ಮಾಧ್ಯಮಗಳಲ್ಲಿ ಬೇಡವೇ ಮೀಸಲಾತಿ?

Update: 2020-03-10 05:39 GMT

ಮಾಧ್ಯಮಗಳು ಸಮಾಜದ ಕನ್ನಡಿ. ಜನಸಾಮಾನ್ಯರು ನಮ್ಮ ನಡುವೆ ಏನು ನಡೆಯುತ್ತಿದೆ ಎನ್ನುವುದನ್ನು ಗ್ರಹಿಸುವುದು ಬಹುತೇಕ ಮಾಧ್ಯಮಗಳ ಮೂಲಕ. ಯಾವುದೂ ಚೆನ್ನಾಗಿಲ್ಲದಿದ್ದರೂ, ಮಾಧ್ಯಮಗಳು ‘ಎಲ್ಲವೂ ಚೆನ್ನಾಗಿದೆ’ ಎಂದು ಬರೆಯುತ್ತಾ ಹೋದರೆ ‘ಎಲ್ಲವೂ ಚೆನ್ನಾಗಿದೆ’ ಎಂದೇ ನಂಬಿ ನೆಮ್ಮದಿ ಪಡುವ ಜನರಿದ್ದಾರೆ. ಬಡವರ ಮೇಲೆ, ಕಾರ್ಮಿಕರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ, ಅದು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟವಾಗದೇ ಇದ್ದರೆ, ಅಂತಹದು ನಡೆಯುವುದೇ ಇಲ್ಲ ಎಂದು ನಂಬಿ ಬದುಕುವವರೂ ಇದ್ದಾರೆ. ಇಂದು ಮಾಧ್ಯಮಗಳು ಉಳ್ಳವರ ಅಥವಾ ರಾಜಕಾರಣಿಗಳ ಮುಖವಾಣಿಯಾಗಿ ಕೆಲಸ ಮಾಡುತ್ತಿವೆ ಎನ್ನುವಂತಹ ವ್ಯಾಪಕ ಆರೋಪಗಳಿವೆ. ಈ ಆರೋಪ ನಿಜವೂ ಹೌದು. ಪತ್ರಿಕೆ ತನ್ನ ಬದ್ಧತೆಯನ್ನು ಬದಿಗಿಟ್ಟು ಸಂಪೂರ್ಣ ಉದ್ಯಮವಾಗಿರುವ ದಿನಗಳು ಇವು. ಪತ್ರಿಕೆಗಳು ಓದುಗರ ಹಣದಿಂದ ನಡೆಯದೇ, ರಾಜಕಾರಣಿಗಳು, ಉದ್ಯಮಿಗಳು ನೀಡುವ ಜಾಹೀರಾತಿನ ಹಣದಿಂದ ನಡೆಯುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಓದುಗರು ಕೈ ಬಿಟ್ಟರೂ ಸರಿ, ಜಾಹೀರಾತುದಾರರು ಕೈ ಬಿಡಬಾರದು ಎನ್ನುವಂತಹ ದಯನೀಯ ಸ್ಥಿತಿಯಲ್ಲಿ ಪತ್ರಿಕೋದ್ಯಮ ಮತ್ತು ಟಿವಿ ವಾಹಿನಿಗಳು ಸಿಲುಕಿಕೊಂಡಿವೆ. ಆದುದರಿಂದಲೇ, ಪತ್ರಿಕೆಗಳು ಉದ್ಯಮಿಗಳು ಮತ್ತು ರಾಜಕಾರಣಿಗಳ ಮೂಗಿನ ನೇರಕ್ಕೆ ಸುದ್ದಿಗಳನ್ನು ಪ್ರಕಟಿಸುತ್ತವೆ.

ಇದೇ ಸಂದರ್ಭದಲ್ಲಿ ಸುದ್ದಿಗಳನ್ನು ಜಾಹೀರಾತುದಾರರು ಮತ್ತು ಉದ್ಯಮಿಗಳಾಚೆಗೆ ಒಂದು ಶಕ್ತಿ ನಿಯಂತ್ರಿಸುತ್ತದೆ ಎನ್ನುವ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಅನೇಕ ಸಂದರ್ಭದಲ್ಲಿ ಉದ್ಯಮಿಗಳು ವಾಣಿಜ್ಯಾಸಕ್ತಿಯನ್ನಷ್ಟೇ ಹೊಂದಿರುತ್ತಾರೆ. ಆದರೆ ಈ ಶಕ್ತಿ ಅದಕ್ಕಿಂತ ಭಿನ್ನವಾದುದು ಮತ್ತು ಇದು ಪತ್ರಿಕೆಯ ಒಳಗೇ ಇದ್ದು ಕೆಲಸ ಮಾಡುವ ಶಕ್ತಿಗಳಾಗಿವೆ. ಅದನ್ನು ನಾವು ‘ಜಾತಿ ಶಕ್ತಿ ’ಎಂದು ಕರೆಯಬಹುದಾಗಿದೆ. ಈ ದೇಶದ ಬಡವರ, ದಲಿತರ, ಶೋಷಿತ ಸಮುದಾಯದ ಸುದ್ದಿಗಳನ್ನು ಪತ್ರಿಕೆಗಳು ಯಾಕೆ ಆದ್ಯತೆಯ ಮೇಲೆ ಪ್ರಕಟಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರವೆಂದರೆ, ಈ ದೇಶದ ಬಹುತೇಕ ಮಾಧ್ಯಮಗಳೊಳಗಿರುವ ಶಕ್ತಿಗಳು ಮೇಲ್ ಜಾತಿಗೆ ಸೇರಿದವರು. ದಲಿತರ, ಶೋಷಿತರ ಸಮಸ್ಯೆಗಳನ್ನು ಶೋಷಣೆಯ ಭಾಗವಾಗಿರುವ ಮೇಲ್‌ಜಾತಿಯ ಪ್ರತಿನಿಧಿ ಆಸಕ್ತಿಯಿಂದ ಮಾಧ್ಯಮಗಳಲ್ಲಿ ಪ್ರಕಟಿಸುತ್ತಾನೆ ಎನ್ನುವ ನಿರೀಕ್ಷೆಯನ್ನು ಇಡುವಂತಿಲ್ಲ. ಆದುದರಿಂದಲೇ, ಇಂದಿನ ಬಹುತೇಕ ಮಾಧ್ಯಮಗಳು ಮೀಸಲಾತಿಯ ವಿರುದ್ಧ ಮಾತನಾಡುವುದಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಿವೆ.

ದಲಿತರ ಮೇಲಿನ ದೌರ್ಜನ್ಯಗಳು ಪತ್ರಿಕೆಗಳ ಮುಖಪುಟದ ಸುದ್ದಿಯಾಗುವ ಅರ್ಹತೆಯನ್ನು ಪಡೆಯದೇ ಇರುವುದಕ್ಕೂ ಪತ್ರಿಕೆಯೊಳಗಿರುವ ಮೇಲ್‌ಜಾತಿಯ ಶಕ್ತಿಗಳೇ ಕಾರಣ. ಅನೇಕ ಸಂದರ್ಭದಲ್ಲಿ ಪತ್ರಿಕೆಗೆ ಬಂಡವಾಳ ಹೂಡಿದವರು ಶೂದ್ರರಾಗಿದ್ದರೂ, ಅಲ್ಲಿ ಸುದ್ದಿಗಳನ್ನು ಆಯ್ಕೆ ಮಾಡುವ ಶಕ್ತಿಗಳು ಮನುವಾದಿ ಶಕ್ತಿಗಳೇ ಆಗಿರುತ್ತವೆ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಬೇಕಾದ ಪತ್ರಿಕೆಗಳ ಒಳಗೇ ಸಾಮಾಜಿಕ ಅನ್ಯಾಯಗಳನ್ನು ಬೆಂಬಲಿಸುವ ಶಕ್ತಿಗಳಿದ್ದರೆ ಆ ಪತ್ರಿಕೆಯಿಂದ ಸಮಾಜಕ್ಕೆ ಹಾನಿಯಲ್ಲದೇ ಯಾವ ಲಾಭವೂ ಇಲ್ಲ. ಪತ್ರಿಕೆಗಳನ್ನು ನಿಯಂತ್ರಿಸುವ ಉದ್ಯಮಿಗಳಿಗಿಂತಲೂ ಮೇಲ್‌ವರ್ಣೀಯ ಜಾತಿ ರಾಜಕೀಯ ಹಿತಾಸಕ್ತಿಯನ್ನು ಹೊಂದಿರುವ ಪತ್ರಿಕೆಯೊಳಗಿರುವ ಶಕ್ತಿಗಳೇ ಅತ್ಯಂತ ಅಪಾಯಕಾರಿ.

ಇತ್ತೀಚೆಗೆ ನ್ಯೂಸ್‌ಲ್ಯಾಂಡ್ರಿ ಮಾಧ್ಯಮ ಸಂಸ್ಥೆ ಮತ್ತು ಆಕ್ಸ್‌ಫಾಮ್ ಜಂಟಿಯಾಗಿ ಮಾಧ್ಯಮ ವಲಯದಲ್ಲಿ ಒಂದು ಸಮೀಕ್ಷೆಯನ್ನು ಮಾಡಿತ್ತು. ಈ ಸಮೀಕ್ಷೆ ಮಾಧ್ಯಮಗಳು ಯಾಕೆ ಇಂದು ಸಂಘಪರಿವಾರ ಮತ್ತು ಪುರೋಹಿತ ಶಾಹಿಯ ಬಾಲ ಹಿಡಿದು ಮುನ್ನಡೆಯುತ್ತಿದೆ, ಶೋಷಿತರು ಮತ್ತು ದುರ್ಬಲ ಸಮುದಾಯವನ್ನು ಯಾಕೆ ಸುದ್ದಿವಲಯದಿಂದಲೇ ಹೊರಗಿಟ್ಟಿವೆ ಎನ್ನುವ ಅಂಶವನ್ನು ಬಹಿರಂಗಪಡಿಸಿದೆ. ಟಿವಿ ಸುದ್ದಿವಾಹಿನಿಗಳಲ್ಲಿ ಮುಂಚೂಣಿ ಚರ್ಚಾ ಕಾರ್ಯಕ್ರಮಗಳ ಪ್ರತಿ ನಾಲ್ವರು ನಿರೂಪಕರಲ್ಲಿ ಮೂವರು ಮೇಲ್‌ಜಾತಿಗೆ ಸೇರಿದವರಾಗಿದ್ದಾರೆ. ಇವರಲ್ಲಿ ದಲಿತ ಅಥವಾ ಹಿಂದುಳಿದ ವರ್ಗಗಳ ಗುಂಪಿಗೆ ಸೇರಿದ ಒಬ್ಬನೇ ಒಬ್ಬ ನಿರೂಪಕನಿಲ್ಲ ಎನ್ನುವ ಅಂಶವನ್ನು ಸಮೀಕ್ಷೆ ಬಹಿರಂಗಪಡಿಸಿದೆ. 12 ಮ್ಯಾಗಝಿನ್‌ಗಳ ಮುಖಪುಟದಲ್ಲಿ ಕಾಣಿಸಿಕೊಂಡಿದ್ದ 972 ಲೇಖನಗಳ ಪೈಕಿ ಕೇವಲ 10 ಲೇಖನಗಳು ಮಾತ್ರ ಜಾತಿ ಸಂಬಂಧಿತ ವಿಷಯಗಳ ಕುರಿತಾಗಿದ್ದವು. ಇಂಗ್ಲಿಷ್ ದೈನಿಕಗಳ ಎಲ್ಲ ಲೇಖನಗಳ ಪೈಕಿ ದಲಿತರು ಮತ್ತು ಆದಿವಾಸಿಗಳು ಬರೆದ ಲೇಖನಗಳ ಸಂಖ್ಯೆ ಶೇ. 5ನ್ನು ದಾಟಿಲ್ಲ. ಇಂಗ್ಲಿಷ್ ಸುದ್ದಿ ವಾಹಿನಿಗಳ ಪ್ಯಾನಲಿಸ್ಟ್‌ಗಳ ಪೈಕಿ ಶೇ. 5.6ರಷ್ಟು ಪರಿಶಿಷ್ಟ ಜಾತಿಗಳಿಗೆ ಸೇರಿದ್ದು, ಪರಿಶಿಷ್ಟ ಪಂಗಡಗಳ ಪಾಲು ಶೇ. 1ರಷ್ಟೂ ಇಲ್ಲ. ಎಲ್ಲಕ್ಕಿಂತ ವಿಪರ್ಯಾಸವೆಂದರೆ, ಜಾತಿ ವಿಷಯಗಳ ಕುರಿತಂತೆ ಚರ್ಚೆ ನಡೆಯುವುದಿದ್ದರೆ ಅಲ್ಲಿಯೂ ಶೇ. 62ರಷ್ಟು ನಿರೂಪಕರು ಮೇಲ್‌ಜಾತಿ ಅಥವಾ ಸಾಮಾನ್ಯ ವರ್ಗಕ್ಕೆ ಸೇರಿದವರು. ಇಂಗ್ಲಿಷ್ ಟಿವಿ ವಾಹಿನಿಗಳಲ್ಲಿ ಶೇ. 89ರಷ್ಟು ಮುಖ್ಯಸ್ಥರು ಸಾಮಾನ್ಯವರ್ಗ ಅಥವಾ ಮೇಲ್‌ವರ್ಣೀಯರಾಗಿದ್ದಾರೆ. ಹಿಂದಿ ಸುದ್ದಿ ವಾಹಿನಿಗಳಲ್ಲಂತೂ ನಾಯಕತ್ವ ಹುದ್ದೆಗಳಲ್ಲಿ ಶೇ. 100ರಷ್ಟು ಮೇಲ್ ಜಾತಿಗಳಿಗೆ ಸೇರಿದವರಾಗಿದ್ದಾರೆ. ಮುದ್ರಣ ಮಾಧ್ಯಮಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ವೃತ್ತ ಪತ್ರಿಕೆಗಳಲ್ಲಿ ಸಮೀಕ್ಷೆಗೊಳಗಾಗಿರುವ ಆರು ಇಂಗ್ಲಿಷ್ ಮತ್ತು ಏಳು ಹಿಂದಿ ವೃತ್ತ ಪತ್ರಿಕೆಗಳಲ್ಲಿ ಶೋಷಿತ ಜಾತಿ ಗುಂಪುಗಳಿಗೆ ಸೇರಿದ ಒಬ್ಬನೇ ಒಬ್ಬ ಪತ್ರಕರ್ತನೂ ಮುಖ್ಯಸ್ಥ ಹುದ್ದೆಯಲ್ಲಿ ಇಲ್ಲ. ಕೆಲವು ನಿರ್ದಿಷ್ಟ ಪತ್ರಿಕೆಗಳಲ್ಲಿ ಜಾತಿ ಶೋಷಣೆಗೆ ಸಂಬಂಧಪಟ್ಟ ಲೇಖನಗಳು ಪ್ರಕಟವಾಗಿದೆಯಾದರೂ ಅದನ್ನು ಬರೆದವರೂ ಮೇಲ್‌ಜಾತಿಗೆ ಸೇರಿದವರೇ ಆಗಿದ್ದಾರೆ. ಜಾತಿ ಶೋಷಣೆ ಈ ದೇಶದ ಅಭಿವೃದ್ಧಿಗೆ ಅತ್ಯಂತ ಮಾರಕವಾಗಿದೆ. ಈ ಶೋಷಣೆಯನ್ನು ಪತ್ರಿಕೆಗಳು ಎತ್ತಿ ಹಿಡಿಯದೇ ದೇಶದ ಸ್ಥಿತಿಯನ್ನು ಸರಿಪಡಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಅದನ್ನು ಮೇಲ್ ಜಾತಿಯ ಪತ್ರಕರ್ತರಿಂದಲೇ ನಿರೀಕ್ಷಿಸುವಂತಹ ಸ್ಥಿತಿ ಈ ದೇಶದಲ್ಲಿದೆ. ಈ ದೇಶದ ಮಾಧ್ಯಮಗಳು ಯಾಕೆ ದಲಿತರ ಮೇಲಿನ ಶೋಷಣೆ, ಜಾತಿ ದೌರ್ಜನ್ಯ, ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಆಸಕ್ತಿ ಹೊಂದಿಲ್ಲ ಎನ್ನುವುದಕ್ಕೆ ಉತ್ತರ ಮೇಲಿನ ಸಮೀಕ್ಷೆಯಲ್ಲಿದೆ.

ಹೀಗೆಂದು ದಲಿತರು, ಹಿಂದುಳಿದವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದಲ್ಲಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದವರು ಇಲ್ಲವೆಂದು ಅರ್ಥವಲ್ಲ. ಮೇಲಿನ ಪತ್ರಿಕೆಗಳ ಬಹುತೇಕ ಮುಖ್ಯಸ್ಥರು ಮೇಲ್‌ಜಾತಿಯ ಕೈಯಲ್ಲಿರುವುದರಿಂದ ಈ ವರ್ಗವನ್ನು ಪತ್ರಿಕೋದ್ಯಮದಲ್ಲಿ ಬೆಳೆಯುವುದಕ್ಕೆ ಅವಕಾಶವನ್ನು ನೀಡುತ್ತಿಲ್ಲ. ಜೊತೆಗೆ ಪತ್ರಿಕೆಗಳಲ್ಲಿ ಮೇಲ್‌ವರ್ಣೀಯ ಪತ್ರಕರ್ತರು ಅತಿ ಹೆಚ್ಚು ಕಾಣಿಸಿಕೊಳ್ಳುವುದಕ್ಕೂ ಈ ಮುಖ್ಯಸ್ಥರೇ ಕಾರಣವಾಗಿದ್ದಾರೆ. ಶೋಷಿತರ ಮೇಲೆ ನಡೆಯುವ ದೌರ್ಜನ್ಯಗಳು ಮಾಧ್ಯಮಗಳಲ್ಲಿ ಮುಖ್ಯ ಸುದ್ದಿಯಾಗಬೇಕಾದರೆ ಶೋಷಿತ ಸಮುದಾಯದಿಂದ ಬಂದ ಪತ್ರಕರ್ತರು ಮಾಧ್ಯಮದೊಳಗೆ ಪ್ರವೇಶಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮೊತ್ತ ಮೊದಲು ಮಾಧ್ಯಮಗಳು ತನಗೆ ತಾನೇ ಮೀಸಲಾತಿ ನೀತಿಯನ್ನು ಹೇರಿಕೊಳ್ಳಬೇಕು. ಶೋಷಿತ ಸಮುದಾಯದಿಂದ ಬಂದ ಪ್ರತಿಭಾವಂತ ಪತ್ರಕರ್ತರಿಗೆ ಆದ್ಯತೆಯ ಮೇಲೆ ಅವಕಾಶ ಸಿಕ್ಕಾಗ ಮಾತ್ರ ಪತ್ರಿಕೆಗಳು ಶೋಷಿತ, ದಲಿತ, ಅಲ್ಪಸಂಖ್ಯಾತರ ಪರವಾಗಿ ಮೂಡಿ ಬರಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News