ನಾವು ಅನಾಥರ ಜಗತ್ತನ್ನು ನಿರ್ಮಿಸುತ್ತಿದ್ದೇವೆ: ದಿಲ್ಲಿ ಹಿಂಸಾಚಾರದ ಬಗ್ಗೆ ಶಿವಸೇನೆ

Update: 2020-03-08 17:23 GMT
Photo: twitter.com/ShivSena/photo

ಹೊಸದಿಲ್ಲಿ, ಮಾ.8: ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಕೋಮು ಹಿಂಸಾಚಾರವು ಸಾವಿನ ಅಮಾನವೀಯ ನೃತ್ಯವಾಗಿತ್ತು. ಇಲ್ಲಿ ನಡೆದಿದ್ದ ಹತ್ಯಾಕಾಂಡವನ್ನು ನೋಡಿದ್ದರೆ ಯಮರಾಜನೂ ತನ್ನ ಪದವಿಯನ್ನು ತ್ಯಜಿಸಿ ಓಡುತ್ತಿದ್ದ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಇಂದಿನ ರಾಜಕೀಯದಲ್ಲಿ ಮಾನವೀಯತೆಯ ಕೊರತೆಯಿದೆ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ರವಿವಾರದ ಅಂಕಣದಲ್ಲಿ ರಾವತ್ ಹೇಳಿದ್ದಾರೆ. ರಾಜಕೀಯವು ಮಾನವೀಯತೆಯನ್ನು ಕಳೆದುಕೊಂಡಿದೆ. ಈ ರಾಜಕೀಯದಲ್ಲಿ ಕ್ರೂರ ಧಾರ್ಮಿಕ ಉನ್ಮಾದ ಮತ್ತು ಆ ಉನ್ಮಾದದಲ್ಲಿ ಹೊಸದಾಗಿ ರೂಪಿಸಲಾದ ರಾಷ್ಟ್ರೀಯತೆ ಹುಟ್ಟುತ್ತದೆ. ಇಂತಹ ರಾಷ್ಟ್ರೀಯತೆಯು ದೇಶದಲ್ಲಿ ಉಳಿದಿರುವ ವ್ಯಕ್ತಿಗಳನ್ನು ಕೊಲ್ಲುತ್ತದೆ ಎಂದು ರಾವತ್ ಹೇಳಿದ್ದು, ಹಿಂಸಾಚಾರದ ಹೊಣೆ ಹೊತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ.

ದಿಲ್ಲಿಯಲ್ಲಿ ನಡೆದ ಗಲಭೆಯ ದೃಶ್ಯಗಳು ಹೃದಯವನ್ನು ಕಿವುಚುತ್ತವೆ. ಹಿಂದು ಮತ್ತು ಮುಸ್ಲಿಮ್ ಸಮುದಾಯದ 100ಕ್ಕೂ ಹೆಚ್ಚು ಅಮಾಯಕ ಮಕ್ಕಳು ಅನಾಥರಾಗಿದ್ದಾರೆ. ಅನಾಥರ ಹೊಸ ವಿಶ್ವವನ್ನೇ ನಾವು ನಿರ್ಮಿಸುತ್ತಿದ್ದೇವೆ. ಹಿಂದುತ್ವ, ನಾಸ್ತಿಕತೆ, ಹಿಂದು-ಮುಸ್ಲಿಮ್, ಕ್ರಿಶ್ಚಿಯನ್-ಮುಸ್ಲಿಮ್ ನಡುವಿನ ಸಂಘರ್ಷದಿಂದ ವಿಶ್ವವು ವಿನಾಶದ ಅಂಚಿಗೆ ಬಂದು ತಲುಪಿದೆ. ಕೋಮು ಹಿಂಸಾಚಾರದಲ್ಲಿ ಜನತೆ ಸಾಯುತ್ತಿದ್ದಾರೆ. ರಕ್ಷಿಸಲು ದೇವರಿಗೆ ಮೊರೆ ಇಡಲಾಗುತ್ತಿದೆ. ಆದರೆ ಇಲ್ಲಿ ಜನರೇ ಸ್ವಯಂ ತಮ್ಮನ್ನು ರಕ್ಷಿಸಿಕೊಳ್ಳಬೇಕಾಗಿದೆ. ಅತ್ಯಂತ ತುರ್ತು ಅಗತ್ಯದ ಸಂದರ್ಭದಲ್ಲೇ ಸರಕಾರವೂ ಬೆನ್ನು ತಿರುಗಿಸಿದೆ. ದಂಗೆಯಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವ ಮಕ್ಕಳ ಅಸಹಾಯಕ ಫೋಟೊವನ್ನು ಕಂಡ ಬಳಿಕವೂ ಜನತೆ ಹಿಂದು- ಮುಸ್ಲಿಮ್ ಜಪ ಮಾಡುತ್ತಿದ್ದರೆ ಅದು ಮಾನವೀಯತೆಯ ಸಾವು ಆಗಿದೆ ಎಂದು ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News