ್ರಕಾಶಮಾನವಾಗಿ ಕಂಡುಬರುತ್ತಾನೆ. ಸೂಪರ್‌ಮೂನ್ ಶಬ್ದ ಮೊದಲ ಬಾರಿಗೆ 1979ರಲ್ಲಿ ಚಾಲ್ತಿಗೆ ಬಂದಿದ್ದು, ಶೀಘ್ರವೇ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿತ್ತು.
ಸೂಪರ್‌ಮೂನ್ ನಾಮಕರಣ ಪ್ರಕ್ರಿಯೆಯು ಮುಖ್ಯವಾಗಿ ಅಮೆರಿಕನ್ ಮೂಲನಿವಾಸಿ ಪ್ರದೇಶಗಳು ಮತ್ತು ಋತುಮಾನಗಳೊಂದಿಗೆ ತಳುಕು ಹಾಕಿಕೊಂಡಿದೆ. ಉತ್ತರ ಅಮೆರಿಕದ ದಕ್ಷಿಣಕ್ಕೆ ನಿಕಟವಾಗಿರುವ ಬುಡಕಟ್ಟು ಜನರು ಸೋಮವಾರದ ವಿದ್ಯಮಾನಕ್ಕೆ ‘ವರ್ಮ್ ಮೂನ್’ಎಂದು ನಾಮಕರಣ ಮಾಡಿದ್ದಾರೆ. ವರ್ಷದ ಈ ಸಮಯದಲ್ಲಿ ಭೂಮಿಯ ಮಣ್ಣು ಸಡಿಲಗೊಂಡು ಎರೆಹುಳುಗಳ ಕುರುಹುಗಳು ಮೇಲ್ಮೈಯಲ್ಲಿ ಕಂಡುಬರುವುದರೊಂದಿಗೆ ವಸಂತ ಋತುವಿನ ಆಗಮನವನ್ನು ಸೂಚಿಸುತ್ತವೆ. ಇದೇ ಕಾರಣದಿಂದ ಇದಕ್ಕೆ ‘ವರ್ಮ್ ಮೂನ್’ಎಂದು ಹೆಸರಿಸಲಾಗಿದೆ.
ಮುಂದಿನ ಸೂಪರ್‌ಮೂನ್ ‘ಸೂಪರ್ ಪಿಂಕ್ ಮೂನ್’ಈ ವರ್ಷದ ಎ.8ರಂದು ಕಾಣಿಸಲಿದೆ.