ಕೊರೋನ ಹಾವಳಿ: ಈ ದೇಶದ ಜೈಲುಗಳಿಂದ 70 ಸಾವಿರ ಕೈದಿಗಳ ಬಿಡುಗಡೆ
Update: 2020-03-09 23:07 IST
ಟೆಹರಾನ್,ಮಾ.10: ಕೊರೋನ ಹಾವಳಿ ನಿಯಂತ್ರಣ ಮೀರಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಇರಾನಿನ ಸೆರೆಮನೆಗಳಲ್ಲಿರುವ 70 ಸಾವಿರಕ್ಕೂ ಅಧಿಕ ಮಂದಿ ಕೈದಿಗಳನ್ನು ಬಿಡುಗಡೆಗೊಳಿಸಿರುವುದಾಗಿ ಇರಾನ್‌ನ ನ್ಯಾಯಾಂಗ ವರಿಷ್ಠ ಇಬ್ರಾಹೀಂ ರೈಸಿ ಸೋಮವಾರ ತಿಳಿಸಿದ್ದಾರೆ.
ಆದರೆ ನಿರ್ದಿಷ್ಟ ಅವಧಿಯ ಬಳಿಕ ಈ ಕೈದಿಗಳು ಜೈಲುಗಳಿಗೆ ಮರಳಬೇಕಾಗಿದೆಯೇ ಎಂಬ ಬಗ್ಗೆ ರೈಸಿ ಯಾವುದೇ ಮಾಹಿತಿಯನ್ನು ನೀಡಿಲ್ಲವೆಂದು ಇರಾನ್‌ನ ನ್ಯಾಯಾಂಗ ಕುರಿತ ಜಾಲತಾಣ ‘ಮಿಝಾನ್’ ತಿಳಿಸಿದೆ.
ಕೊರೋನ ಸೋಂಕು ಜೈಲುಗಳಲ್ಲಿ ಹರಡಿದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆಯಿರುವುದರಿಂದ ಇರಾನ್ ಕೈದಿಗಳನ್ನು ಬಿಡುಗಡೆಗೊಳಿಸುವ ಕ್ರಮಕ್ಕೆ ಮುಂದಾಗಿದೆಯೆನ್ನಲಾಗಿದೆ.