ಶಿಕ್ಷಕರ ವೃತ್ತಿ - ಬದ್ಧತೆ

Update: 2020-03-09 18:01 GMT

ಡಾ. ಜಗನ್ನಾಥ ಕೆ. ಡಾಂಗೆ

ಇತ್ತೀಚೆಗೆ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದಂತಹ ಎಸ್. ಸುರೇಶ್‌ಕುಮಾರ್‌ರವರು ‘‘ಮುಖ್ಯಶಿಕ್ಷಕರ ಮೇಲೆ ನಂಬಿಕೆ ಇಟ್ಟಿದ್ದೆವು. ಆದರೆ ಅವರು ಆ ನಂಬಿಕೆ ಉಳಿಸಿಕೊಳ್ಳಲಿಲ್ಲ’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆಲ್ಲಾ ಪ್ರಮುಖ ಕಾರಣವೆಂದರೆ ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಬಹಿರಂಗಗೊಳಿಸಿದ್ದು.

ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ, ಜಗತ್ತಿನ ಅಂಕುಡೊಂಕುಗಳನ್ನು ಸರಿಪಡಿಸುವ ಶಿಕ್ಷಕರಾದಂತಹವರೇ ಈ ತರಹದ ಕೆಲಸಗಳನ್ನು ಮಾಡಿದರೆ, ಶಿಕ್ಷಣದ ಗುರಿ ಉದ್ದೇಶಗಳೇ ಬುಡಮೇಲಾದಂತೆ. ಶಿಕ್ಷಣದಿಂದ ಸಮಾಜವು ಏಳಿಗೆಯಾಗುವ ಬದಲು ಸಮಾಜಕ್ಕೆ ಮಾರಕವಾಗುತ್ತಿರುವುದು ಕಳವಳದ ಸಂಗತಿ.ಇದನ್ನು ಊಹಿಸಿಕೊಂಡಾಗ ಎಷ್ಟರ ಮಟ್ಟಿಗೆ ನಮ್ಮ ಶಿಕ್ಷಣ ವ್ಯವಸ್ಥೆ ಫಲ ನೀಡಿದೆ ಎಂಬುದನ್ನು ಮನಗಾಣಬಹುದು. ಇದೆಲ್ಲವನ್ನು ಗಮನಿಸಿದಾಗ ವಿದ್ಯಾರ್ಥಿಗಳ ಭವಿಷ್ಯವನ್ನು ಸೃಷ್ಟಿಸುವವರಾರು? ಸಮಾಜವನ್ನು ತಿದ್ದುವವರಾರು? ಎನ್ನುವ ಪ್ರಶ್ನೆ ಉದ್ಭವಿಸುವುದುಂಟು. ಅನಾದಿಕಾಲದಿಂದಲೂ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯೆಂದು ಪ್ರಸಿದ್ಧಿ ಪಡೆದಿದೆ. ಆ ನಿಟ್ಟಿನಲ್ಲಾದರೂ ಆಲೋಚಿಸಿ ಶಿಕ್ಷಕರಾಗುವಂತಹವರು ಶಿಕ್ಷಕರ ಕರ್ತವ್ಯ ನಿಷ್ಠೆಯನ್ನು ಅರಿಯುವುದು ಬಹಳ ಮುಖ್ಯ, ಇಲ್ಲದಿದ್ದರೆ ನಂಬಿಕೆ ಜೊತೆಗೆ ಶಿಕ್ಷಕ ವೃತ್ತಿಗೆ ಅವಮಾನಿಸಿದಂತೆ ಮತ್ತು ದ್ರೋಹವೆಸಗಿದಂತೆ. ಶಿಕ್ಷಕರು ತಪ್ಪು ಮಾಡಿದರೆ ಸಮಾಜವನ್ನು ತಪ್ಪಿನೆಡೆಗೆ ಕೊಂಡೊಯ್ದಂತೆ. ಉತ್ತಮ ಸಮಾಜದೊಂದಿಗೆ ಸಂತೋಷದಾಯಕ ಸಮಾಜ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಅಗಾಧವಾಗಿರುತ್ತದೆ. ವಿದ್ಯಾರ್ಥಿಗಳ, ಸಹಶಿಕ್ಷಕರ ಸರಿತಪ್ಪನ್ನು ತಿದ್ದಿ ಸರಿಯಾದ ಮಾರ್ಗದಲ್ಲಿ ನಡೆಸುವವರೇ ಈ ರೀತಿಯ ಅನೈತಿಕ ಕೆಲಸಗಳಿಗೆ, ಕೆಟ್ಟ ಸಂಪ್ರದಾಯಕ್ಕೆ ದಾರಿಮಾಡಿಕೊಟ್ಟಿರುವುದು ಬೇಜವಾಬ್ದಾರಿ ಮತ್ತು ಅಗೌರವದ ಸ್ಥಿತಿಯನ್ನು ಎತ್ತಿತೋರಿಸುತ್ತದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಯೋಜನೆಯನ್ನು ರೂಪಿಸಬೇಕಾದುದು ನಮ್ಮ ನಿಮ್ಮೆಲ್ಲರ ಹಾಗೂ ಸರಕಾರದ ಮುಖ್ಯ ಕರ್ತವ್ಯ ಹಾಗೂ ಆ ಮಾರ್ಗವೆಂದರೆ ಪರಿಣಾಮಕಾರಿಯಾದ ಶಿಕ್ಷಕರ ತರಬೇತಿ.

ಇಂದಿನ ಸಮಾಜದಲ್ಲಿ ವಿದ್ಯಾವಂತರು ಅದರಲ್ಲೂ ಅತಿ ಹೆಚ್ಚು ವಿದ್ಯೆ ಪಡೆದವರೇ ಎಡವುತ್ತಿರುವುದನ್ನು ಗಮನಿಸಬಹುದು. ಅದಕ್ಕಾಗಿ ಸರಕಾರ, ಶಿಕ್ಷಣತಜ್ಞರು, ಶಿಕ್ಷಕ ತರಬೇತಿ ಕೇಂದ್ರಗಳ ಶಿಕ್ಷಕರು, ಶಿಕ್ಷಣ ವಿಭಾಗದ ಪ್ರಾಧ್ಯಾಪಕರು, ಸಂಶೋಧಕರು, ಸಮಾಜ-ಸುಧಾರಕರು, ಅರೆ-ಸರಕಾರಿ ಸಂಘಸಂಸ್ಥೆಗಳು, ಮುಂದಾಲೋಚನೆಯುಳ್ಳವರು ಮತ್ತು ಸೃಜನಶೀಲತೆಯುಳ್ಳವರು ಭವಿಷ್ಯದ ಗಮನವಿಟ್ಟುಕೊಂಡು, ಸರಿಯಾದ ನೀತಿನಿಯಮಗಳನ್ನು ರೂಪಿಸಲು ಸಲಹೆ ಸೂಚನೆಗಳನ್ನು ನೀಡಬೇಕು. ಶಿಕ್ಷಕರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ಯಥೇಚ್ಛವಾಗಿ ಬರೀ ಬೋಧನೆ ಮಾಡುವುದನ್ನು ಕಲಿಸದೆ, ಸಮಾನಭಾವದಿಂದ ಎಲ್ಲರನ್ನು ಕಾಣುವ, ಭ್ರಷ್ಟತೆಗೆ ಕಡಿವಾಣ ಹಾಕುವುದರ ಜೊತೆಗೆ ಮುಂದಿನ ತಲೆಮಾರಿಗೆ ಅಗತ್ಯವಿರುವ ಕೌಶಲಗಳನ್ನು, ಸಾಮರ್ಥ್ಯಗಳನ್ನು, ಜ್ಞಾನವನ್ನು ಗುರುತಿಸಿ, ಪೋಷಿಸಿ, ಬೆಳೆಸುವ ರೀತಿಯಲ್ಲಿ ಶಿಕ್ಷಕರ ತರಬೇತಿಯ ಅವಧಿಯಲ್ಲಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಸರಕಾರಗಳು ಮತ್ತು ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗಲೂ ಜ್ಞಾನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು, ಇದರ ಜೊತೆಗೆ ಮೌಲ್ಯಯುತ, ಜವಾಬ್ದಾರಿಯುತ, ಗೌರವಯುತ ಮತ್ತು ಸಮಾಜದ ಏಳಿಗೆಗೆ ದುಡಿಯುವ, ಸಾಮಾಜಿಕ ಕಳಕಳಿಯುಳ್ಳ ಅಂಶಗಳನ್ನು ಒಳಗೊಂಡಿರುವಂತಹ ಅಭ್ಯರ್ಥಿಗಳನ್ನು ಶೋಧಿಸಿ ಆಯ್ಕೆ ಮಾಡಿಕೊಂಡರೆ ಉತ್ತಮವಾದೀತು.

ಬಿಎಡ್ ಹಾಗೂ ಇನ್ನಿತರ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡುವಾಗ ಕಾಲಕಾಲಕ್ಕೆ ಅನುಗುಣವಾಗಿ ಸಾಕಷ್ಟು ಅಂಶಗಳನ್ನು ಬದಲಾಯಿಸಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ವೃತ್ತಿ ಬದ್ಧತೆಗೆ ಹೆಚ್ಚಿನ ಅವಕಾಶವನ್ನು ಸೃಷ್ಟಿಸಬೇಕು ಮತ್ತು ಪ್ರಸ್ತುತ ದಿನಗಳಲ್ಲಿ ಶಿಕ್ಷಕರಿಗೆ ವೃತ್ತಿ ಸಂಹಿತೆಯೇ ಇಲ್ಲವಾಗಿದೆ ಎಂದರೆ ತಪ್ಪಾಗಲಾರದು. ಆದುದರಿಂದ ವೃತ್ತಿ ಸಂಹಿತೆಯನ್ನು ಪರಿಚಯಿಸಿ, ಪರಿಪಾಲಿಸುವಂತಹ ಸನ್ನಿವೇಶವನ್ನು ಏರ್ಪಡಿಸುವ ಮೂಲಕ ಮೌಲ್ಯಯುತ, ಆದರ್ಶಜೀವನದಲ್ಲಿ ಈ ಮೇಲಿನ ಅಂಶಗಳು ಎಷ್ಟರಮಟ್ಟಿಗೆ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ತಿಳಿಸಿಕೊಡುವ ಕೆಲಸವಾಗಬೇಕು.

ಶಿಕ್ಷಕರೆಂದರೆ ಸತ್ಯದ ಮಾರ್ಗವನ್ನು ಅನುಸರಿಸುವ, ಎಂತಹ ಕಠಿಣ ಸಂದರ್ಭ ಬಂದರೂ ಎದೆಗುಂದದೆ, ತಾಳ್ಮೆಯನ್ನು ಕಳೆದುಕೊಳ್ಳದೆ, ಒತ್ತಡಕ್ಕೆೆ ಒಳಗಾಗದೆ, ಪ್ರಾಮಾಣಿಕತೆಯಿಂದ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುವವರಾಗಬೇಕು. ಸಮಾಜದಲ್ಲಿನ ಎಲ್ಲರಿಗೂ ಮಾದರಿ ವ್ಯಕ್ತಿಯಾಗಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವವರಾಗಬೇಕು. ಭವಿಷ್ಯದಲ್ಲಿ ಎದುರಾಗುವಂತಹ ಕ್ಲಿಷ್ಟಕರ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಬೇಕು. ಸಮಾಜದಲ್ಲಿ ವೃತ್ತಿಬದ್ಧತೆಯನ್ನು ಇಟ್ಟುಕೊಂಡು ಸೇವೆಯನ್ನು ಸಲ್ಲಿಸಬೇಕು.

ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಪಾಠ ಮಾಡದೆ ವಿದ್ಯಾರ್ಥಿಗಳಿಗೆ ಅಂಕ ನೀಡುವ ಪರಿಸ್ಥಿತಿ ಉದ್ಭವವಾಗಿದೆ ಹಾಗೂ ರಾಜಕೀಯ ಹಿಂಬಾಲಕರಾಗಿ ಪಾಠ ಪ್ರವಚನ ಮಾಡದೆ, ವಿದ್ಯಾರ್ಥಿಗಳ ತಪ್ಪನ್ನು ತಿದ್ದದೇ ಇನ್ನೊಂದು ತಪ್ಪಿಗೆ ಅವಕಾಶವನ್ನು ಮಾಡಿಕೊಡುತ್ತಿರುವುದು ಬೇಜವಾಬ್ದಾರಿತನವನ್ನು ಎತ್ತಿತೋರಿಸುತ್ತದೆ. ವಿದ್ಯಾರ್ಥಿಗಳ ಜೊತೆ ಸೇರಿ ಶಿಕ್ಷಕರು ಕೂಡ ತಪ್ಪುಮಾಡುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದು. ಶಿಕ್ಷಕರು ಅಂದರೆ ಪ್ರತಿನಿತ್ಯ ಜ್ಞಾನವನ್ನು ಪಡೆಯುವ ಮತ್ತು ಹಂಚಿಕೊಳ್ಳುವ ಜ್ಞಾನದಾಹಿಗಳಾಗಬೇಕೇ ಹೊರತು ವ್ಯಾಮೋಹ ದಾಹಿಗಳಾಗಿರುವುದು ದುರದೃಷ್ಟಕರ ಬೆಳವಣಿಗೆ.

ಈಗಂತೂ ಎಲ್ಲಿ ನೋಡಿದರೂ ಅವ್ಯವಹಾರದ್ದೇ ಹಾವಳಿ. ಅದರಲ್ಲೂ ಹೆಚ್ಚಿನದಾಗಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳಲ್ಲೇ ಹೆಚ್ಚಿರುವುದು ನಮ್ಮ ಸಮಾಜದ ದುರಂತ ಎಂದೇ ಹೇಳಬಹುದು. ವಿದ್ಯಾರ್ಥಿಗಳ ದಾಖಲಾತಿಯಲ್ಲಿ, ಆಂತರಿಕ ಪರೀಕ್ಷೆಗಳಲ್ಲಿ, ಪರೀಕ್ಷೆಗಳನ್ನು ನಡೆಸುವಿಕೆಯಲ್ಲಿ, ಫಲಿತಾಂಶಗಳನ್ನು ನೀಡುವಿಕೆಯಲ್ಲಿ, ಮತ್ತು ಶಿಕ್ಷಕರ ನೇಮಕಾತಿಯಲ್ಲಿ ಅವ್ಯವಹಾರಗಳು ಹೆಚ್ಚಾಗಿರುವುದು ಗುಟ್ಟಾಗಿ ಉಳಿದಿಲ್ಲ. ಒಟ್ಟಾರೆ ಶಿಕ್ಷಣ ವ್ಯವಸ್ಥೆಯೇ ಅವ್ಯವಹಾರಗಳ ಗೂಡಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಶಿಕ್ಷಕರು ತಮ್ಮನ್ನು ತಾವು ಒರೆಗೆ ಹಚ್ಚಿಕೊಳ್ಳುವ ಕಾಲವಾಗಿದೆ.

ಶಿಕ್ಷಣದಿಂದ ಸಮಾಜದಲ್ಲಿ ಸಾಮರಸ್ಯ, ಗೌರವ, ಪ್ರೀತಿ, ಜವಾಬ್ದಾರಿ ಹೆಚ್ಚಾಗಬೇಕೇ ಹೊರತು ಸಮಾಜವನ್ನು ತಪ್ಪುದಾರಿಗೆ ಎಳೆಯುವಂತಹ ಕೆಲಸವಾಗಬಾರದು. ಶಿಕ್ಷಕರೇ ಈ ದೇಶದ ಆಸ್ತಿ.ಶಿಕ್ಷಕ ಭವಿಷ್ಯದ ನಿರ್ಮಾತೃ. ದೇಶದ ಮತ್ತು ಮಾನವ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಗ್ರಗಣ್ಯವಾದುದು. ಶಿಕ್ಷಕರಿಗೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ ಇದನ್ನು ಎಂದಿಗೂ ಮರೆಯಬಾರದು. ಆದುದರಿಂದ ಶಿಕ್ಷಕರಾಗಿರುವವರು ಮತ್ತು ಶಿಕ್ಷಕರಾಗಬಯಸುವವರು ಈ ಮೇಲಿನ ಅಂಶಗಳನ್ನು ಪರಿಗಣಿಸಿ, ಆದರ್ಶ ಶಿಕ್ಷಕನಾಗುವ ಮೂಲಕ ಇತರರಿಗೆ, ಇಡೀ ಮನುಕುಲಕ್ಕೆ ಮಾದರಿಯಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News