ಕೊರೋನವೈರಸ್: ಅಮೆರಿಕದಲ್ಲಿ ಸಾವಿನ ಸಂಖ್ಯೆ 21ಕ್ಕೇರಿಕೆ
Update: 2020-03-09 23:09 IST
ಲಾಸ್‌ಏಂಜಲೀಸ್,ಮಾ.10: ಅಮೆರಿಕದಲ್ಲಿಯೂ ಕೊರೋನ ವೈರಸ್‌ನ ಮರಣ ಮೃದಂಗ ಮುಂದುವರಿದಿದ್ದು, ರವಿವಾರದಂದು ಸೋಂಕು ಪೀಡಿತರ ಸಂಖ್ಯೆ 500ನ್ನು ದಾಟಿದೆ. ಸಿಯಾಟಲ್ ನಗರ ಸಮೀಪದ ಶುಶ್ರೂಷಾ ಕೇಂದ್ರದಲ್ಲಿ ರವಿವಾರದಂದು ಇಬ್ಬು ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಅಮೆರಿಕಾದ್ಯಂತ ಈ ರೋಗಕ್ಕೆ ಬಲಿಯಾದವರ ಸಂಖ್ಯೆ 21ಕ್ಕೇರಿದೆ.
ನ್ಯೂಯಾರ್ಕ್ ರಾಜ್ಯದಲ್ಲಿ 100ಕ್ಕೂ ಅಧಿಕ ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಲ್ಲಿನ ಎಲ್ಲಾ ಶಾಲಾ ಕಾಲೇಜುಗಳ ತರಗತಿಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಹಾಗೂ ತುರ್ತುಸ್ಥಿತಿಯನ್ನು ಘೋಷಿಸಲಾಗಿದೆ.
ರವಿವಾರದಂದು ನ್ಯೂಯಾರ್ಕ್ ರಾಜ್ಯದಲ್ಲಿ ಕೊರೋನ ಪೀಡಿತರ ಸಂಖ್ಯೆ 106ಕ್ಕೆ ಜಿಗಿದಿದ್ದು, ರಾಜ್ಯದಾದ್ಯಂತ ಕೊಲಂಬಿಯಾ ವಿವಿ ಹಾಗೂ ಇತರ ಶಾಲೆಗಳಲ್ಲಿ ತರಗತಿಗಳನ್ನು ಮುಚ್ಚುಗಡೆಗೊಳಿಸಲಾಗಿದೆ.