ಅಸ್ಸಾಂನಲ್ಲಿ ಗೃಹ ಬಂಧನ ವಿಚಾರ: ಸದನದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಸವಾಲು

Update: 2020-03-10 12:35 GMT

ಬೆಂಗಳೂರು, ಮಾ.10: ಅಸ್ಸಾಂನಲ್ಲಿ ಗೃಹ ಬಂಧನದಲ್ಲಿರುವ ಒಬ್ಬರ ಹೆಸರು ಹೇಳಿದರೂ ನಾನು ನನ್ನ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬಿಜೆಪಿ ಸದಸ್ಯ ರವಿಕುಮಾರ್ ಇಂದಿಲ್ಲಿ ಸವಾಲು ಹಾಕಿದರು.

ಮಂಗಳವಾರ ಪರಿಷತ್‌ನಲ್ಲಿ ಭಾರತದ ಸಂವಿಧಾನದ ಮೇಲೆ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಮಾತನಾಡುತ್ತಾ, ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಗೊಳಿಸಿದರು. ಆ ಬಳಿಕ ಸುಮಾರು 18 ಲಕ್ಷ ಜನರನ್ನು ಗೃಹಬಂಧನದಲ್ಲಿಡಲಾಗಿದೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ರವಿಕುಮಾರ್, ಸದನಕ್ಕೆ ತಪ್ಪು ಮಾಹಿತಿ ನೀಡಬಾರದು. ಅಲ್ಲಿ ಗೃಹ ಬಂಧನದಲ್ಲಿಟ್ಟಿರುವ ಒಬ್ಬರ ಹೆಸರು ಹೇಳಲಿ. ಈಗಲೇ ನಾನು ರಾಜೀನಾಮೆ ನೀಡುವೆ ಎಂದು ಸವಾಲು ಹಾಕಿದರು.

ಇದೇ ವೇಳೆ ಸಚಿವ ಸಿ.ಟಿ.ರವಿ ಮಾತನಾಡಿ, ಅಸ್ಸಾಂನಲ್ಲಿ ಯಾರನ್ನೂ ಗೃಹ ಬಂಧನದಲ್ಲಿಟ್ಟಿಲ್ಲ. ಅಲ್ಲದೆ, ಈ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಆರಂಭ ಮಾಡಿದ್ದು, ನಿಮ್ಮದೇ ಪಕ್ಷದವರಾದ ರಾಜೀವ್‌ಗಾಂಧಿ. ಈಗ ಗೋಸುಂಬೆಗಳ ರೀತಿ ಬಣ್ಣ ಬದಲಾಯಿಸುತ್ತಿದ್ದೀರಾ ಎಂದು ಟೀಕಿಸಿದರು.

ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಎದ್ದುನಿಂತು, ಐವನ್ ಡಿಸೋಜಾ ಮಾತನಾಡಲು ಅವಕಾಶ ನೀಡಿ. ಅವರಿಗೆ ಬೇಕಾದನ್ನು ಮಾತನಾಡಲಿ. ನೀವು ಎಲ್ಲವನ್ನೂ ಬರೆದಿಟ್ಟುಕೊಂಡು, ಅನಂತರ ನೀವು ಮಾತನಾಡಿ ಎಂದು ಹೇಳಿದರು. ಈ ವೇಳೆ ಮಾತನಾಡಿದ ರವಿಕುಮಾರ್, ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡಲು ನಾವು ಬಿಡಲ್ಲ. ಸುಮ್ಮನೇ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿಯ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ಅವರು ಹೇಳುವುದನ್ನು ಎಲ್ಲ ಕೇಳಿಕೊಂಡು ನಾವು ಸುಮ್ಮನೆ ಕೂರಲು ಆಗಲ್ಲ ಎನ್ನುತ್ತಿದ್ದಂತೆಯೇ, ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಮಾತನಾಡಿ, ಸುಮ್ಮನೇ ವಿವಾದ ಮಾಡಬಾರದು. ನಾವಿಂದು ಸಂವಿಧಾನದ ಮೇಲೆ ಚರ್ಚೆ ಮಾಡುತ್ತಿದ್ದು, ಮೇಲ್ಮನೆಯಿಂದ ಕೆಳಮನೆ ಕಲಿಯಬೇಕಿದೆ. ಆದರೆ, ಅವರಿಂದ ನಾವಿಂದು ಕಲಿಯಬೇಕಾಗುತ್ತಿದೆ. ವಿಷಯವನ್ನು ಇತಿಮಿತಿಯಲ್ಲಿ ಮಾತನಾಡಿ ಎಂದು ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News