ದಿಲ್ಲಿಯ ಮಾರಕ ದಂಗೆಗಳು: ವಿದೇಶಿ ಹೂಡಿಕೆದಾರರಿಗೆ ಭಾರತದ ಬಗ್ಗೆ ಆಕರ್ಷಣೆ ಉಳಿದೀತೇ?

Update: 2020-03-10 18:24 GMT

ಒಂದು ದಶಕದ ಅವಧಿಯಲ್ಲಿ ಭಾರೀ ಆರ್ಥಿಕ ಕುಸಿತ ಕಂಡಿದ್ದರೂ ಭಾರತವು ಹೂಡಿಕೆದಾರರಿಗೆ ಒಂದು ಮುಖ್ಯ ಆಕರ್ಷಣೆ ಹೊಂದಿತ್ತು, ಇದಕ್ಕೆ ಕಾರಣ ರಾಜಕೀಯ ಸ್ಥಿರತೆ. ಈಗ ಇದು ಇಲ್ಲವಾಗಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದಾಗ 46ಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ ದಿಲ್ಲಿಯ ಹಿಂಸೆ, ಭಾರತದಲ್ಲಿ ಹೂಡಿಕೆ ಮಾಡುವ ಬಗ್ಗೆ ವಿದೇಶಿ ಹೂಡಿಕೆದಾರರು ಮತ್ತೆ ಮತ್ತೆ ಯೋಚಿಸಬೇಕೇ? ಎಂಬ ಆತಂಕ ವಿಶ್ವದೆಲ್ಲೆಡೆ ಮನೆ ಮಾಡಿದೆ.

ಸುಮಾರು ಒಂದು ವರ್ಷದ ಹಿಂದಿನವರೆಗೆ ಭಾರತ ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಒಂದು ಪ್ರಮುಖ ಅರ್ಥ ವ್ಯವಸ್ಥೆಯಾಗಿತ್ತು. ಆದರೆ ಸ್ವಲ್ಪವೇ ಸಮಯದಲ್ಲಿ ಕುಸಿದ ಗ್ರಾಹಕರ ಬೇಡಿಕೆ, ಗ್ರಾಮೀಣ ಸಂಕಷ್ಟ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾವತಿಯಾಗದ ಸಾಲಗಳಿಂದಾಗಿ ಆರ್ಥಿಕ ಕುಸಿತ ಆರಂಭಗೊಂಡಿತು. ಆದರೂ ಕಳೆದ ಮೇ ತಿಂಗಳಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಂದಿನಿಂದ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಬಹುಸಂಖ್ಯಾತ ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಗೋಡೆಗಳನ್ನು ನಿರ್ಮಿಸುವ ವಿಭಾಜಕ ಕ್ರಮಗಳನ್ನು ತೆಗೆದುಕೊಂಡಿದೆ. ಇದರಿಂದಾಗಿ ದೇಶದಲ್ಲಿ ನಡೆದ ಭಾರೀ ಪ್ರತಿಭಟನೆಗಳಿಂದಾಗಿ ವಿದೇಶಿ ಹೂಡಿಕೆದಾರರ ಮಧ್ಯೆ ಭಾರತದ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ ಎನ್ನುತ್ತಾರೆ ವಿಮರ್ಶಕರು.

ಕಳೆದ ಚುನಾವಣೆಯ ಬಳಿಕ, ಹೂಡಿಕೆದಾರರಿಗೆ ಭಾರತದ ಬಗ್ಗೆ ನಿರಾಶೆಯಾಗಿದೆ ಹಾಗೂ ಭಾರತದಲ್ಲಿ ಬಂಡವಾಳ ಹೂಡುವ ಬಗ್ಗೆ ಅವರು ಹೆಚ್ಚು ಹೆಚ್ಚು ಜಾಗ್ರತೆ ವಹಿಸುತ್ತಿದ್ದಾರೆ ಎಂದಿದ್ದಾರೆ 352 ಬಿಲಿಯ ಡಾಲರ್ ಮೊತ್ತದ ವಹಿವಾಟು ನಡೆಸುವ ಏಶ್ಯನ್ ಈಕ್ವಿಟೀಸ್ ಮುಖ್ಯಸ್ಥ ಜಾನ್‌ಲವ್. ಹೂಡಿಕೆದಾರರಿಗೆ ಹೀಗೆ ಎಚ್ಚರಿಕೆ ನೀಡುತ್ತಿರುವವರು ಇವರೊಬ್ಬರೇ ಅಲ್ಲ.

ಫೆಬ್ರವರಿಯಲ್ಲಿ ಪ್ರತಿಭಟನಾಕಾರರು ರಸ್ತೆಗಳನ್ನು ತಡೆಯುವುದು ಮೂರನೆಯ ತಿಂಗಳಿಗೆ ಮುಂದುವರಿದಾಗ 64 ಬಿಲಿಯ ಡಾಲರ್ ವೌಲ್ಯದ ಅಮೆರಿಕದ ಹೂಡಿಕೆ ಸಂಸ್ಥೆ ವಿಸ್ಡಮ್ ಟ್ರೀ ಇನ್‌ವೆಸ್ಟ್‌ಮೆಂಟ್ ಇಂಕ್ ಹೇಳಿತು; ಹೆಚ್ಚುತ್ತಿರುವ ರಾಜಕೀಯ ಹಾಗೂ ಸಾಮಾಜಿಕ ಬಿಗಿತಗಳು ದೇಶದ ಆರ್ಥಿಕ ಚೇತರಿಕೆಯನ್ನು ವಿಳಂಬಿಸುತ್ತವೆ. 453 ಬಿಲಿಯ ಡಾಲರ್ ಹೂಡಿಕೆ ಮಾಡಿರುವ ವೆಸ್ಟರ್ನ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿ, ತಾನು ಭಾರತ ಸರಕಾರದ ಬಾಂಡ್ ಹೋಲ್ಡಿಂಗ್ಸ್‌ಗಳನ್ನು ಕಡಿಮೆ ಮಾಡುತ್ತಿರುವುದಾಗಿ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಕಾಶ್ಮೀರ ಪ್ರದೇಶದಲ್ಲಿ ಬಿಗಿತಗಳುಂಟಾದ ಹಿನ್ನೆಲೆಯಲ್ಲಿ ಜನವರಿಯಲ್ಲಿ ಹೇಳಿತ್ತು. ಲಂಡನ್‌ನಲ್ಲಿ ಮುಖ್ಯ ಕಚೇರಿ ಇರುವ ಒಂದು ಥಿಂಕ್-ಟ್ಯಾಂಕ್ ಆಗಿರುವ ಚತಮ್ ಹೌಸ್‌ನ ಅಧ್ಯಕ್ಷ ಜಿಮ್ ಓನಿಲ್ ಭಾರತದಲ್ಲಿ ನಡೆಯುತ್ತಿರುವ ಹಿಂಸೆ ಹೂಡಿಕೆದಾರರಲ್ಲಿ ನಿರುತ್ಸಾಹ ಮೂಡಿಸುತ್ತಿದೆ ಎಂದಿದ್ದಾರೆ.

ಧರ್ಮಾಧಾರಿತ ಒಂದು ಕಾನೂನಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಮುಸ್ಲಿಮರ ವಿರುದ್ಧ ತಾರತಮ್ಯ ಎಸಗಲು ಮೋದಿಯವರ ಹಿಂದೂ ರಾಷ್ಟ್ರೀಯವಾದಿ ಸರಕಾರ ತೆಗೆದುಕೊಂಡ ಕ್ರಮವಾಗಿದೆ ಎಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

ಮೋದಿಯವರ ಪಕ್ಷದ ಸದಸ್ಯರು ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನಾಕಾರರನ್ನು ದೇಶದ್ರೋಹಿಗಳೆಂದು ಕರೆದಿದ್ದಾರೆ ಮತ್ತು ಸರಕಾರ ದಿಲ್ಲಿ ಹಿಂಸೆಯನ್ನು ತುರ್ತಾಗಿ ಹತ್ತಿಕ್ಕಲು ವಿಫಲವಾಯಿತು. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಸರಕಾರವು ತನ್ನ ವಿವಾದಾಸ್ಪದ ಸಾಮಾಜಿಕ ಕಾರ್ಯಸೂಚಿಯ ಮೇಲೆಯೇ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ; ಇನ್ನಷ್ಟು ಹೆಚ್ಚು ಪ್ರತಿಭಟನೆಗಳು ನಡೆಯಬಹುದಾದ ಅಪಾಯವಿದೆ ಎಂದಿದ್ದಾರೆ, ವಾಶಿಂಗ್ಟನ್‌ನಿಂದ ಕಾರ್ಯಾಚರಿಸುತ್ತಿರುವ ವಿಶ್ಲೇಷಣಕಾರ ಅಖಿಲ್ ಬೆರಿ.

ಮೋದಿಯವರು ಅಭಿವೃದ್ಧಿ ಹಾಗೂ ವರ್ಷವೊಂದರ 10 ಮಿಲಿಯ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿ 2014ರ ಚುನಾವಣೆಗಳಲ್ಲಿ ಭಾರೀ ಬಹುಮತದೊಂದಿಗೆ ಗೆದ್ದರು. ಆದರೆ ಈಗ ದೇಶದ ಮಾಧ್ಯಮಗಳಲ್ಲಿ ಬಿಗಿತಗಳು ಹಾಗೂ ಮಾರಕ ಪ್ರತಿಭಟನೆಗಳೇ ಮುಖಪುಟದ ಸುದ್ದಿಗಳಾಗಿವೆ. ಕಳೆದ ವರ್ಷ ಆರಂಭಿಸಲಾದ ಆರ್ಥಿಕ ಮೂಲ ಚೌಕಟ್ಟಿನ ಸುಧಾರಣೆಗಳು ಹೂಡಿಕೆದಾರರ ಭರವಸೆಗಳನ್ನು ಹೆಚ್ಚಿಸಿದವಾದರೂ ಈ ವರ್ಷ ಆರ್ಥಿಕ ಹಿನ್ನಡೆ ಕುಸಿತ ಇನ್ನಷ್ಟು ತೀವ್ರಗೊಂಡಿತು. ಭಾರತದ ಅರ್ಥ ವ್ಯವಸ್ಥೆ ಕಳೆದ ಆರು ವರ್ಷಗಳಲ್ಲಿ ಕನಿಷ್ಠವಾದ ಶೇ. 4.7ಕ್ಕೆ ಕುಸಿದಿದೆ ಎನ್ನುತ್ತದೆ ಫೆಬ್ರವರಿ 28ರಂದು ಸರಕಾರ ಬಿಡುಗಡೆ ಮಾಡಿದ ದತ್ತಾಂಶ.

ದೇಶದ ಅರ್ಥವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿರುವಾಗ, ಧಾರ್ಮಿಕ ಬಿಗಿತಗಳು ಹೂಡಿಕೆದಾರರು ಭಾರತಕ್ಕೆ ಬೆನ್ನು ಹಾಕುವಂತೆ ಮಾಡಬಲ್ಲವು ಎಂದಿದ್ದಾರೆ, ಲೀಡನ್ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಸೈಮನ್ ಚಾರ್ಟರ್ಡ್.

ಭಾರತದಲ್ಲಿ ಹೂಡಿಕೆ ಮಾಡುವುದು ಕಷ್ಟವಾಗಿದೆ. ಮೋದಿಯವರು ಓರ್ವ ದೊಡ್ಡ ಆರ್ಥಿಕ ಸುಧಾರಕ ಎಂಬ ಕಥಾನಕ ಸತ್ತು ಹೋಗಿದೆ ಎಂದಿದ್ದಾರೆ ಚಾರ್ಟರ್ಡ್. ಕೊರೋನ ವೈರಸ್‌ನಿಂದಾಗಿ ಉಂಟಾಗಿರುವ ಜಾಗತಿಕ ಆರ್ಥಿಕ ಹಿನ್ನಡೆ ಕುಸಿತ ಭಾರತದ ಮೇಲೂ ಪರಿಣಾಮ ಬೀರುತ್ತಾ ದೇಶದ ಆರ್ಥಿಕ ಚೇತರಿಕೆಯನ್ನು ಇನ್ನಷ್ಟು ಸಂಕೀರ್ಣವಾಗಿಸಬಹುದು.

ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಅರ್ಥಶಾಸ್ತ್ರಜ್ಞರಾಗಿರುವ ಅಮಿತೇಂದು ಪಲಿತ್ ಅವರ ಪ್ರಕಾರ, ಟ್ರಂಪ್ ಅವರ ಭಾರತ ಭೇಟಿಯ ವೇಳೆ ನಡೆದ ದಿಲ್ಲಿ ಹಿಂಸೆ ದೇಶದ ಅರ್ಥ ವ್ಯವಸ್ಥೆಯ ಮೇಲೆ ದೀರ್ಘ ಕಾಲಿಕವಾದ ಪರಿಣಾಮ ಬೀರಲಿದೆ. ಇವರು ಭಾರತದ ಹಣಕಾಸು ಸಚಿವಾಲಯಕ್ಕೂ ತಮ್ಮ ಸೇವೆ ಸಲ್ಲಿಸಿದವರು. ಅಂತರ್‌ರಾಷ್ಟ್ರೀಯ ವ್ಯಾಪಾರ ಹಾಗೂ ಬಂಡವಾಳ ಹೂಡಿಕೆಯಲ್ಲಿ ವಿಶೇಷ ಪ್ರಾವೀಣ್ಯ ಹೊಂದಿದವ ರಾಗಿದ್ದಾರೆ. ಇವರು ಹೇಳುವಂತೆ ಕೆಲವು ಹೂಡಿಕೆಗಳನ್ನು ಹೂಡಿಕೆದಾರರು ಹಿಂದಕ್ಕೆ ಪಡೆಯದೇ ಇದ್ದರೂ ಅವರು ತಮ್ಮ ಹೂಡಿಕೆಗಳ ಬಗ್ಗೆ ಮರು ಮೌಲ್ಯಮಾಪನ, ಮರು ಚಿಂತನೆ ನಡೆಸದೆ ಇರುವುದಿಲ್ಲ. ಹೀಗಿರುವಾಗ ಭಾರತವನ್ನು ಬಿಟ್ಟು ವಿದೇಶಿ ಬಂಡವಾಳ ಹೂಡಿಕೆದಾರರು ಬೇರೆ ದೇಶಗಳನ್ನು ಯಾಕೆ ಆಯ್ಕೆ ಮಾಡಬಾರದು? ಯಾಕೆ ಆಯ್ಕೆ ಮಾಡದೆ ಇರುತ್ತಾರೆ?

ಕೃಪೆ: theprint

Writer - ಅರ್ಚನಾ ಚೌಧುರಿ

contributor

Editor - ಅರ್ಚನಾ ಚೌಧುರಿ

contributor

Similar News